
ಮೈಸೂರು (ಅ.28): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಯಾವಾಗಲೂ ದಕ್ಷಿಣ, ಉತ್ತರ ಧ್ರುವ ಇದ್ದತೆ. ಆದ್ದರಿಂದ ಒಬೊಬ್ಬರು ಒಂದೊಂದು ದಿಕ್ಕಿಗೆ ಪ್ರವಾಸ ಮಾಡುತ್ತಿದ್ದಾರೆ. ಅದರಲ್ಲೇನು ವಿಶೇಷವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವ್ಯಂಗ್ಯವಾಡಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ವರ್ಷ ನೆನಪಿಗೆ ಬಾರದ ಜನರ ಕಷ್ಟ ಚುನಾವಣೆ (Election) ಹತ್ತಿರವಾಗುತ್ತಿದ್ದಂತೆಯೇ ಕಾಂಗ್ರೆಸ್ (Congress) ನಾಯಕರಿಗೆ ನೆನಪಾಗುತ್ತಿದೆ. ಚುನಾವಣೆ ಹತ್ತಿರ ಬಂದಾಗ ಪಾದಯಾತ್ರೆ ನಡೆಸುವುದು ಸಾಮಾನ್ಯ. ಜನರು ಕಷ್ಟದಲ್ಲಿದ್ದಾಗ ಯಾರು ಕೆಲಸ ಮಾಡಿದ್ದಾರೆ ಎಂಬುದು ಜನರಿಗೆ ತಿಳಿದಿದೆ ಎಂದರು.
ಜನರು ಬುದ್ಧಿವಂತರಿದ್ದು, ಸರಿಯಾದ ಸಮಯದಲ್ಲಿ ಬುದ್ಧಿ ಕಲಿಸುತ್ತಾರೆ. ಕಾಂಗ್ರೆಸ್‌ನವರ ಯಾತ್ರೆಗೆ ಅಷ್ಟೊಂದು ಮಹತ್ವ ಕೊಡಬೇಕಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿರುವ ಶಾಸಕರಲ್ಲಿ ಯಾರೂ ವಾಪಸ್ ಹೋಗುವುದಿಲ್ಲ. ಕಾಂಗ್ರೆಸ್‌ಗೆ ಹೋಗುವ ವಾಹಿತಿಯೂ ನನಗೆ ಇಲ್ಲ. ನಿಮಗೆ ಗೊತ್ತಿದ್ದರೆ ಹೇಳಿ ಎಂದರು.
ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕೂಡ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಪಕ್ಷ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದೆ. ಕಾಂಗ್ರೆಸ್ ಬಿಡುವಾಗ ಯಾವ ಕಾರಣಕ್ಕಾಗಿ, ಏನಾಯಿತು ಎಂಬುದನ್ನು ಅವರೇ ಸಾರ್ವಜನಿಕರ ಮುಂದೆ ಹೇಳಿರುವುದರಿಂದ ಮತ್ತೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಾನು ನ್ಯೂಕ್ಲಿಯರ್ ಇದ್ದಂತೆ. ಕೆಲವು ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಸ್ಪರ್ಧಿಯಾಗಿ ಕೆಲಸ ಮಾಡುತ್ತಿರುವುದರಿಂದ ನನ್ನ ವಿರುದ್ಧ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಇನ್ನು ಎಲ್ಲವನ್ನೂ ಕಲಿತಿರುವ ಸಿದ್ದರಾಮಯ್ಯ ಬಹುವಚನ ಕಲಿತಿಲ್ಲ. ಹಿರಿಯರಾದ ಅವರು ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಕ್ಕೆ ನನಗೇನು ಬೇಜಾರಿಲ್ಲ. ಅವರು ಹಾಗೆ ಮಾತನಾಡುವುದರಲ್ಲಿ ವಿಶೇಷತೆ ಏನಿಲ್ಲ ಎಂದರು.
ಸಿದ್ದು ಡಿಕೆಸಿ ಜೋಡೊ ಮಾಡಬೇಕಿತ್ತು :
ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆಗೆ ಮೊದಲು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜೋಡೋ ಮಾಡ ಬೇಕಾಗಿತ್ತು ಎಂದು ವಿಧಾನ ಪರಿಷತ್ ಸಚೇತಕ ವೈ.ಎ.ನಾರಾಯಣಸ್ವಾಮಿ ವ್ಯಂಗ್ಯವಾಡಿದರು.
ಮಂಗಳವಾರ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತ್ ಜೋಡೋ ರಾಜ್ಯ ಪ್ರವಾಸದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೋಡಿಯಾಗಿ ಎಲ್ಲೂ ಕಾಣಿಸಲೇ ಇಲ್ಲ. ಇವರಿಬ್ಬರ ಮಧ್ಯೆ ರಾಹುಲ್ ಗಾಂಧಿ ಇರುತ್ತಿದ್ದರು. ಇದರಿಂದಲೇ ಇವರಿಬ್ಬರಲ್ಲಿ ಅನ್ಯೋನ್ಯತೆ ಇಲ್ಲ ಎಂಬುವುದು ಸ್ವಷ್ಟವಾಗುತ್ತದೆ ಎಂದರು.
ಸಿದ್ದರಾಮಯ್ಯರ ಬಗ್ಗೆ ನಮಗೆ ಗೌರವ ಇದೆ. ಅದರೆ ಅವರಿಗೆ ಇತ್ತೀಚೆಗೆ ಏಕವಚನ ಮತ್ತು ಬಹುವಚನದ ಬಗ್ಗೆ ವ್ಯತ್ಯಾಸದ ಅರಿವು ಇಲ್ಲದಂತಾಗಿದೆ. ಅವರು ಮೈಸೂರಿನ ಕಡೆಯವರಾಗಿದ್ದು ಸ್ವಚ್ಚವಾದ ಕನ್ನಡದ ಪಂಡಿತ್ಯ ಹೊಂದಿದವರೆಂದು ನಾವು ಭಾವಿಸಿದ್ದನ್ನು ಸುಳ್ಳು ಮಾಡಿದ್ದಾರೆ ಎಂದು ವ್ಯಂಗವಾಡಿದರು.
ಬಿಜೆಪಿ ಪಕ್ಷದಲ್ಲಿ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಚುನಾವಣಾ ಅಕಾಂಕ್ಷಿಗಳ ನಡುವೆ ಪೈಪೋಟಿ ಇದೆ ನಿಜ, ಆದರೆ ಅದು ಭಿನ್ನಾಭಿಪ್ರಾಯ ಅಲ್ಲ. ಬಿಜೆಪಿ ರಾಜ್ಯದಲ್ಲಿ ಬಲಾಢ್ಯವಾಗಿದೆ. ಮತ್ತೊಮ್ಮೆ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತ ಎಂದರು
‘ನಮ್ಮಪ್ಪನ ಮೇಲಾಣೆ, ಸಿದ್ರಾಮಣ್ಣ ಸಿಎಂ ಆಗಲ್ಲ ..!‘
ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ನುಡಿದ ಭವಿಷ್ಯವಿದು.
ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ರಾಹುಲ್ ಅವರು ಭಾರತ್ ಜೋಡೋ ಯಾತ್ರೆ ಆರಂಭಿಸುವ ಬದಲು ಕಾಂಗ್ರೆಸ್ ಜೋಡೋ ಯಾತ್ರೆ ಆರಂಭಿಸಬೇಕಿತ್ತು. ಸಿದ್ದು, ಡಿಕೆಶಿಯವರು ಎರಡು ಬಾಗಿಲಾದರೆ, ಮೂರನೇ ಬಾಗಿಲಾಗಿ ಖರ್ಗೆ ಆಯ್ಕೆಯಾಗಿದ್ದಾರೆ. ಹೀಗಾಗಿ, ಸಿದ್ರಾಮಣ್ಣ ಸಿಎಂ ಆಗಲ್ಲ ಎಂದರು.
ಸಿದ್ದರಾಮಯ್ಯನವರ ಅವಧಿಯಲ್ಲಿ ಅತಿ ಹೆಚ್ಚು ಡ್ರಗ್ ಮಾಫಿಯಾ ಇತ್ತು. ಸರ್ಕಾರಿ ಶಾಲೆಗಳಲ್ಲಿ ಡ್ರಗ್‌್ಸ, ಗಾಂಜಾಗಳು ಸಿಗುತ್ತಿದ್ದವು. ಶಿಕ್ಷಕರ ಹಗರಣ, ಪಿಎಸ್‌ಐ ಹಗರಣಗಳು ನಡೆದದ್ದು ಸಿದ್ದರಾಮಯ್ಯ ಅವರ ಅವಧಿಯಲ್ಲಿ. ಅಲ್ಲದೆ, ಅರ್ಕಾವತಿಯಲ್ಲಿ ಮಾಡಿದ ಹಣದಲ್ಲಿ ನೀವು ಸಿಕ್ಕಿ ಹಾಕೋತೀರಿ. ಇವತ್ತು ಸಿದ್ದರಾಮಯ್ಯನವರ ಮೇಲೆ ಲೋಕಾಯುಕ್ತ ಕೇಸ್ ಆಗಿದೆ. ನೀವು ಆವತ್ತೇ ಜೈಲಿಗೆ ಹೋಗಬೇಕಿತ್ತು. ಡಿಕೆಶಿ ಮಾತ್ರ ತಿಹಾರ ಜೈಲಿಗೆ ಹೋಗಲ್ಲ ಎಂದರು.