
ಬೆಂಗಳೂರು : ರಾಜಧಾನಿಯಲ್ಲಿ ಡ್ರಗ್ಸ್ ಮಾರಾಟ ಜಾಲದ ಶೋಧನೆಗಿಳಿದಿರುವ ಪೊಲೀಸರು, ಕಳೆದೊಂದು ತಿಂಗಳ ಅವಧಿಯಲ್ಲಿ ಒಂದು ಸಾವಿರ ಡ್ರಗ್ಸ್ ವ್ಯಸನಿಗಳನ್ನು ಬಂಧಿಸಿ ₹8.19 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಜ.1 ರಿಂದ ಫೆ.7 ವರೆಗೆ ಮಾದಕ ವಸ್ತು ಸಾಗಾಣಿಕೆ ಹಾಗೂ ಮಾರಾಟಕ್ಕೆ ಸಂಬಂಧಿಸಿದ ಚಟುವಟಿಕೆಗಳ ನಿಯಂತ್ರಣಕ್ಕೆ ವ್ಯಾಪಕ ಕಾರ್ಯಾಚರಣೆ ನಡೆಸಲಾಯಿತು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಡ್ರಗ್ಸ್ ಉತ್ಪಾದನೆ ಮತ್ತು ಮಾರಾಟ ಶಂಕೆ ಮೇರೆಗೆ 297 ರಾಸಾಯನಿಕ ಕಾರ್ಖಾನೆಗಳು, 1503 ಗೋದಾಮುಗಳು, 2164 ಔಷಧ ಅಂಗಡಿಗಳು, 2140 ಪಾನ್ ಅಂಗಡಿಗಳು, 1,251 ಶಾಲಾ-ಕಾಲೇಜುಗಳ ಸಮೀಪದ ಚಿಲ್ಲರೆ ಅಂಗಡಿಗಳು, 384 ಪ್ರವಾಸಿ ಏಜೆನ್ಸಿಗಳು, 481 ಪಾರ್ಸಲ್ ಸೇವಾ ಸಂಸ್ಥೆಗಳು, 1509 ವಾಣಿಜ್ಯ ಅಂಗಡಿಗಳನ್ನು ಪರಿಶೀಲನೆ ನಡೆಸಲಾಗಿದೆ. ಅಲ್ಲದೆ 3227 ರೌಡಿಗಳು ಹಾಗೂ ಡ್ರಗ್ಸ್ ಪ್ರಕರಣದ 572 ಹಳೆ ಆರೋಪಿಗಳ ವಿಚಾರಣೆ ನಡೆಸಲಾಗಿದೆ ಎಂದರು.
ಈ ವಿಶೇಷ ಕಾರ್ಯಾಚರಣೆ ವೇಳೆ ಕೆಲವರು ಮಾದಕ ವಸ್ತು ಮಾರಾಟದಲ್ಲಿ ತೊಡಗಿರುವ ಮಾಹಿತಿ ಆಧರಿಸಿ 109 ಪ್ರಕರಣಗಳನ್ನು ದಾಖಲಿಸಿ 179 ಮಾರಾಟಗಾರರನ್ನು ಬಂಧಿಸಲಾಗಿದೆ. ಹಾಗೆಯೇ ಡ್ರಗ್ಸ್ ವ್ಯಸನಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗಿದ್ದು, ಇದರಲ್ಲಿ 839 ಪ್ರಕರಣ ದಾಖಲಿಸಿ 1038 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಜಪ್ತಿಯಾದ ಡ್ರಗ್ಸ್ ವಿವರ:
ಈ ಕಾರ್ಯಾಚರಣೆ ವೇಳೆ 278.35 ಕೆಜಿ ಗಾಂಜಾ, 8.918 ಕೆಜಿ ಹೈಡ್ರೋ ಗಾಂಜಾ, 2.493 ಕೆಜಿ ಸಿಂಥೆಟಿಕ್ ಡ್ರಗ್ಸ್, 509 ಮಾತ್ರೆಗಳು ಹಾಗೂ 38 ಸ್ಟ್ರಿಪ್ಸ್ ಸೇರಿದಂತೆ ಒಟ್ಟು 8.19 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಡ್ರಗ್ಸ್ ಮುಕ್ತ ವಾಗಿಸಲು ಕಟ್ಟಿಬದ್ಧರಾಗಿದ್ದೇವೆ. ನಗರದಲ್ಲಿ ಮಾದಕ ವಸ್ತು ತಯಾರಿಕೆ ಅಥವಾ ಮಾರಾಟ ವಿರುದ್ಧ ಗುಪ್ತಚರ ಮಾಹಿತಿ ಹಾಗೂ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಈ ಕಾರ್ಯಾಚರಣೆ ಮುಂದುವರಿಸುತ್ತೇವೆ. ಡ್ರಗ್ಸ್ ನಿಂದ ಯುವ ಸಮೂಹ ಹಾಗೂ ಸಾರ್ವಜನಿಕರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದು, ಈ ಕಾರ್ಯಾಚರಣೆಗೆ ಸಾರ್ವಜನಿಕರ ಸಹಕಾರ ಕೂಡ ಬಹುಮುಖ್ಯವಾಗಿದೆ. ಡ್ರಗ್ಸ್ ಮಾರಾಟದ ಬಗ್ಗೆ ಮಾಹಿತಿ ಇದ್ದರೆ ಜನರು ಕೊಡಬೇಕು.
ಸೀಮಂತ್ ಕುಮಾರ್ ಸಿಂಗ್
ಪೊಲೀಸ್ ಆಯುಕ್ತರು, ಬೆಂಗಳೂರು ನಗರ