'ಬೆಂಗಳೂರಿನಲ್ಲಿ ಕನ್ನಡ ಹುಡುಕಬೇಕಾದ ದುಸ್ಥಿತಿ ಒದಗಿಬಂದಿದೆ'

By Kannadaprabha NewsFirst Published Mar 2, 2020, 7:53 AM IST
Highlights

ಇಂಗ್ಲಿಷ್ ಬೇಡಿಯಿಂದ ಕನ್ನಡವನ್ನು ಮುಕ್ತಗೊಳಿಸಬೇಕಾಗಿದೆ: ಡಾ.ಶೀಲಾಕಾಂತ ಪತ್ತಾರ| ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ| ಸಾಹಿತಿಗಳು ಕಲ್ಯಾಣಕಾರಿ ಸಮಾಜದ ನಿರ್ಮಾಣಕ್ಕೆ ಬದ್ಧರಾಗಿರಬೇಕು |

ಬಾದಾಮಿ[ಮಾ.02]: ಕನ್ನಡ ನುಡಿಯ ಸ್ಥಿತಿಗತಿಗಳನ್ನು ಅವಲೋಕಿಸಿ ದರೆ ಕನ್ನಡವೀಗ ಭಾಷಾ ಸಂಕರ ಎಂಬ ವ್ಯಾಧಿಯಿಂದ ಬಳಲುತ್ತಿದೆ ಎಂಬುವುದು ವೇದ್ಯವಾಗುತ್ತದೆ. ಹಿಂದೊಮ್ಮೆ ಹೀಗೆ ಕನ್ನಡವು ಅನಾರೋಗ್ಯಕ್ಕೆ ತುತ್ತಾದಾಗ ಬಸವಾದಿ ಶರಣರು ವೈದ್ಯರಾಗಿ ಬಂದು ಸಂಸ್ಕೃತದ ಕಪಿ ಮುಷ್ಟಿಯಿಂದ ಅದನ್ನು ಮುಕ್ತಗೊಳಿಸಿದರು. ಅಂದು ಸಂಸ್ಕೃತ ಆಕ್ರಮಿಸಿದ ಸ್ಥಾನವನ್ನು ಇಂದು ಇಂಗ್ಲಿಷ್ ಆಕ್ರಮಿಸಿದೆ. ಇಂಗ್ಲಿಷ್ ಬೇಡಿಯಿಂದ ಕನ್ನಡವನ್ನು ಮುಕ್ತಗೊಳಿಸಬೇಕಾಗಿದೆ ಎಂದು ಸಮ್ಮೇಳನ ಸರ್ವಾಧ್ಯಕ್ಷ ಡಾ.ಶೀಲಾಕಾಂತ ಪತ್ತಾರ ಎಂದರು. 

ಬಾದಾಮಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಫೋಟೋಸ್ 

ನಗರದ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಬಸವ ಸಭಾ ಭವನದಲ್ಲಿ ಭಾನುವಾರ ಜರುಗಿದ ಬಾದಾಮಿ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೂರದರ್ಶನದ ನಮ್ಮ ಖಾಸಗಿ ವಾಹಿನಿಗಳ ನಿರೂಪಕರೆಲ್ಲ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ದರಿದ್ರರಾಗಿರುವುದು ಕಂಡು ಬರುತ್ತದೆ. ಸುದ್ದಿ ಓದುವ ಪಂಡಿತರ ಹಣೆಬರವೂ ಅಷ್ಟೆ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡವನ್ನು ಹುಡುಕಬೇಕಾದ ದುಸ್ಥಿತಿ ಒದಗಿಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭಾಷಾ ದೃಷ್ಟಿಯಿಂದ ಗಮನಿಸಿದರೆ ಕನ್ನಡದಂತೆ ಇಂಗ್ಲಿಷ್ ಪರಿಪಕ್ವ ಭಾಷೆಯಲ್ಲ. ಕನ್ನಡದಲ್ಲಿ ಮಾತನಾಡಿದ್ದನ್ನೆ ಬರೆಯಲಾಗುತ್ತದೆ. ಬರೆದದ್ದನ್ನೇ ಓದಲಾಗುತ್ತದೆ. ಆದರೆ, ಇಂಗ್ಲಿಷ್ ನಲ್ಲಿ ಹಾಗಲ್ಲ. ಬರೆಯುವುದೇ ಬೇರೆ ಓದುವುದೇ ಬೇರೆ ಈ ಎಡಬಿಡಂಗಿತನ ಕನ್ನಡದಲ್ಲಿ ಇಲ್ಲ ನಮಗಿಂತ ತುಸು ಪ್ರಾಚೀನ ಭಾಷೆಯಾದ ತಮಿಳು ಕೂಡಾ ಈ ದೌರ್ಬಲ್ಯ ಹೊಂದಿದೆ. ತಮಿಳಿಗೆ ತನ್ನದೆ ಯಾದ ಲಿಪಿ ಇದ್ದರೂ ಅದರ ಒಂದು ಅಕ್ಷರವನ್ನು ಭಿನ್ನ ಭಿನ್ನವಾಗಿ ಉಚ್ಚರಿಸಲಾಗುತ್ತದೆ ಎಂದರು. 

ಕನ್ನಡ ಲಿಪಿಯ ಚೆಲುವು ಇನ್ನಾವ ಭಾಷೆಗೂ ಇಲ್ಲ ಇದನ್ನು ಮನಗಂಡೇ ವಿನೋಬಾ ಭಾವೆಯವರು ಕನ್ನಡ ಲಿಪಿಯನ್ನು ಜಗತ್ತಿನ ಲಿಪಿಗಳ ರಾಣಿ ಎಂದು ಉದ್ಗರಿಸಿದ್ದುಂಟು. ಸ-ಹಿತ ವಾದುದು ಸಾಹಿತ್ಯ ಎನಿಸಿಕೊಳ್ಳುತ್ತದೆ. ಅ-ಹಿತವಾದುದು ಸಾಹಿತ್ಯವೆನಿಸಿಕೊಳ್ಳಲಾರದು. ಸಾಹಿತ್ಯವು ಸಮಾಜದಲ್ಲಿ ಧನಾತ್ಮಕ ಪರಿವರ್ತನೆಯನ್ನುಂಟು ಮಾಡುವಂತಿರಬೇಕು. ನವೋದಯ ಕಾಲದಲ್ಲಿ ಜನ ಸಾಮಾನ್ಯರ ಬದುಕು ಬಹುಪಾಲು ನೆಮ್ಮದಿಯಿಂದ ಕೂಡಿತ್ತು. ಇಂದಿನ ಬದುಕು ಉಗ್ರವಾಗಿದೆ, ಭಯಾನಕವಾಗಿದೆ. ಇದಕ್ಕೆ ಸಂಸ್ಕಾರ ಹೀನ ಸಾಹಿತ್ಯವು ಕಾರಣವಾಗಿರಬಹುದು. ಸಾಹಿತಿಗಳು ಕಲ್ಯಾಣಕಾರಿ ಸಮಾಜದ ನಿರ್ಮಾಣಕ್ಕೆ ಬದ್ಧರಾಗಿರಬೇಕು ಎಂದು ತಮ್ಮ ನಿಲುವನ್ನು ವ್ಯಕ್ತಪಡಿಸಿದರು. 

ತಾವು ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಐತಿಹಾಸಿಕ ಬಾದಾಮಿ, ಪಟ್ಟದಕಲ್ಲ ಹಾಗೂ ಐಹೊಳೆಯ ಶಿಲ್ಪಕಲೆಗಳ ವೈಭವವನ್ನು ಹೇಳಿದ ಅವರು ಯುವ ಸಾಹಿತಿಗಳ ಸಾಹಿತ್ಯದ ಬಗ್ಗೆ ಅಭಿಮಾನ ವ್ಯಕ್ತಪಡಿಸಿ ಇಲ್ಲಿನ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶದ ಎಲ್ಲ ಸಾಧಕರನ್ನ ಮಹಾನ್ ಕಲಾವಿದರ ಬಗ್ಗೆ ಸಭಿಕರಿಗೆ ಮನ ಮುಟ್ಟುವಂತೆ ಮನನ ಮಾಡಿ ಕೊಟ್ಟರು. 

ಸಮ್ಮೇಳನದ ನಿರ್ಣಯಗಳು

1. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂದು ಕನ್ನಡ ಶಾಲೆಗಳನ್ನು ಮುಚ್ಚಬಾರದು. 
2. ಎಷ್ಟೋ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಲಲಿತಕಲಾ ವಿಶ್ವ ವಿದ್ಯಾಲಯವನ್ನು ಕೂಡಲೇ ಪ್ರಾರಂಭಿಸಲು ಹಕ್ಕೋತ್ತಾಯ. 
3. ಬಾದಾಮಿ ಪರಂಪರೆ ಎತ್ತಿ ಹಿಡಿದ ಶಿಲ್ಪ ಮೇಣಬಸದಿಗಳಿರುವ ಈ ಸ್ಥಳವನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿಸಲು ಒತ್ತಾಯ 
4. ಡಾ. ಮಹಿಷಿ ವರದಿಯನ್ನು ಜಾರಿಗೆ ತರುವುದರ ಮೂಲಕ ಕನ್ನಡಿಗರಿಗೆ ಹೆಚ್ಚು ಹೆಚ್ಚು ಉದೋಗ ಒದಗಿಸಲು ಮನವಿ 
5. ಕೇಂದ್ರ ಸರ್ಕಾರ ಮಹದಾಯಿ ನದಿ ನೀರನ್ನು ಉಪಯೋಗಿಸಲು ಮಲತಾಯಿ ದೋರಣೆ ತಾಳಿದ್ಯ 13 ಟಿಎಂಸಿ ನೀರನ್ನು ಒದಗಿಸು ವ ಬದಲಾಗಿ 43 ಟಿಎಂಸಿ ನೀರನ್ನು ಪೂರೈಸಲು ಹಕ್ಕೋತ್ತಾಯ.

click me!