Chitradurga: ಒಡಹುಟ್ಟಿದ ಅಣ್ಣ-ತಂಗಿಗೆ ಪ್ರಾಂಶುಪಾಲ ಪಟ್ಟ; ಒಂದೇ ದಿನ, 2 ಕಾಲೇಜುಗಳ ಚುಕ್ಕಾಣಿ!

Published : Nov 25, 2026, 05:11 PM IST
Dr. B. Suresh  Dr. B. Jayamma

ಸಾರಾಂಶ

ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿಯ ಒಡಹುಟ್ಟಿದ ಅಣ್ಣ-ತಂಗಿ ಡಾ.ಬಿ.ಸುರೇಶ್ ಮತ್ತು ಡಾ.ಬಿ.ಜಯಮ್ಮ ಅವರು ಒಂದೇ ದಿನ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಾಗಿ ಆಯ್ಕೆಯಾಗಿದ್ದಾರೆ. ಇವರು ಅನುಕ್ರಮವಾಗಿ ಚಳ್ಳಕೆರೆ ಮತ್ತು ಚಿತ್ರದುರ್ಗದ ಕಾಲೇಜುಗಳ ಆಡಳಿತದ ಹೊಣೆ ಹೊತ್ತಿದ್ದಾರೆ.

ಜಡೇಕುಂಟೆ ಮಂಜುನಾಥ್

ಚಳ್ಳಕೆರೆ: ಒಡಹುಟ್ಟಿದ ಅಣ್ಣ ಮತ್ತು ತಂಗಿ ಇಬ್ಬರೂ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಾಗಿ ಆಯ್ಕೆಯಾಗುವ ಮೂಲಕ ಅಪರೂಪದ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.

ಅಣ್ಣ-ತಂಗಿ ಪ್ರಾಂಶುಪಾಲರಾಗಿ ಅಪರೂಪದ ಸಾಧನೆ

ಚಳ್ಳಕೆರೆ ನಗರದ ಪ್ರತಿಷ್ಠಿತ ಎಚ್.ಪಿ.ಪಿ.ಸಿ ಪ್ರಥಮ ದರ್ಜೆ ಕಾಲೇಜಿಗೆ ಡಾ.ಬಿ.ಸುರೇಶ್ ಅವರು ನೂತನ ಪ್ರಾಂಶುಪಾಲರಾಗಿ ಆಯ್ಕೆಯಾಗಿದ್ದರೆ, ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿಗೆ ಅವರ ಸಹೋದರಿ ಡಾ.ಬಿ.ಜಯಮ್ಮ ಅವರು ಪ್ರಾಂಶುಪಾಲರಾಗಿ ಆಯ್ಕೆಯಾಗಿದ್ದಾರೆ.

ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿ ಗ್ರಾಮದ ಬಸಪ್ಪ ಬಸಮ್ಮ ದಂಪತಿಗಳ ಮಕ್ಕಳಾದ ಇವರಿಬ್ಬರೂ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಡಾ.ಸುರೇಶ್ ಮೈಸೂರು ವಿವಿಯಲ್ಲಿ ವಿದ್ಯಾಭ್ಯಾಸ ಮುಗಿಸಿ 2004ರಲ್ಲಿ ಪದವಿ ಕಾಲೇಜು ಉಪನ್ಯಾಸಕರಾಗಿ ಸೇವೆಗೆ ಸೇರಿ ಹೊಸದುರ್ಗ, ಚಿತ್ರದುರ್ಗ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿ ಇದೀಗ ಕೌನ್ಸಲಿಂಗ್ ಮೂಲಕ ಚಳ್ಳಕೆರೆ ಕಾಲೇಜಿಗೆ ಪ್ರಾಂಶುಪಾಲರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇವರ ಸಹೋದರಿ ಡಾ.ಬಿ.ಜಯಮ್ಮ ಧಾರವಾಡದ ಕರ್ನಾಟಕ ವಿವಿಯಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ 2007ರಲ್ಲಿ ಪದವಿ ಕಾಲೇಜು ಉಪನ್ಯಾಸಕರಾಗಿ ಮೊದಲಿಗೆ ಚಳ್ಳಕೆರೆಯಲ್ಲಿ ಕಾರ್ಯನಿರ್ವಹಿಸಿ ಇದೀಗ ಕೌನ್ಸಲಿಂಗ್ ಮೂಲಕ ಪ್ರಾಂಶುಪಾಲರಾಗಿ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು ಸ್ವಾಯತ್ತ ಇಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಅವಿಭಕ್ತ ಕುಟುಂಬದ ಕುಡಿಗಳಿಬ್ಬರ ಸಾಧನೆ

ಇಬ್ಬರೂ ಸಹೋದರ-ಸಹೋದರಿಯರು ಪ್ರಾಂಶುಪಾಲರ ಹುದ್ದೆಗೆ ನಡೆದ ಕೌನ್ಸೆಲಿಂಗ್‌ನಲ್ಲಿ ಆಯ್ಕೆಯಾಗಿದ್ದು, ಒಂದೇ ದಿನ ತಮ್ಮ ತಮ್ಮ ಕಾಲೇಜುಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ. ಒಂದೇ ಕುಟುಂಬದ ಇಬ್ಬರು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಂಶುಪಾಲರ ಜವಾಬ್ದಾರಿ ವಹಿಸಿಕೊಂಡಿರುವುದು ವಿಶೇಷ ಸಂಗತಿಯಾಗಿದೆ.

ಸಾಮಾನ್ಯವಾಗಿ ಒಡಹುಟ್ಟಿದವರು ಒಂದೇ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಹೆಮ್ಮೆಯ ಸಂಗತಿ. ಆದರೆ ಇಲ್ಲಿ ಅಣ್ಣ-ತಂಗಿ ಇಬ್ಬರೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಜವಾಬ್ದಾರಿಯುತ ಹುದ್ದೆ ಅಲಂಕರಿಸಿರುವುದು ಕುಟುಂಬದ ಸಂಭ್ರಮದ ಜೊತೆಗೆ ಶೈಕ್ಷಣಿಕ ವಲಯದಲ್ಲಿಯೂ ಸಂತಸ ಮೂಡಿಸಿದೆ.

ಒಬ್ಬರು ಚಳ್ಳಕೆರೆಯ ಕಾಲೇಜಿನ ಶೈಕ್ಷಣಿಕ ಆಡಳಿತದ ಹೊಣೆ ಹೊತ್ತರೆ, ಮತ್ತೊಬ್ಬರು ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಒಂದೇ ದಿನ ಎರಡು ಕಾಲೇಜುಗಳಿಗೆ ಅಣ್ಣ-ತಂಗಿ ಪ್ರಾಂಶುಪಾಲರಾಗಿ ಕರ್ತವ್ಯಕ್ಕೆ ಹಾಜರಾಗಿರುವ ಸಂಗತಿ ಅಪರೂಪದ ಘಟನೆಯಾಗಿ ಗಮನ ಸೆಳೆದಿದೆ.

ಒಂದೇ ತಾಯಿಯ ಮಡಿಲಲ್ಲಿ ಬೆಳೆದು, ಒಂದೇ ವಿಷಯದ ಕುರಿತು ಸ್ನಾತಕೋತ್ತರ ಪದವಿ ಪಡೆದು ಇಬ್ಬರೂ ಪದವಿ ಕಾಲೇಜಿನ ಉಪನ್ಯಾಸಕರಾಗಿ, ಇದೀಗ ಒಂದೇ ಜಿಲ್ಲೆಯಲ್ಲಿ ಪ್ರಾಂಶುಪಾಲರಾಗಿ ಒಂದೇ ದಿನ ಎರಡು ಕಾಲೇಜುಗಳ ಆಡಳಿತದ ಹೊಣೆ ಹೊತ್ತ ಈ ಅಣ್ಣ-ತಂಗಿಯ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

PREV
Read more Articles on
click me!

Recommended Stories

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಸೈಟ್ ಹಗರಣ ಆರೋಪ; ದೂರು ಕೊಟ್ಟ ಲಕ್ಷ್ಮೀನಾರಾಯಣ!
ರೆನೈಸಾನ್ಸ್ ಬೆಂಗಳೂರು ರೇಸ್ ಕೋರ್ಸ್ ಹೋಟೆಲ್‌ಗೆ ನಷ್ಟ ತಡೆಗಟ್ಟುವಿಕೆ ನಿರ್ದೇಶಕರಾಗಿ ಸಚಿನ್ ಸಂದು ಜಾಧವ್ ನೇಮಕ