ರಸ್ತೆ ಗುಂಡಿ ದೂರು ಸಲ್ಲಿಸಲು ‘ಪೇಸ್‌ ಆ್ಯಪ್‌’: ಬಿಬಿಎಂಪಿಯಿಂದ ಅಭಿವೃದ್ಧಿ

By Kannadaprabha News  |  First Published Jun 20, 2024, 10:30 PM IST

ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಸ್ತೆ ಗುಂಡಿ ದೂರು ಸಲ್ಲಿಕೆಗಾಗಿ ಪ್ರತ್ಯೇಕವಾಗಿ ‘ಪೇಸ್‌’ (ಪಿಎಸಿಇ) ಆ್ಯಪನ್ನು ಬಿಬಿಎಂಪಿಯು ಅಭಿವೃದ್ಧಿ ಪಡಿಸಿದ್ದು, ಶೀಘ್ರದಲ್ಲಿ ಬಿಡುಗಡೆ ಸಿದ್ಧತೆ ಮಾಡಿಕೊಳ್ಳುತ್ತಿದೆ.


ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಜೂ.20): ಮಳೆಗಾಲ ಆರಂಭಗೊಳ್ಳುತ್ತಿದಂತೆ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳ ಕಾರು-ಬಾರು ಜೋರಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಸ್ತೆ ಗುಂಡಿ ದೂರು ಸಲ್ಲಿಕೆಗಾಗಿ ಪ್ರತ್ಯೇಕವಾಗಿ ‘ಪೇಸ್‌’ (ಪಿಎಸಿಇ) ಆ್ಯಪನ್ನು ಬಿಬಿಎಂಪಿಯು ಅಭಿವೃದ್ಧಿ ಪಡಿಸಿದ್ದು, ಶೀಘ್ರದಲ್ಲಿ ಬಿಡುಗಡೆ ಸಿದ್ಧತೆ ಮಾಡಿಕೊಳ್ಳುತ್ತಿದೆ. 800 ಚದರ ಕಿಲೋ ಮೀಟರ್‌ ವಿಸ್ತೀರ್ಣ ಹೊಂದಿರುವ ಬೆಂಗಳೂರಿನಲ್ಲಿ ಬರೋಬ್ಬರಿ 14 ಸಾವಿರ ಕಿ.ಮೀ. ಉದ್ದದ ರಸ್ತೆಯ ಜಾಲ ಇದೆ. 

Tap to resize

Latest Videos

ಈ ಪೈಕಿ 1,344 ಕಿ.ಮೀ. ಉದ್ದದ 470 ಸಬ್‌ ಆರ್ಟೀರಿಯಲ್‌ ಹಾಗೂ ಆರ್ಟೀರಿಯಲ್‌ ರಸ್ತೆಗಳಿವೆ. ಉಳಿದ 12,529 ಕಿ.ಮೀ ಉದ್ದದ 85,176 ಸಂಖ್ಯೆಯ ವಾರ್ಡ್‌ ರಸ್ತೆಗಳಿವೆ. ಪ್ರತಿ ವರ್ಷ ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ ಬಿಬಿಎಂಪಿಯು ಕೋಟ್ಯಂತರ ರುಪಾಯಿ ವೆಚ್ಚ ಮಾಡಲಿದೆ. ಆದರೂ ಮಳೆಗಾಲ ಆರಂಭಗೊಳ್ಳುತ್ತಿದಂತೆ ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಸಂಚಾರ ಮಾಡುವುದು ಸಾಹಸದ ಕೆಲಸವಾಗಿದೆ. ಅದೇ ಪರಿಸ್ಥಿತಿ ಮತ್ತೆ ಇದೀಗ ನಗರದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ರಸ್ತೆಗಳಲ್ಲಿ ಗುಂಡಿಗಳ ಹಾವಳಿ ಹೆಚ್ಚಾಗಿದೆ.ಜನರಿಂದ ದೂರಿಗೆ ಪ್ರತ್ಯೇಕ ಆ್ಯಪ್‌:

ಗ್ಯಾರಂಟಿಗಾಗಿ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ ತೈಲ ಬೆಲೆ ಏರಿಕೆ: ಸಿಎಂ ‌ಸಿದ್ದರಾಮಯ್ಯ

ಈವರೆಗೆ ಬಿಬಿಎಂಪಿಯು ಫಿಕ್ಸ್‌ ಮೈ ಸ್ಟ್ರೀಟ್‌ (ಎಫ್ಎಂಎಸ್‌) ಆ್ಯಪ್‌ ಮೂಲಕ ರಸ್ತೆ ಗುಂಡಿ ದೂರುಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಲಾಗುತ್ತಿತ್ತು. ಈ ಆ್ಯಪ್‌ ನಲ್ಲಿ ರಸ್ತೆ ಗುಂಡಿಗೆ ಸಂಬಂಧಿಸಿದ ದೂರುಗಳಿಗಿಂತ ಇತರೆ ದೂರುಗಳು ಹೆಚ್ಚಾಗಿ ಸಲ್ಲಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯು ಇದೀಗ ರಸ್ತೆ ಗುಂಡಿ ದೂರು ಸಲ್ಲಿಕೆ ಮಾಡುವುದಕ್ಕೆ ಪ್ರತ್ಯೇಕ ಆ್ಯಪನ್ನು ಅಭಿವೃದ್ಧಿ ಪಡಿಸಿದೆ. ಶೀಘ್ರದಲ್ಲಿ ಈ ಆ್ಯಪನ್ನು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಿಡುಗಡೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏನಿದು ಪೇಸ್‌ ಆ್ಯಪ್‌?: ರಸ್ತೆ ಗುಂಡಿ ಸಂಬಂಧಿ ದೂರು ಸಲ್ಲಿಕೆಗೆ ಬಿಬಿಎಂಪಿ ಅಭಿವೃದ್ಧಿ ಪಡಿಸಿರುವ ಆ್ಯಪ್‌ಗೆ ‘ಪೇಸ್‌’ ಎಂದು ಹೆಸರಿಸಲಾಗಿದೆ. ರಸ್ತೆ ಗುಂಡಿಗೆ ಸಂಬಂಧಿಸಿದಂತೆ ಈ ಆ್ಯಪನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿ ಫೋಟೋ ತೆಗದು ಸಲ್ಲಿಸಿದರೆ ಸಾಕು ಸಂಬಂಧಪಟ್ಟ ಎಂಜಿನಿಯರ್‌ ಮೂಲಕ ರಸ್ತೆ ಗುಂಡಿ ಮುಚ್ಚುವುದಕ್ಕೆ ನೇಮಕ ಮಾಡಲಾದ ಗುತ್ತಿಗೆದಾರರಿಗೆ ಮಾಹಿತಿ ರವಾನೆ ಆಗಲಿದೆ. ಗುತ್ತಿಗೆದಾರರು ರಸ್ತೆ ಗುಂಡಿ ಮುಚ್ಚಿ ರೀ ಫೋಟೋ ಅಪ್ ಲೋಡ್‌ ಮಾಡಿದ ನಂತರ ದೂರು ಪರಿಹಾರವಾಗಲಿದೆ. ದೂರು ಸಲ್ಲಿಕೆದಾರರಿಗೂ ಸಂದೇಶ ರವಾನೆ ಆಗಲಿದೆ ಎಂದು ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಸಮಯ ನಿಗದಿ: ರಸ್ತೆ ಗುಂಡಿಗೆ ಸಂಬಂಧಿಸಿದಂತೆ ಸಲ್ಲಿಕೆಯಾದ ದೂರು ಪರಿಹಾರಕ್ಕೆ ಪ್ರತಿಯೊಂದು ಹಂತಕ್ಕೂ ಗಡುವು ನಿಗದಿ ಪಡಿಸಲಾಗಿದೆ. ಗಡುವು ಮೀರಿದ ತಕ್ಷಣ ಮೇಲಾಧಿಕಾರಿ ಗಮನಕ್ಕೆ ದೂರು ರವಾನೆ ಆಗಲಿದೆ. ಗುತ್ತಿಗೆದಾರರಿಂದ ವಿಳಂಬ ಉಂಟಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಆ್ಯಪ್‌ ಸಹಕಾರಿಯಾಗಲಿದೆ.

ಮಾನವ ರಹಿತ ಬಿಲ್ಲಿಂಗ್‌ ವ್ಯವಸ್ಥೆ: ಪೇಸ್‌ ಆ್ಯಪ್‌ನಲ್ಲಿ ಮಾನವ ರಹಿತ ವ್ಯವಸ್ಥೆ ಮಾಡಲಾಗಿದೆ. ಎಲ್ಲವೂ ತಂತ್ರಜ್ಞಾನ ಆಧಾರಿತವಾಗಿ ನಡೆಯಲಿದೆ. ಗುಂಡಿ ಮುಚ್ಚುವ ಗುತ್ತಿಗೆದಾರರು ತಮ್ಮ ಕೆಲಸದ ಬಿಲ್‌ ಸಲ್ಲಿಕೆಗೆ ಅಲೆದಾಡಬೇಕಾಗಿಲ್ಲ. ಎಲ್ಲವೂ ಆ್ಯಪ್‌ನಲ್ಲಿಯೇ ದಾಖಲು ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಹ್ಲಾದ್‌ ತಿಳಿಸಿದ್ದಾರೆ.

PACE ವಿವರಣೆ
P: ರಸ್ತೆ ಗುಂಡಿ (Pothole)
A: ನೆರವು (Assistance)
C: ನಾಗರಿಕರು (Citizen)
E: ಪಾಲ್ಗೊಳ್ಳುವಿಕೆ (Engagement)

ಕರಾರಿನಂತೆ ಸಂಸ್ಕರಿಸಿದ ನೀರನ್ನು ಕೋಲಾರಕ್ಕೆ ಹರಿಸಿ: ಸಚಿವ ಬೈರತಿ ಸುರೇಶ್‌

ಮೊದಲ ಹಂತದಲ್ಲಿ ರಸ್ತೆ ಗುಂಡಿಗಳನ್ನು ಯಶಸ್ವಿಯಾಗಿ ಮುಚ್ಚಲಾಗಿದ್ದು, ಎರಡನೇ ಹಂತದಲ್ಲಿ ಕೋಲ್ಡ್‌ ಮಿಕ್ಸ್‌ ಬಳಕೆ ಮಾಡಿ ರಸ್ತೆ ಗುಂಡಿ ಮುಚ್ಚಲಾಗುತ್ತಿದೆ. ರಸ್ತೆಗಳನ್ನು ವಾಹನ ಸಂಚಾರಕ್ಕೆ ಮಾತ್ರವಲ್ಲದೇ, ನೀರಿನ ಕೊಳವೆ, ವಿದ್ಯುತ್‌ ಸೇರಿದಂತೆ ಮೂಲಸೌಕರ್ಯ ಸರಬರಾಜು ಮಾಡುವುದಕ್ಕೂ ಬಳಕೆ ಮಾಡುವುದರಿಂದ ರಸ್ತೆ ಗುಂಡಿ ಸಂಖ್ಯೆ ಹೆಚ್ಚಾಗಿ ಕಂಡು ಬರಲಿದೆ.
-ಬಿ.ಎಸ್‌.ಪ್ರಹ್ಲಾದ್‌, ಮುಖ್ಯ ಎಂಜಿನಿಯರ್‌, ರಸ್ತೆ ಮತ್ತು ಮೂಲಸೌಕರ್ಯ ವಿಭಾಗ.

click me!