ತುಮಕೂರು (ಜೂ.17): ವಯಸ್ಸಿನ ಕಾರಣ ನೀಡಿ ಮುಖ್ಯಮಂತ್ರಿ ಬದಲಾವಣೆ ಸರಿಯಲ್ಲ ಎನ್ನುವ ಮೂಲಕ ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ಅವರು ಯಡಿಯೂರಪ್ಪ ಪರ ಬ್ಯಾಟ್ ಬೀಸಿದ್ದಾರೆ.
ತುಮಕೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವೈಯಕ್ತಿಕವಾಗಿ ನಾನು ಯಡಿಯೂರಪ್ಪನವರ ಬದಲಾವಣೆ ಪರವಿಲ್ಲ. ಯಡಿಯೂರಪ್ಪನವರೆ ಇರಬೇಕು. ಸುಭದ್ರ ಸರ್ಕಾರವಿದ್ದರೆ ಕೆಲಸವಾಗುತ್ತದೆ. ಅಭದ್ರತೆ ಸರ್ಕಾರದಲ್ಲಿ ಬಂದರೆ ಕೆಲಸ ಕಾರ್ಯವಾಗುವುದಿಲ್ಲ ಜನರಿಗೆ ತೊಂದರೆಯಾಗಲಿದೆ. ಬದಲಾವಣೆ ಮಾಡುವುದು ಬಿಡುವುದು ಅವರ ಪಕ್ಷದ ವಿಚಾರ. ಯಡಿಯೂರಪ್ಪ ಇದ್ದರೆ ಕಾಂಗ್ರೆಸ್‌ಗೆ ಹೆಚ್ಚು ಲಾಭ. ಇನ್ ಎಫೆಕ್ಟಿವ್ ಸಿಎಂ ಇದ್ದರೆ ವಿರೋಧ ಪಕ್ಷಕ್ಕೆ ಒಳ್ಳೆಯದು ಎಂದರು.
ಜೆಡಿಎಸ್ ಹಿರಿಯ ನಾಯಕ ಕಾಂಗ್ರೆಸ್‌ಗೆ ಸೇರ್ತಾರೆ : ರಾಜಣ್ಣ! ...
ಸಿದ್ದರಾಮಯ್ಯನವರು ಚಿಕ್ಕನಾಯಕನಹಳ್ಳಿಯಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದೇನೆ. ಕೋಲಾರದಲ್ಲೂ ಸ್ಪರ್ಧಿಸಬೇಕೆಂದು ಇದೆ ಎಂದರು.
ಜಮೀರ್ ಅಹಮದ್ ಕೂಡ ಇದ್ದಾರೆ. ಕಡೆಯಲ್ಲಿ ಏನು ಬೇಕಾದರೂ ಆಗಬಹುದು ಎಂದ ಅವರು ಚುನಾವಣೆಗೆ ಇನ್ನು 2 ವರ್ಷ ಬಾಕಿ ಇದೆ. ಕೊನೆಯ 6 ತಿಂಗಳಿನಲ್ಲಿ ಇದು ತೀರ್ಮಾನವಾಗುತ್ತದೆ. ನನ್ನ ಪ್ರಕಾರ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಅಲ್ಲಿಗೆ ಹೋಗಿ ಬರುವುದಕ್ಕೆ ಅವರಿಗೆ ಸಮಯದ ತೊಂದರೆಯಾಗುತ್ತದೆ ಎಂದರು.
ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಲಿ. ನನಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡುವುದಾಗಿ ತಿಳಿಸಿದರು. ಈ ಬಗ್ಗೆ ಎಲ್ಲಾ ಮುಖಂಡರಿಗೂ ಮನದಟ್ಟು ಮಾಡಿದ್ದೇನೆ ಎಂದ ಅವರು ನಾನು ಬಾಂಬೆಗೆಲ್ಲಾ ಹೋಗುವುದಿಲ್ಲ. ನನ್ನ ಕ್ಷೇತ್ರದಲ್ಲಿ ಇರುತ್ತೇನೆ. ಸಚಿವ ಸ್ಥಾನ ಸಿಕ್ಕ ಮೇಲೆ ಮತ್ತೆ ಎಲೆಕ್ಷನ್‌ಗೆ ನಿಲ್ಲುವುದಿಲ್ಲ ಎಂದರು.