ಬೆಂಗ್ಳೂರಿಗೆ 2ನೇ ವಿಮಾನ ನಿಲ್ದಾಣಕ್ಕೆ ಡಿಪಿಆರ್‌: ಸಚಿವ ಎಂ.ಬಿ. ಪಾಟೀಲ್

By Kannadaprabha NewsFirst Published Jun 21, 2024, 9:56 AM IST
Highlights

2023-24ನೇ ಸಾಲಿನಲ್ಲಿ 3.75 ಕೋಟಿ ಪ್ರಯಾಣಿಕರು ಕೆಬಿಎ ಮೂಲಕ ಪ್ರಯಾಣಿಸಿದ್ದಾರೆ. ಅಲ್ಲದೆ, 4 ಲಕ್ಷ ಟನ್ ಗೂ ಹೆಚ್ಚಿನ ಸರಕು ಸಾಗಣೆ ಮಾಡಲಾಗಿದೆ. ಈ ಒತ್ತಡ ವರ್ಷದಿಂದ ವರ್ಷಕ್ಕೆ ಹೆಚ್ಚಲಿದ್ದು, ಅದನ್ನು ಗಮನದಲ್ಲಿಟ್ಟುಗೊಂಡ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಅಗತ್ಯವಿದೆ: ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್
 

ಬೆಂಗಳೂರು(ಜೂ.21):  ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಹಾಗೂ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣದ ಅವಶ್ಯಕತೆಯಿದ್ದು, ಅದಕ್ಕೆ ಸಂಬಂಧಿಸಿದಂತೆ ಸಾಧ್ಯಾಸಾಧ್ಯತೆ ವರದಿ ನೀಡುವಂತೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಎಂ.ಬಿ. ಪಾಟೀಲ್, ದೆಹಲಿ ಮತ್ತು ಮುಂಬೈ ನಂತರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ವು ಮೂರನೇ ಅತಿ ದಟ್ಟಣೆಯ ವಿಮಾನ ನಿಲ್ದಾಣವಾಗಿದೆ. 2023-24ನೇ ಸಾಲಿನಲ್ಲಿ 3.75 ಕೋಟಿ ಪ್ರಯಾಣಿಕರು ಕೆಬಿಎ ಮೂಲಕ ಪ್ರಯಾಣಿಸಿದ್ದಾರೆ. ಅಲ್ಲದೆ, 4 ಲಕ್ಷ ಟನ್ ಗೂ ಹೆಚ್ಚಿನ ಸರಕು ಸಾಗಣೆ ಮಾಡಲಾಗಿದೆ. ಈ ಒತ್ತಡ ವರ್ಷದಿಂದ ವರ್ಷಕ್ಕೆ ಹೆಚ್ಚಲಿದ್ದು, ಅದನ್ನು ಗಮನದಲ್ಲಿಟ್ಟುಗೊಂಡ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಅಗತ್ಯವಿದೆ ಎಂದರು.

Latest Videos

ಮುಂಬೈ ಏರ್‌ಪೋರ್ಟ್‌ನಲ್ಲಿ ಕೂದಲೆಳೆ ಅಂತರದಲ್ಲಿಯೇ ತಪ್ಪಿದ ವಿಮಾನ ದುರಂತ; ವಿಡಿಯೋ ನೋಡಿ

ಕೆಐಎ ನಿರ್ಮಿಸುವಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯು ಮುಂದಿನ 25 ವರ್ಷಗಳವರೆಗೆ (2033ರವರೆಗೆ) 150 ಕಿಮೀ ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವುದಿಲ್ಲ ಎಂದು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಷರತ್ತು ಮುಗಿಯಲು ಇನ್ನೂ ಒಂಬತ್ತು. ವರ್ಷಗಳಿದ್ದು, ಈಗಿನಿಂದಲೇ ಎರಡನೇ ವಿಮಾನನಿಲ್ದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕಿದೆ ಎಂದು ಹೇಳಿದರು.

ಬೆಂಗಳೂರಿನ ಜನಸಂಖ್ಯೆ ಈಗಾಗಲೇ ಒಂದು ಕೋಟಿ ದಾಟಿದ್ದು, ಹಲವು ಜಾಗತಿಕ ಮಟ್ಟದ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸಸುತ್ತಿವೆ. ರಾಜ್ಯವಷ್ಟೇ ಅಲ್ಲದೆ ಆಂಧ್ರಪ್ರದೇಶದ ಕೆಲ ಜಿಲ್ಲೆಗಳ ಜನರೂ ಕೆಐಎ ಮೇಲೆ ಅವಲಂಬಿತರಾಗಿದ್ದಾರೆ. 2033ರ ವೇಳೆಗೆ ಕೆಐಎ ಪ್ರಯಾಣಿಕರ ನಿರ್ವಹಣೆಯ ಒತ್ತಡ ಸಾಕಷ್ಟು ಹೆಚ್ಚಲಿದೆ. 2040ರ ವೇಳೆ ಸರಕು ಸಾಗಣೆ ಪ್ರಮಾಣದ ನಿರ್ವಹಣೆ ಕಷ್ಟವಾಗಲಿದೆ. ಭೂ ಸ್ವಾಧೀನ, ಪರಿಹಾರ ಹಂಚಿಕೆ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ದೀರ್ಘ ಸಮಯ ಬೇಕಾಗಲಿದೆ. ಆದ್ದರಿಂದ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಎರಡನೇ ವಿಮಾನನಿಲ್ದಾಣ ನಿರ್ಮಾಣದೊಂದಿಗೆ ಬೆಂಗಳೂರಿನಾಚೆಗೂ ಕೈಗಾರಿಕಾ ಬೆಳವಣಿಗೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಸಿ.ಸತೀಶ, ಕಾರ್ಯನಿರ್ವಾಹಕ ನಿರ್ದೇಶಕ ಡಿ.ಪಿ.ಪ್ರಕಾಶ ಇತರರಿದ್ದರು.

ಏರ್‌ಪೋರ್ಟ್‌ ಟರ್ಮಿನಲ್‌-1 ಮೇಲ್ದರ್ಜೆಗೆ

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಟರ್ಮಿನಲ್‌-1ರ ನವೀಕರಣಕ್ಕೆ ಮುಂದಾಗಿದ್ದು, ಆಗಸ್ಟ್‌ನಿಂದ ಕಾಮಗಾರಿ ನಡೆಸಲಿದೆ.
2008ರಿಂದ ಕಾರ್ಯಾಚರಣೆ ಆರಂಭಿಸಿರುವ ಟರ್ಮಿನಲ್‌-1ರಲ್ಲಿ ಸದ್ಯ ದೇಶೀಯ ವಿಮಾನ ಸೇವೆಯನ್ನು ಮಾತ್ರ ನೀಡಲಾಗುತ್ತಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಸೇವೆಯನ್ನು ಟರ್ಮಿನಲ್‌-2ರಿಂದ ನೀಡಲಾಗುತ್ತಿದೆ. ಟರ್ಮಿನಲ್‌-1ರ ಸೇವೆಯು ಆರಂಭವಾಗಿ 16 ವರ್ಷಗಳಾಗಿರುವ ಕಾರಣ ಅಲ್ಲಿನ ಹಲವು ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸಬೇಕಿದೆ. ಅದಕ್ಕಾಗಿ ಆಗಸ್ಟ್‌ ತಿಂಗಳಿನಿಂದ ನವೀಕರಣ ಕಾಮಗಾರಿ ಆರಂಭಿಸಲು ಬಿಐಎಎಲ್‌ ನಿರ್ಧರಿಸಿದೆ.

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಲ್ಫ್ ಬ್ಯಾಗ್ ಡ್ರಾಪ್ ಸೌಲಭ್ಯ; ಹೇಗೆ ಕೆಲಸ ಮಾಡುತ್ತೆ?

ಕಾಮಗಾರಿ ಸಂದರ್ಭದಲ್ಲಿ ವಿಮಾನಯಾನ ಸೇವೆಗೆ ಅಡ್ಡಿ ಆಗುವುದನ್ನು ತಡೆಯಲು ಹಂತ ಹಂತವಾಗಿ ಕಾಮಗಾರಿ ನಡೆಸಲು ನಿರ್ಧರಿಸಲಾಗಿದೆ. ಒಂದು ವೇಳೆ ತೊಂದರೆ ಆದರೆ ಕೆಲ ಸೇವೆಗಳನ್ನು ಟರ್ಮಿನಲ್‌-2ಕ್ಕೆ ಸ್ಥಳಾಂತರಿಸುವ ಸಾಧ್ಯತೆಗಳಿವೆ.

ಟರ್ಮಿನಲ್‌-1ರ ಮಾಹಿತಿ ತಂತ್ರಜ್ಞಾನ (ಐಟಿ) ಕೊಠಡಿ ಸೇರಿದಂತೆ ಕೆಲ ಕಚೇರಿಗಳ ಸ್ಥಳಾಂತರಗೊಳಿಸುವುದು, ಬ್ಯಾಗೇಜ್‌ ವ್ಯವಸ್ಥೆ, ಚೆಕ್‌ಇನ್‌, ಡಿಪಾರ್ಚರ್‌ ಲಾಂಜ್‌, ಹೋಲ್ಡ್‌ ರೂಂ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಕಾಮಗಾರಿಯನ್ನು 2026ರ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿಯನ್ನು ಬಿಐಎಎಲ್‌ ಹೊಂದಿದೆ.

click me!