ಮೆಟ್ರೋ ದರ ಏರಿಕೆ ಖಂಡಿಸಿ ಪ್ರತಿಭಟಿಸಿದ ತೇಜಸ್ವಿ ಸೂರ್ಯ ಖಾಕಿ ವಶಕ್ಕೆ

Kannadaprabha News   | Kannada Prabha
Published : Feb 10, 2026, 07:05 AM IST
Tejaswi Surya

ಸಾರಾಂಶ

ನಮ್ಮ ಮೆಟ್ರೋ ದರ ಏರಿಕೆ ವಿರುದ್ಧ ನಗರದ ಆರ್​.ವಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಖಾಲಿ ಟ್ರಂಕ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ಬೆಂಗಳೂರು : ನಮ್ಮ ಮೆಟ್ರೋ ದರ ಏರಿಕೆ ವಿರುದ್ಧ ನಗರದ ಆರ್​.ವಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಖಾಲಿ ಟ್ರಂಕ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ಬಿಜೆಪಿಯಿಂದ ಮೆಟ್ರೋ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯುವ ಬಗ್ಗೆ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಸಿ.ಕೆ ರಾಮಮೂರ್ತಿ ಅವರಿಗೆ ಮೆಟ್ರೋ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸದಂತೆ ಜಯನಗರ ಠಾಣೆ ಪೊಲೀಸರು ನೋಟಿಸ್‌ ನೀಡಿದ್ದರು. ಜತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಮೆಟ್ರೋ ನಿಲ್ದಾಣಕ್ಕೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಆದರೆ ಪೊಲೀಸರ ನೋಟಿಸ್‌ಗೆ ಕ್ಯಾರೆ ಎನ್ನದ ತೇಜಸ್ವಿ ಸೂರ್ಯ, ಶಾಸಕ ಸಿ.ಕೆ. ರಾಮಮೂರ್ತಿ ಅವರು ಖಾಲಿ ಟ್ರಂಕ್‌ ಹಿಡಿದು ಮೆಟ್ರೋ ನಿಲ್ದಾಣ ಪ್ರವೇಶಿಸಲು ಮುಂದಾದರು. ಆದರೆ ಪೊಲೀಸರು ಅವರನ್ನು ತಡೆದರು.

ಖಾಲಿ ಟ್ರಂಕ್‌ ಪ್ರದರ್ಶಿಸಿ ಪ್ರತಿಭಟನೆ:

ಸಿಎಂ, ಡಿಸಿಎಂ ಭಾವಚಿತ್ರವಿದ್ದ ಮತ್ತು ಕಾಂಗ್ರೆಸ್‌ ಸರ್ಕಾರ ಖಾಲಿ ಟ್ರಂಕ್‌ ಸರ್ಕಾರ ಎಂದು ಮುದ್ರಣವಿದ್ದ ಸ್ಟಿಕರ್‌ ಅನ್ನು ಅಂಟಿಸಿ ವಿನೂತನವಾಗಿ ಪ್ರತಿಭಟನೆಗೆ ಯತ್ನಿಸಿದ್ದರು. ಆದರೆ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಲಿಲ್ಲ. ಈ ವೇಳೆ ತೇಜಸ್ವಿ ಸೂರ್ಯ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ತೇಜಸ್ವಿ ಅವರ ಕೈನಲ್ಲಿದ್ದ ಟ್ರಂಕ್‌ ಅನ್ನು ಕಸಿದುಕೊಂಡ ಪೊಲೀಸರು ಅವರನ್ನು ವಶಕ್ಕೆ ಪಡೆದು ಪೊಲೀಸ್ ಜೀಪಿನಲ್ಲಿ ಕೂರಿಸಿಕೊಂಡು ಕರೆದೊಯ್ದರು.

ಮೂಲಸೌಕರ್ಯಕ್ಕೆ ಬೇಡಿಕೆ ಇಟ್ಟರೆ ಬಂಧನ

ಬಂಧನದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ ಅವರು, ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಉತ್ತಮ ಮೂಲಸೌಕರ್ಯಕ್ಕೆ ಬೇಡಿಕೆ ಇಟ್ಟರೆ ಬಂಧನವಾಗುತ್ತದೆ. ಉತ್ತಮ ಬೆಂಗಳೂರಿಗಾಗಿ ಹೋರಾಟ ಮಾಡುವುದು ಅಪರಾಧವಾಗಿದ್ದರೆ, ನಾನು ಸಾವಿರ ಬಾರಿ ಬಂಧನಕ್ಕೊಳಗಾಗಲು ಸಿದ್ಧ. ಮೆಟ್ರೋ ದರ ಏರಿಕೆ ಮಧ್ಯಮ ವರ್ಗದ ಜನರಿಗೆ ಭಾರವಾಗಿದ್ದು, ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ನಮ್ಮ ಹತ್ತಿರಾ ದುಡ್ಡಿಲ್ಲ, ಪ್ರಯಾಣಿಕರಿಂದ ತೆಗೆದುಕೊಳ್ಳಿ ಅಂತ ಮೆಟ್ರೋಗೆ ಹೇಳಿದೆ. ಸರ್ಕಾರ ಬಿಎಂಆರ್‌ಸಿಎಲ್‌ಗೆ ಶ್ಯಾಡೋ ಸಪೋರ್ಟ್ (ಅನುದಾನ ಬೆಂಬಲ) ನೀಡಬೇಕು. ಆದರೆ ಇಷ್ಟು ವರ್ಷ ನೀಡುತ್ತಿದ್ದ ಅನುದಾನ ಬೆಂಬಲವನ್ನು ಹಿಂದಕ್ಕೆ ಪಡೆದಿದೆ. ಈ ಹೊರೆಯನ್ನು ಬಿಎಂಆರ್‌ಸಿಎಲ್ ಮೂಲಕ ಗ್ರಾಹಕರ ಮೇಲೆ ಹೊರಿಸಲಾಗಿದೆ ಎಂದು ಆರೋಪಿಸಿದರು.

PREV
Read more Articles on
click me!

Recommended Stories

GBA property tax survey ತೆರಿಗೆ ವಂಚಿಸಿದ 10 ಸಾವಿರ ಆಸ್ತಿ ಡ್ರೋನ್‌ ಮೂಲಕ ಪತ್ತೆ!
ಸಿದ್ದರಾಮಯ್ಯ ಎದುರಲ್ಲೇ 'ಜಾರಕಿಹೊಳಿ ಮುಂದಿನ ಸಿಎಂ' ಕೂಗು! ವಾಲ್ಮೀಕಿ ಜಾತ್ರೆಯಲ್ಲಿ ನಡೆದಿದ್ದೇನು?