* ಹರಪನಹಳ್ಳಿ ತಾಲೂಕಿನ 40ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
* ಜಲಜೀವನ ಮಿಷನ್ ಯೋಜನೆಗೆ ಈ ವರ್ಷ 103 ಹಳ್ಳಿಗಳ ಆಯ್ಕೆ
* ನದಿ ನೀರು ಸರಬರಾಜು ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ
ಬಿ. ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ(ಅ.30): ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ(Rain) ಸುರಿದು ಕೆರೆ- ಕಟ್ಟೆಗಳು ತುಂಬಿದ್ದರೂ ತಾಲೂಕಿನ 40ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ(Drinking Water) ಸಮಸ್ಯೆ ಇದೆ. ನೀರು ಇದೆ. ಆದರೆ ಪೈಪ್‌ಲೈನ್ ಸರಿ ಇಲ್ಲದಿರುವುದು, ಮೋಟಾರ್ ಅಳವಡಿಸದಿರುವುದು ಹೀಗೆ ವಿವಿಧ ಕಾರಣಗಳಿಂದ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
undefined
ಚಿರಸ್ಥಹಳ್ಳಿ, ತಾಳೇದಹಳ್ಳಿ, ಹೊನ್ನೇನಹಳ್ಳಿ, ಶಿಂಗ್ರಿಹಳ್ಳಿ, ತುಂಬಿಗೇರಿ, ಹುಲ್ಲಿಕಟ್ಟಿ, ಹಾರಕನಾಳು ಸಣ್ಣ ತಾಂಡಾ, ದಡಗಾರನಹಳ್ಳಿ, ನಂದಿಬೇವೂರು ತಾಂಡಾ, ಕೊಮಾರನಹಳ್ಳಿ, ಕೂಲಹಳ್ಳಿ, ಚಿಕ್ಕಮೇಗಳಗೇರಿ, ದ್ಯಾಪನಾಯಕನಹಳ್ಳಿ, ಹರಿಯಮ್ಮನಹಳ್ಳಿ, ಕನಕನಬಸ್ಸಾಪುರ, ಅಡವಿಮಲ್ಲಾಪುರ, ಚೆನ್ನಾಪುರ, ಮಡಕಿ ನಿಚ್ಚಾಪುರ, ಸತ್ತೂರು, ಜಂಬುಲಿಂಗನಹಳ್ಳಿ, ಅಣಜಿಗೇರಿ, ಬಂಡ್ರಿ ತಾಂಡಾ ಸೇರಿದಂತೆ 40ಕ್ಕೂ ಹೆಚ್ಚು ಹಳ್ಳಿಗಳಲ್ಲಿ(Villages) ನೀರಿನ ಸಮಸ್ಯೆ ತಲೆದೋರಿದೆ.
ಇತ್ತೀಚೆಗೆ ಮೂರು ವಿವಿಧ ಹಳ್ಳಿಗಳಲ್ಲಿ ನಡೆದ ಕಂದಾಯ ನಡಿಗೆ ಹಳ್ಳಿ ಕಡೆಗೆ ಹಾಗೂ ಜನಸ್ಪಂದನಾ ಕಾರ್ಯಕ್ರಮಗಳಲ್ಲಿ ಜನರು ನೀರಿನ ಸಮಸ್ಯೆ ಬಗೆಹರಿಸಿ ಎಂದು ಅಲವತ್ತುಕೊಂಡಿದ್ದಾರೆ. ಬಹಳಷ್ಟು ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಆದರೆ ನಿರ್ವಹಣೆ ಇಲ್ಲದೆ ನೀರು ಪೂರೈಕೆ ವ್ಯತ್ಯಯವಾಗಿ ಜನರಿಗೆ ನೀರು ಕೊಡಲಾಗುತ್ತಿಲ್ಲ. ಮನೆ ಮನೆಗೂ ನಳ ಅಳವಡಿಸುವ ಉದ್ದೇಶದಿಂದ ಸರ್ಕಾರ ಜಲಜೀವನ ಮಿಷನ್ ಯೋಜನೆಯನ್ನು ಜಾರಿಗೊಳಿಸಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ.
ವಿಜಯನಗರ; ಆಡು ಮೇಯಿಸಲು ಹೋದವರಿಗೆ ಸಿಡಿಲಾಘಾತ, ತಂದೆ-ಮಗ ಸೇರಿ ಮೂವರ ದುರ್ಮರಣ
ಈ ವರ್ಷ 103 ಹಳ್ಳಿಗಳನ್ನು ಜಲಜೀವನ ಮಿಷನ್ ಯೋಜನೆಗೆ ಆಯ್ಕೆ ಮಾಡಿದ್ದು, ಈಗಾಗಲೇ ಸರ್ವೆ(Survey) ಮುಗಿದಿದ್ದು, ಟೆಂಡರ್(Tender) ಆಗಿ ಕಾಮಗಾರಿ ಆರಂಭವಾಗಬೇಕಿದೆ. ಆದ್ದರಿಂದ ಪೈಪ್‌ಲೈನ್ ಮಾಡಲು ಅವಕಾಶವಿಲ್ಲ ಎಂಬುದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರ ಹೇಳಿಕೆ. ಆದರೆ ಆ ಯೋಜನೆ ಟೆಂಡರ್ ಆಗಿ ಕಾಮಗಾರಿ ಪೂರ್ಣಗೊಂಡು ಮನೆಗೆ ನಳ ಬಂದು ನೀರು ದೊರಕುವವರೆಗೆ ಏನು ಮಾಡಬೇಕು ಎಂಬುದು ಸಾರ್ವಜನಿಕರ ಪ್ರಶ್ನೆ.
ಮೊದಲೆ ಹಿಂದುಳಿದ ತಾಲೂಕು. ಬೇಸಿಗೆಯಲ್ಲಿ(Summer) ಸಾಕಷ್ಟು ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಬಹಳಷ್ಟು ಹಳ್ಳಿಗಳಿಗೆ ನದಿ ನೀರು ಸರಬರಾಜು ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಈ ಬಾರಿ ಉತ್ತಮ ಮಳೆಯಾಗಿ ಕೊಳವೆ ಬಾವಿಗಳಲ್ಲಿ ಅಂರ್ತಜಲ ಮಟ್ಟಮೇಲ್ಮಟ್ಟಕ್ಕೆ ಬಂದರೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವುದು ಅಧಿಕಾರಿಗಳಿಂದ ಆಗುವುದಿಲ್ಲ ಎಂದರೆ ಎಂತಹ ಆಡಳಿತ ಎಂಬ ಪ್ರಶ್ನೆ ಉದ್ಭವವಾಗಿದೆ.
ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿಯವರು ಪೈಪ್‌ಲೈನ್ ದುರಸ್ತಿಯಂತಹ ಸಣ್ಣಪುಟ್ಟಕೆಲಸ ಕಾರ್ಯಗಳನ್ನು ಮಾಡಬೇಕು. ಅದಕ್ಕೆ ತಾಪಂ ಹಾಗೂ ಜಿಪಂ ಅಧಿಕಾರಿಗಳು ಬಿಗಿ ಕ್ರಮ ಕೈಗೊಳ್ಳಬೇಕಾಗಿದೆ.
ಎಲ್ಲೆಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಪಟ್ಟಂತೆ ಕಾಮಗಾರಿ ಆಗಬೇಕು ಎಂಬ ಪಟ್ಟಿತಯಾರಿಸಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರರಿಗೆ ಹಾಗೂ ಕೆಕೆಆರ್‌ಡಿಬಿ ಯೋಜನೆಯಡಿ ಕ್ರಿಯಾಯೋಜನೆ ಸಲ್ಲಿಸಿ ಅನುಮೋದನೆ ಹಾಗೂ ಅನುದಾನ ಬಿಡುಗಡೆಗೆ ಕಾಯುತ್ತಿದ್ದೇವೆ ಎಂದು ಹರಪನಹಳ್ಳಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗದ ಎಇಇ ಎಂ. ಸಿದ್ದರಾಜು ತಿಳಿಸಿದ್ದಾರೆ.