ಕೊಡಗಿನಲ್ಲಿ ಬತ್ತುತ್ತಿವೆ ನದಿ, ಅಂತರ್ಜಲ: ಬೇಸಿಗೆ ಆರಂಭಕ್ಕೂ ಮುನ್ನ ಕುಡಿಯುವ ನೀರಿಗೂ ಹಾಹಾಕಾರ..!

By Girish GoudarFirst Published Feb 10, 2024, 11:00 PM IST
Highlights

ಈ ಬಾರಿ ತೀವ್ರ ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ನದಿ, ತೊರೆಗಳು ಒಣಗಿ ಹೋಗಿವೆ. ಜಲಾಶಯವೇ ಬತ್ತಿ ಹೋಗಿದೆ. ಅಷ್ಟೇ ಏಕೆ ಅಂತರ್ಜಲ ಕೂಡ ಕಡಿಮೆಯಾಗಿದ್ದು ಈಗ ಜನ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. 

ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು 

ಕೊಡಗು(ಫೆ.10):  ಮಲೆನಾಡು ಆಗಿರುವ ಕೊಡಗು ಜಿಲ್ಲೆ ಎಂದರೆ ಆರು ತಿಂಗಳು ಮಳೆ ಸುರಿಯುತ್ತದೆ. ಕಾವೇರಿ ಯಾವಾಗಲೂ ತುಂಬಿ ಹರಿಯುತ್ತದೆ ಎನ್ನುವ ಅಭಿಪ್ರಾಯವಿದೆ. ಆದರೆ ಈ ಬಾರಿ ತೀವ್ರ ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ನದಿ, ತೊರೆಗಳು ಒಣಗಿ ಹೋಗಿವೆ. ಜಲಾಶಯವೇ ಬತ್ತಿ ಹೋಗಿದೆ. ಅಷ್ಟೇ ಏಕೆ ಅಂತರ್ಜಲ ಕೂಡ ಕಡಿಮೆಯಾಗಿದ್ದು ಈಗ ಜನ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. 

ಹೌದು ಕೊಡಗು ಜಿಲ್ಲೆಯಲ್ಲಿ ಈ ಬಾರಿ ತೀವ್ರ ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ಬಹುತೇಕ ನೀರಿನ ಹರಿವು ಕಡಿಮೆಯಾಗಿದೆ. ನದಿಯಲ್ಲಿ ಕಲ್ಲುಬಂಡೆಯೆಲ್ಲಾ ಕಾಣಿಸುತ್ತಿದ್ದು, ಕಲ್ಲಿನ ಸಂದಿಗಳಲ್ಲಿ, ತಗ್ಗು ಜಾಗಗಳಲ್ಲಿ ಮಾತ್ರವೇ ಕಾವೇರಿ ನದಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಜಿಲ್ಲೆಯಲ್ಲಿ ವಿಪರೀತ ಬಿಸಿಲ ಧಗೆ ಹೊಡೆಯುತ್ತಿದ್ದು, ಇನ್ನೊಂದು ತಿಂಗಳ ಕಾಲ ಇದೇ ರೀತಿ ಬಿಸಿಲ ಧಗೆ ಮುಂದುವರಿದರೆ ಮಾರ್ಚಿ ತಿಂಗಳಲ್ಲಿ ಕಾವೇರಿ ನದಿಯೇ ಪೂರ್ಣ ಬತ್ತಿಹೋಗುವುದರಲ್ಲಿ ಅಚ್ಚರಿಯೇನಿಲ್ಲ. ಕಾವೇರಿ ನದಿಯನ್ನು ನಂಬಿಕೊಂಡಿರುವ ನೂರಾರು ಗ್ರಾಮಗಳು, ಸಾವಿರಾರು ಜಾನುವಾರು ಕುಡಿಯುವ ನೀರಿಗೂ ಪರಿತಪಿಸಬೇಕಾದ ಸಂದರ್ಭ ಬರಲಿದೆ. 

ಮೈಸೂರು ಸಿಂಹನ ವಿರುದ್ಧ ಗುಟುರು ಹಾಕುತ್ತಿದೆ ಹಳ್ಳಿಹಕ್ಕಿ: ಲೋಕಸಭೆಗೆ ಕೈನಿಂದ ಸ್ಪರ್ಧಿಸಲು ವಿಶ್ವನಾಥ್ ಸಜ್ಜು!

ನದಿ ಪಾತ್ರದ ನೂರಾರು ಗ್ರಾಮಗಳಲ್ಲಿ ಇರುವ ಸಾವಿರಾರು ಜಾನುವಾರುಗಳು ನದಿ ದಂಡೆಯಲ್ಲಿ ಬೆಳೆಯುವ ಹಸಿರ ಹುಲ್ಲನ್ನು ನಂಬಿ ಬೇಸಿಗೆಯಲ್ಲಿ ತಮ್ಮ ಹಸಿವು ನೀಗಿಸಿಕೊಳ್ಳುತ್ತಿದ್ದವು. ಆದರೀಗ ನದಿಯೇ ಬತ್ತಿ ಹೋಗುವ ಸ್ಥಿತಿ ಬರುತ್ತಿರುವುದರಿಂದ ಆತಂಕ ಶುರುವಾಗಿದೆ. ಜಿಲ್ಲೆಯ ಕುಶಾಲನಗರ ತಾಲ್ಲೂಕಿನಲ್ಲಿರುವ 1 ಟಿಎಂಸಿ ಸಾಮರ್ಥ್ಯದ ಚಿಕ್ಲಿಹೊಳೆ ಜಲಾಶಯ ಈಗಾಗಲೇ ಪೂರ್ಣ ಬತ್ತಿಹೋಗಿದೆ. ಈ ಜಲಾಶಯದ ಸುತ್ತಮುತ್ತಲಿನ ತೋಡುಗಳು ಕೂಡ ಭತ್ತಿಹೋಗಿವೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಗಾಗಲೇ ಕೊಳವೆ ಬಾವಿಗಳಲ್ಲಿ ಅಂತರ್ಜಲ ಪ್ರಮಾಣವೂ ತಗ್ಗಿದೆ. ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿರುವುದರಿಂದ ಬೇಸಿಗೆ ಬೆಳೆ ಬೆಳೆಯಲು ಸಿದ್ಧತೆ ನಡೆಸಿದ್ದ ರೈತರು ಕಂಗಾಲಾಗುವಂತೆ ಮಾಡಿದೆ. 

ಈಗಾಗಲೇ ಒಂದಷ್ಟು ರೈತರು ಕೊಳವೆ ಬಾವಿಗಳನ್ನು ನಂಬಿಕೊಂಡು ಮೆಕ್ಕೆಜೋಳ, ತರಕಾರಿ ಸೇರಿದಂತೆ ವಿವಿಧ ಬೆಳೆಗಳನ್ನು ಭೂಮಿಗೆ ಹಾಕಿದ್ದಾರೆ. ಆದರೆ ಕೊಳವೆ ಬಾವಿಗಳಲ್ಲಿ ಫೆಬ್ರುವರಿ ಆರಂಭದಲ್ಲಿಯೇ ನೀರು ಕಡಿಮೆಯಾಗಿರುವುದರಿಂದ ಮಾರ್ಚಿ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬಾವಿಗಳಲ್ಲಿ ನೀರು ಪೂರ್ಣ ಕಡಿಮೆಯಾಗಿ ಪಂಪುಗಳು ನಿಂತು ಹೋಗಬಹುದು. 

ಕೊಡಗಿನ ಚೇಲಾವರ ಜಲಪಾತ ನೋಡಲು ಬಂದ ಕೇರಳದ ಯುವಕ ಮುಳುಗಿ ಸಾವು

ಹೀಗಾದಲ್ಲಿ ಹಾಕಿರುವ ಬೆಳೆಯನ್ನು ತೆಗೆದುಕೊಳ್ಳುವುದು ಹೇಗೆ ಎನ್ನುವ ಭಯ ರೈತರಿಗೆ ಶುರುವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರೈತ ರಾಮಚಂದ್ರ ಅವರು ಪ್ರತೀ ವರ್ಷ ಬೇಸಿಗೆ ಬೆಳೆ ಬೆಳೆಯುವಾಗ ನೀರು ಹಾಯಿಸಿದರೆ ಕನಿಷ್ಠ 6 ಗಂಟೆಗಳ ಕಾಲ ನಿರಂತರ ಮೋಟರ್ ಓಡುತಿತ್ತು. ಆದರೆ ಈ ಬಾರಿ ಈಗಾಗಲೇ ನೀರು ಕಡಿಮೆಯಾಗಿದ್ದು ಅರ್ಧಗಂಟೆ ಓಡುವಷ್ಟರಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಬಳಿಕ ಕ್ರಮೇಣ ಕಡಿಮೆಯಾಗಿ ಮೋಟರ್ ನಿಂತೇ ಹೋಗುತ್ತಿದೆ. ಹೀಗಾದಲ್ಲಿ ಮಾರ್ಚಿ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಥೆ ಏನು ಎನ್ನುವ ಚಿಂತೆ ಶುರುವಾಗಿದೆ. 

ಈಗಲೇ ಸ್ಥಿತಿ ಹೀಗೆ ಇರುವುದರಿಂದ ನಾವು ಎರಡನೇ ಬೆಳೆ ಬೆಳೆಯುವುದಕ್ಕೆ ಮುಂದಾಗಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಬಾರೀ ತೀವ್ರ ಮಳೆ ಕೊರತೆಯಿಂದಾಗಿ ಕುಡಿಯುವ ನೀರಿಗೂ ಸಮಸ್ಯೆ ತಲೆದೋರುವ ಲಕ್ಷಣಗಳು ನಿಚ್ಚಳವಾಗಿವೆ.

click me!