ಸರ್ಕಾರ ಮಹಿಳಾ ಸಚಿವರಿಲ್ಲದೇ ಸದನ ನಡೆಸುವುದು ಹೆಣ್ಣುಕುಲಕ್ಕೆ ಅಗೌರವ: ಡಾ. ನಾಗಲಕ್ಷ್ಮಿ ಚೌಧರಿ

Published : Nov 22, 2026, 06:50 PM IST
Dr nagalakshmi choudhary

ಸಾರಾಂಶ

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳಾ ಸಚಿವರಿಲ್ಲದೆ ಸದನ ನಡೆಸುವುದು ಹೆಣ್ಣು ಕುಲಕ್ಕೆ ಮಾಡುವ ಅಗೌರವ ಎಂದು ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಉತ್ತರ ಕನ್ನಡ (ನ.22): 'ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಯಾವುದೇ ಪ್ರಾತಿನಿಧ್ಯ ನೀಡದೆ ಸದನ ನಡೆಸುವುದು ಇಡೀ ಹೆಣ್ಣು ಕುಲಕ್ಕೆ ಮಾಡುತ್ತಿರುವ ಘೋರ ಅಗೌರವ' ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕಾರವಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನಮಾನ ನೀಡದ ಸರ್ಕಾರದ ನಡೆಯನ್ನು ಖಂಡಿಸಿದರು.

ಮಹಿಳೆಯರಿಲ್ಲದ ಸಂಪುಟದಿಂದ ಸದನ ನಡೆಸಬಾರದು:

"ರಾಜ್ಯದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಒಂದೇ ಒಂದು ಸ್ಥಾನವನ್ನೂ ನೀಡದಿರುವುದು ಅತ್ಯಂತ ಬೇಸರದ ಸಂಗತಿ. ಮಹಿಳಾ ಸಚಿವರೇ ಇಲ್ಲದೆ ವಿಧಾನಸಭೆ ಅಧಿವೇಶನ ಮತ್ತು ಕಲಾಪಗಳನ್ನು ನಡೆಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಮಹಿಳಾ ಸಮುದಾಯಕ್ಕೆ ಶೋಭೆ ತರುವುದಿಲ್ಲ. ಮಹಿಳೆಯರಿಲ್ಲದ ಇಂತಹ ಸಂಪುಟದಿಂದ ಸದನ ನಡೆಸಬಾರದು" ಎಂದು ಅವರು ನೇರ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಈಗಾಗಲೇ ಪತ್ರ ರವಾನೆ:

"ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಆದಷ್ಟು ಬೇಗ ಸೂಕ್ತ ಪ್ರಾತಿನಿಧ್ಯ ಹಾಗೂ ಸ್ಥಾನಮಾನ ಕಲ್ಪಿಸಬೇಕು ಎಂದು ಒತ್ತಾಯಿಸಿ ಈಗಾಗಲೇ ನಾನು ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿ ಪತ್ರ ಬರೆದಿದ್ದೇನೆ. ಆದರೂ ಇದುವರೆಗೂ ಯಾವುದೇ ಸಕಾರಾತ್ಮಕ ನಿರ್ಧಾರ ಹೊರಬಂದಿಲ್ಲ. ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಸರ್ಕಾರದ ಈ ಧೋರಣೆಯನ್ನು ನಾನು ಸ್ಪಷ್ಟವಾಗಿ ಖಂಡಿಸುತ್ತೇನೆ," ಎಂದು ತಿಳಿಸಿದರು.

ಕಾನೂನು ಬಂದರೆ ಮಾತ್ರ ಅವಕಾಶ ನೀಡುವ ಪರಿಸ್ಥಿತಿ ಇದೆ:

ರಾಜಕೀಯ ಪಕ್ಷಗಳ ಇಬ್ಬಂದಿ ನೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, "ಮಹಿಳಾ ಮೀಸಲಾತಿ ಕಡ್ಡಾಯ ಕಾನೂನಾದರೆ ಮಾತ್ರ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಸ್ಥಾನ ನೀಡುತ್ತವೆ ಎಂಬಂತಹ ದುಸ್ಥಿತಿ ನಿರ್ಮಾಣವಾಗಿದೆ. ಸ್ವಯಂಪ್ರೇರಿತರಾಗಿ ಅರ್ಹ ಮಹಿಳೆಯರಿಗೆ ಅವಕಾಶ ಕಲ್ಪಿಸುವ ಮನಸ್ಥಿತಿಯನ್ನು ಯಾರೂ ತೋರಿಸುತ್ತಿಲ್ಲ. ಆದ್ದರಿಂದ ಸರ್ಕಾರ ಇನ್ನಾದರೂ ತಡಮಾಡದೆ ಶೀಘ್ರವಾಗಿ ಮಹಿಳಾ ಶಾಸಕಿಯರಿಗೆ ಸಚಿವ ಸ್ಥಾನ ನೀಡಿ ಗೌರವಿಸಬೇಕು," ಎಂದು ಡಾ. ನಾಗಲಕ್ಷ್ಮಿ ಚೌಧರಿ ಆಗ್ರಹಿಸಿದರು.

PREV
Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳಾ ಮಂತ್ರಿ ಪೈಪೋಟಿ ನಡುವೆ ರಾಜೀನಾಮೆ ಮಾತನಾಡಿದ ಶಾಸಕಿ ನಯನಾ ಮೋಟಮ್ಮ!
₹200ಕ್ಕೆ 1 ಕೆಜಿ ಪುಸ್ತಕ: ಬೆಂಗಳೂರಿನಲ್ಲಿ ತರಕಾರಿಗಳಂತೆ ತೂಕಕ್ಕೆ ಮಾರಾಟವಾಗುತ್ತಿರುವ ಜ್ಞಾನ ಭಂಡಾರ!