ತಾಲೂಕಿನಲ್ಲಿ ನನ್ನ ಏಳಿಗೆಯನ್ನು ಸಹಿಸದ ಕೆಲವರು ಅಭ್ಯರ್ಥಿ ವಿಷಯದಲ್ಲಿ ಗೊಂದಲ ಸೃಷ್ಟಿಸುತ್ತಿದ್ದು ತಿಪಟೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಪಕ್ಷದ ವರಿಷ್ಠರಾದ ಎಚ್.ಡಿ. ಕುಮಾರಸ್ವಾಮಿಯವರೇ ಖುದ್ದು ಹೇಳಿದ್ದು ಕಾರ್ಯಕರ್ತರು ಇಂತಹ ಊಹಪೋಹಗಳಿಗೆ ಕಿವಿಗೊಡದಿರಿ ಎಂದು ಜೆಡಿಎಸ್ ಅಭ್ಯರ್ಥಿ ಕೆ.ಟಿ. ಶಾಂತಕುಮಾರ್ ತಿಳಿಸಿದರು.
ತಿಪಟೂರು : ತಾಲೂಕಿನಲ್ಲಿ ನನ್ನ ಏಳಿಗೆಯನ್ನು ಸಹಿಸದ ಕೆಲವರು ಅಭ್ಯರ್ಥಿ ವಿಷಯದಲ್ಲಿ ಗೊಂದಲ ಸೃಷ್ಟಿಸುತ್ತಿದ್ದು ತಿಪಟೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಪಕ್ಷದ ವರಿಷ್ಠರಾದ ಎಚ್.ಡಿ. ಕುಮಾರಸ್ವಾಮಿಯವರೇ ಖುದ್ದು ಹೇಳಿದ್ದು ಕಾರ್ಯಕರ್ತರು ಇಂತಹ ಊಹಪೋಹಗಳಿಗೆ ಕಿವಿಗೊಡದಿರಿ ಎಂದು ಜೆಡಿಎಸ್ ಅಭ್ಯರ್ಥಿ ಕೆ.ಟಿ. ಶಾಂತಕುಮಾರ್ ತಿಳಿಸಿದರು.
ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಹಟ್ಣ ಗ್ರಾಮದ ದೇವತೆ ಶ್ರೀ ಉಡಿಸಲಮ್ಮ ದೇವಿದಲ್ಲಿ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಅವರು, ತಾಲೂಕಿನ ಬಿದಿರೆಗುಡಿ ಅಮ್ಮ ಹಾಗೂ ಹತ್ಯಾಳು ದೇವರುಗಳ ಆಶಿರ್ವಾದದಿಂದ ಅನೇಕ ವರ್ಷಗಳಿಂದಲೂ ತಾಲೂಕಿನಲ್ಲಿ ಜನಸೇವೆ ಮಾಡುತ್ತಾ ಜನರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಾ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದೇನೆ. ಆದರೆ ಕೆಲವರು ಸುಖಾಸುಮ್ಮನೆ ಜೆಡಿಎಸ್ ಅಭ್ಯರ್ಥಿ ವಿಷಯದಲ್ಲಿ ಗೊಂದಲ ಸೃಷ್ಟಿಸುತ್ತಾ ತಪ್ಪು ಮಾಹಿತಿಯನ್ನು ಕಾರ್ಯಕರ್ತರಲ್ಲಿ ಹುಟ್ಟುಹಾಕುತ್ತಿದ್ದಾರೆ. ಇಂತಹ ವಿಷಯಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಖುದ್ದು ಎಚ್.ಡಿ. ಕುಮಾರಸ್ವಾಮಿಯವರೇ ಪಂಚರತ್ನ ರಥಯಾತ್ರೆಯಲ್ಲಿ ನೀವೆ ಅಭ್ಯರ್ಥಿ ಎಂದು ಹೇಳಿ ಪಕ್ಷ ಸಂಘಟಿಸಿ ಒಗ್ಗಟ್ಟಿನಿಂದ ಗೆದ್ದು ಬರಬೇಕೆಂದು ಹೇಳಿದ್ದಾರೆ. ನಿಮಗೆ ಪಕ್ಷದ ಬಗ್ಗೆ ಗೌರವ ಅಭಿಮಾನವಿದ್ದರೆ ಬೆಂಬಲ ಕೊಟ್ಟು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಿ ಎಂದರು.
ಪಂಚರತ್ನ ರಥಯಾತ್ರೆ ಯಶಸ್ವಿ : ತಾಲೂಕಿನಲ್ಲಿ ಪಂಚರತ್ನ ರಥಯಾತ್ರೆಯು ಸಾವಿರಾರು ಜನರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆದಿದ್ದು, ಪಂಚರತ್ನ ಯೋಜನೆ ಎಲ್ಲರ ಜನಮನದಲ್ಲಿದ್ದು ರೈತರಿಗೆ, ಮಹಿಳೆಯರಿಗೆ, ನಿರುದ್ಯೋಗಿಗಳಿಗೆ, ಅಂಗವಿಕಲರಿಗೆ ಸಾಕಷ್ಟುಅನುಕೂಲವಾಗಲಿದೆ. ಈ ಯೋಜನೆಗಳು ಜಾರಿಯಾಗಬೇಕಾದರೆ ಜೆಡಿಎಸ್‌ನ್ನು ಗೆಲ್ಲಿಸಬೇಕು. ರಾಷ್ಟ್ರೀಯ ಪಕ್ಷಗಳಿಂದ ದೇಶ ಅಭಿವೃದ್ಧಿ ಅಸಾಧ್ಯವಾಗಿದ್ದು ಪ್ರಾದೇಶಿಕ ಪಕ್ಷದಿಂದ ಮಾತ್ರ ಗ್ರಾಮೀಣ ಭಾಗದ ನೀರಾವರಿ, ರಸ್ತೆ, ಮೂಲಭೂತ ಸೌಲಭ್ಯಗಳನ್ನು ತರಲು ಸಾಧ್ಯ. ಆದ್ದರಿಂದ ಜೆಡಿಎಸ್ ಪಕ್ಷವನ್ನು ಈ ಬಾರಿ ಅಧಿಕಾರಕ್ಕೆ ತರಬೇಕೆಂದು ಜನತೆಯಲ್ಲಿ ಮನವಿ ಮಾಡಿದರು.
ತಾಲೂಕಿನ ಅಭಿವೃದ್ಧಿಗಾಗಿ ನನ್ನ ರಾಜಕಾರಣ: ತಾಲೂಕಿನಲ್ಲಿ ಹಲವು ವರ್ಷಗಳಿಂದಲೂ ಸೇವೆ ಮಾಡುತ್ತಿರುವ ನಾನು ಎಲ್ಲೇ ಹೋದರು ಜನತೆ ನನ್ನನ್ನು ಗುರ್ತಿಸಿ ಅವರ ಕಷ್ಟಸುಖಗಳನ್ನು ಹೇಳಿಕೊಳ್ಳುತ್ತಾರೆ. ಬಡವರ ಹಾಗೂ ರೈತ ಪರವಾಗಿ ಯಾವತ್ತೂ ಜೊತೆಗಿರುತ್ತೇನೆ. ಯಾವುದೇ ಅಧಿಕಾರವಿಲ್ಲದೆ ಇಷ್ಟೆಲ್ಲಾ ಸೇವೆ ಮಾಡಿರುವ ನನಗೆ ನೀವು ರಾಜಕೀಯವಾಗಿ ಶಕ್ತಿ ತುಂಬಿದರೆ ನಿಮ್ಮ ಮನೆ ಮಗನಂತೆ ಕೆಲಸ ಮಾಡುವೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಮತ್ತು ರಾಜ್ಯದಾದ್ಯಂತ ಕುಮಾರಣ್ಣನವರ ಅಲೆ ಎದ್ದಿದ್ದು, ಕಾರ್ಯಕರ್ತರು ಸಂಘಟಿತರಾಗಿ ಕೆ.ಟಿ.ಶಾಂತಕುಮಾರ್‌ರವರನ್ನು ಗೆಲ್ಲಿಸುವ ಮೂಲಕ ಎಚ್‌ಡಿಕೆಯವರನ್ನು ಮತ್ತೊಮ್ಮೆ ಮುಖ್ಯಮಂತ್ರಿಗಳನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಶಿವಸ್ವಾಮಿ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ಬಗ್ಗೆ ತಾಲೂಕಿನಲ್ಲಿ ಗೊಂದಲ ಬೇಡ. ಕೆ.ಟಿ. ಶಾಂತಕುಮಾರ್ ಅಧಿಕೃತ ಅಭ್ಯರ್ಥಿ. ಎಚ್.ಡಿ. ಕುಮಾರಸ್ವಾಮಿಯವರು ಹಲವಾರು ವಿನೂತನ ಯೋಜನೆಗಳನ್ನು ಹಾಕಿಕೊಂಡಿದ್ದು ಅವುಗಳು ಜಾರಿಯಾಗಬೇಕಾದರೆ ಜೆಡಿಎಸ್‌ನ್ನು ಅಧಿಕಾರಕ್ಕೆ ತರಬೇಕು. ಕರ್ನಾಟಕಕ್ಕೆ ಎಚ್.ಡಿ ಕುಮಾರಸ್ವಾಮಿ, ತಿಪಟೂರಿಗೆ ಕೆ.ಟಿ. ಶಾಂತಕುಮಾರ್ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಜಣ್ಣ, ನಗರ ಅಧ್ಯಕ್ಷ ಕಂಚಘಟ್ಟರಘು, ಮುಖಂಡರಾದ ಮಂಜಣ್ಣ, ಪ್ರಸಾದ್, ಶ್ರೀನಿವಾಸ್, ಗೋವಿಂದಪ್ಪ, ನಾಗಣ್ಣ, ಸುದರ್ಶನ್, ಮೋಹನ್‌ಬಾಬು ಸೇರಿದಂತೆ ಹಟ್ಣ ಗ್ರಾಮಸ್ಥರು ಭಾಗವಹಿಸಿದ್ದರು. ನಂತರ ಅಭ್ಯರ್ಥಿ ಕೆ.ಟಿ. ಶಾಂತಕುಮಾರ್ ಮತಪ್ರಚಾರ ಮಾಡಿದರು.