* ಚಾಲನಾ ಪರವಾನಗಿ ನವೀಕರಣ ಈಗ ಆನ್‌ಲೈನ್
* ವಿಳಾಸ, ಹೆಸರು ತಿದ್ದುಪಡಿಗೂ ಅವಕಾಶ
* ಮನೆಯಲ್ಲೇ ಕುಳಿತು ಎಲ್‌ಎಲ್ ಪಡೆಯಿರಿ
* ಭ್ರಷ್ಟಾಚಾರ ತಡೆಗೆ ಸಾರಿಗೆ ಇಲಾಖೆ ಸೇವೆ
ವಿಶೇಷ ವರದಿ
ಬೆಂಗಳೂರು(ಜ. 31) ವಾಹನ ಸವಾರರಿಗೆ ಖುಷಿ ಕೊಡುವ ಸುದ್ದಿ. ಇನ್ನು ಮುಂದೆ ವಾಹನ ಕಲಿಕಾ ಪರವಾನಗಿ (LLR), ಚಾಲನಾ ಪರವಾನಗಿ (Driving License) ನವೀಕರಣಕ್ಕೆ ಆರ್‌ಟಿಓ (RTO) ಕಚೇರಿಗೆ ಅಲೆದಾಟ ತಪ್ಪಲಿದೆ. ಏಕೆಂದರೆ, ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ(ಆರ್‌ಟಿಒ) ಭ್ರಷ್ಟಾಚಾರ ನಿಯಂತ್ರಣ ಮತ್ತು ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಎಲ್‌ಎಲ್ ಹಾಗೂ ಡಿಎಲ್ ನವೀಕರಣ ಸೇರಿ ಹಲವು ಸೇವೆಗಳನ್ನು ಆನ್‌ಲೈನ್ (Online)ಮೂಲಕವೇ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ.
ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ಚಾಲನಾ ಪರವಾನಗಿ ನವೀಕರಣ, ಕಲಿಕಾ ಚಾಲನಾ ಪರವಾನಗಿ, ಚಾಲನಾ ಪರವಾನಗಿಯಲ್ಲಿನ ವಿಳಾಸ ಮತ್ತು ಹೆಸರಿನಲ್ಲಿದ್ದ ದೋಷಗಳ ಬದಲಾವಣೆ, ನಕಲು ಚಾಲನಾ ಪರವಾನಗಿ ಮತ್ತು ಅಂತಾರಾಷ್ಟ್ರೀಯ ಚಾಲನಾ ಪರವಾನಗಿ ನೀಡುವ ಆನ್‌ಲೈನ್ ಸೇವೆಯನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಹೆದ್ದಾರಿ ಪ್ರಾಧಿಕಾರ 2021ರ ಏಪ್ರಿಲ್ ತಿಂಗಳಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಆರ್‌ಟಿಒ ಕಚೇರಿಗಳಲ್ಲಿ ಲಭ್ಯವಾಗುತ್ತಿರುವ ಸೇವೆಗಳನ್ನು ಆಧಾರ್ ಲಿಂಕ್‌ನ ಇ-ಕೆವೈಸಿ ಪ್ರಕ್ರಿಯೆಯೊಂದಿಗೆ ಆನ್‌ಲೈನ್ ಮೂಲಕ ಒದಗಿಸಬೇಕು ಎಂದು ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಸೇವೆಗಳನ್ನು ಆನ್‌ಲೈನ್ ಮೂಲಕ ಒದಗಿಸುವ ಸಂಬಂಧ ಸರ್ಕಾರ ಜ. 24ರಂದು ಅಧಿಸೂಚನೆ ಪ್ರಕಟಿಸಿದೆ. ಅದರಂತೆ ಆನ್‌ಲೈನ್ ಸೇವೆ ಆರಂಭವಾಗಿದೆ.
ಚಾಲನಾ ಪರವಾನಗಿ ಪಡೆಯುವ ಮುನ್ನ ಹಾಗೂ ವಾಹನಗಳ ಸಾಮರ್ಥ್ಯ ಪರೀಕ್ಷೆಗಾಗಿ (ಎಫ್‌ಸಿ) ಮಾತ್ರ ಭೌತಿಕವಾಗಿ ಸಾರಿಗೆ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತದೆ. ಇನ್ನುಳಿದ ಎಲ್ಲ ಸೇವೆಗಳನ್ನು ಮನೆಯಲ್ಲಿಯೇ ಕುಳಿತು ಪಡೆದುಕೊಳ್ಳಬಹುದು. ಅಲ್ಲದೆ, ಚಾಲನಾ ಪರವಾನಗಿ ನವೀಕರಣ ಹಾಗೂ ಪರವಾನಗಿಯಲ್ಲಿನ ಸಣ್ಣ ಬದಲಾವಣೆಗಳಿಗೆ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಹೋಗಬೇಕಾದ ಅಗತ್ಯವಿರುವುದಿಲ್ಲ. ಈವರೆಗೂ ಈ ಸೇವೆಗಳು ಭೌತಿಕವಾಗಿದ್ದರಿಂದ ವಿನಾ ಕಾರಣ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವಂತಾಗಿತ್ತು. ಜೊತೆಗೆ, ವಿಳಂಬ ಮಾಡುವುದು, ಹಣಕ್ಕಾಗಿ ಬೇಡಿಕೆ ಇಡುವ ಪ್ರಕ್ರಿಯೆಗಳು ನಡೆಯುತ್ತಿದ್ದವು. ಇದನ್ನು ತಪ್ಪಿಸಲು ಆನ್‌ಲೈನ್ ಸೇವೆ ಆರಂಭಿಸುವುದಾಗಿ ಕಟಾರಿಯಾ ವಿವರಿಸಿದರು.
woman on wheels: ಟ್ಯಾಂಕರ್ ಓಡ್ಸೋ 25ರ ಬರ್ಕತ್ ನಿಶಾ
ಹೊಸ ವ್ಯವಸ್ಥೆ ಜಾರಿಗೆ ಸಾರಿಗೆ ಇಲಾಖೆಯ ಅನೇಕ ಅಧಿಕಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆದರೆ, ಮುಖ್ಯಮಂತ್ರಿಗಳು ಹೆಚ್ಚು ಪ್ರೋತ್ಸಾಹ ನೀಡಿ ಭ್ರಷ್ಟಾಚಾರವಿಲ್ಲದೆ ಸೇವೆ ಒದಗಿಸುವಂತೆ ಸೂಚನೆ ನೀಡಿದ್ದರು ಎಂದು ಅವರು ಹೇಳಿದರು.
ರಾಜ್ಯದಲ್ಲಿ 2019-20ನೇ ಸಾಲಿನಲ್ಲಿ 23.5 ಲಕ್ಷ ಚಾಲನಾ ಪರವಾನಗಿ, 6.2 ಲಕ್ಷ ಚಾಲನಾ ಪರವಾನಗಿ ನವೀಕರಣ, 2020-21ನೇ ಸಾಲಿನಲ್ಲಿ 17.7 ಲಕ್ಷ ಚಾಲನಾ ಪರವಾನಗಿ, 6.2 ಲಕ್ಷ ನವೀಕರಣಕ್ಕಾಗಿ ಅರ್ಜಿಗಳು ಬಂದಿದ್ದವು. ಇಷ್ಟುಮಂದಿ ಕಚೇರಿಗೆ ಅಲೆದಾಡಿದ್ದರು. ಆದರೆ ಇದಕ್ಕೆ ಕೊನೆ ಹಾಡಲು ಮುಂಬರುವ ದಿನಗಳಲ್ಲಿ ಮನೆಯಲ್ಲೇ ಕುಳಿತು ಈ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಚಾಲನ ಪರವಾನಗಿಯಲ್ಲಿನ ಅಕ್ರಮಗಳ ತಡೆಗೆ ಕ್ರಮ: ಆರ್‌ಟಿಒ ಕಚೇರಿಗಳಲ್ಲಿ ಒಂದೇ ದಿನದಲ್ಲಿ ನೂರಾರು ಜನರಿಗೆ ಚಾಲನಾ ಪರವಾನಗಿ ನೀಡಲಾಗುತ್ತಿದೆ. ಸರಿಯಾಗಿ ಚಾಲನೆ ಮಾಡದಿದ್ದರೂ ದೂರದಲ್ಲಿ ಕುಳಿತು ಹಣ ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರನ್ನಾಗಿ ಮಾಡಲಾಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಇವುಗಳಿಗೆ ಕಡಿವಾಣ ಹಾಕಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಲನಾ ಪರವಾನಗಿ ನೀಡುವ ಮುನ್ನ ನಡೆಯುವ ಪರೀಕ್ಷೆಗಳನ್ನು ಮತ್ತಷ್ಟುಕಠಿಣ ಮಾಡಿ ಭ್ರಷ್ಟಾಚಾರ ಮುಕ್ತಗೊಳಿಸಲಾಗುವುದು ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಹೇಳಿದರು.