ಉಡುಪಿ ಜಿಲ್ಲೆಯ ಪರ್ಕಳದಲ್ಲಿ ಸತ್ತಂತೆ ನಟಿಸಿದ ನಾಯಿ, ಚಿರತೆಯ ಅಟ್ಯಾಕ್ ನಿಂದ ಬಚಾವಾಗಿದೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರದಿ; ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಆ.13): ಚುರುಕಿನ ಹೆಜ್ಜೆಯ ಚಿರತೆಗೆ, ಚಾಲಾಕಿ ನಾಯಿಯೊಂದು ಚಳ್ಳೆ ಹಣ್ಣು ತಿನ್ನಿಸಿದೆ. ಸತ್ತೇ ಹೋಗಿದೆ ಎಂದು ಭಾವಿಸಿದ್ದ ನಾಯಿ, ಬದುಕಿ ಚಮತ್ಕಾರ ತೋರಿಸಿದೆ. ಸತ್ತಂತೆ ನಟಿಸಿ ನಾಯಿ, ಚಿರತೆಯ ಅಟ್ಯಾಕ್ ನಿಂದ ಬಚಾವಾಗಿದೆ. ಇಷ್ಟಕ್ಕೂ ಈ ಘಟನೆ ನಡೆದಿರುವುದು ಉಡುಪಿ ಜಿಲ್ಲೆಯ ಪರ್ಕಳದಲ್ಲಿ. ಮಣಿಪಾಲ ಸಮೀಪ ಇರುವ ಪರ್ಕಳ ಪೇಟೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಪದೇಪದೇ ಚಿರತೆಯ ಕಾಟ ಹೆಚ್ಚಾಗಿದೆ. ಇಲ್ಲಿನ ಜನವಸತಿ ಪ್ರದೇಶಗಳಿಗೆ ದಾಳಿ ಮಾಡಿ ಸಾಕು ನಾಯಿಗಳು, ಕೋಳಿಗಳನ್ನು ಕದ್ದೊಯ್ಯುವುದು ಮಾಮೂಲಾಗಿದೆ. ಈ ಹಿಂದೆಯೂ ಇಲ್ಲಿ ಅನೇಕ ಬಾರಿ ಚಿರತೆ ದಾಳಿ ನಡೆದಿತ್ತು. ಮಣಿಪಾಲ ವಿಶ್ವವಿದ್ಯಾಲಯದ ಎದುರಿಗಿರುವ ಕ್ವಾಟರ್ಸ್ ಗೆ ಚಿರತೆ ನುಗ್ಗಿ ದಾಂಧಲೇ ಎಬ್ಬಿಸಿತ್ತು. ಪೀಕಾಕ್ ಪಾಯಿಂಟ್ ಪರಿಸರದಲ್ಲಿ ತಿಂಗಳ ಹಿಂದೆ ಚಿರತೆ ಕಾಣಿಸಿಕೊಂಡಿತ್ತು. ಇದೀಗ ಪರ್ಕಳದ ಸರದಿ! ಎರಡು ದಿನಗಳ ಹಿಂದೆ ಕರಾವಳಿ ಭಾಗದಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಚಿರತೆಯೊಂದು ನಾಯಿಯನ್ನು ಹಿಡಿಯಲು ಹೊಂಚು ಹಾಕುವ ದೃಶ್ಯ ಕುತೂಹಲ ಹುಟ್ಟಿಸಿತ್ತು.
undefined
ಸುಮಾರು ಒಂದುವರೆ ನಿಮಿಷಗಳ ಕಾಲ ಹೊಂಚು ಹಾಕಿ ಕುಳಿತು, ಮನೆ ಮುಂದಿರುವ ಉಯ್ಯಾಲೆಯ ಅಡಿ ಅವಿತು. ಬಳಿಕ ಇದ್ದಕ್ಕಿದ್ದಂತೆ ನಾಯಿಯ ಮೇಲೆ ಎರಗಿ ಕಚ್ಚುವ ದೃಶ್ಯ ಕಂಡು ಜನ ಬೆಚ್ಚಿಬಿದ್ದಿದ್ದರು.
ಪರ್ಕಳ ಸಮೀಪದ ಹೆರ್ಗ ಗ್ರಾಮದ ಗೋಳಿಕಟ್ಟೆಯ ಬಾಲಚಂದ್ರ ಕೆದಿಲಾಯ ಎಂಬವರ ಮನೆಯಲ್ಲಿ ಈ ಘಟನೆ ನಡೆದಿತ್ತು. ಕೆದಿಲಾಯರ ಮನೆಯ ಸಾಕುನಾಯಿ ಟಾಮಿ ಚಿರತೆಯ ದಾಳಿಗೆ ಒಳಗಾಗಿತ್ತು. ಮನೆ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಚಿರತೆ ಬೇಟೆಯಾಡುವ ದೃಶ್ಯ ಎಲ್ಲರ ಗಮನ ಸೆಳೆದಿತ್ತು.
ಈ ವಿಡಿಯೋ ನೋಡಿದವರೆಲ್ಲರೂ ನಾಯಿ ಸತ್ತೇ ಹೋಗಿದೆ ಎಂದು ಭಾವಿಸಿದ್ದರು. ಸತ್ತ ಸಾಕು ನಾಯಿಗಾಗಿ ಎಲ್ಲರೂ ಮರುಕ ಪಟ್ಟಿದ್ದರು. ಆದರೆ ಅಲ್ಲಿ ನಡೆದ ನಾಟಕ ನೋಡಿದರೆ ನಿಜಕ್ಕೂ ವಿಚಿತ್ರ ಎನಿಸುತ್ತದೆ.
ಸತ್ತಂತೆ ನಟಿಸಿ ಬದುಕಿದ ಟಾಮಿ!
ಚಿರತೆಯ ದಾಳಿಗೆ ಒಳಗಾದ ಟಾಮಿ ಸತ್ತೇ ಹೋಗಿದೆ ಎಂದು ಭಾವಿಸಿದ್ದೇನೋ ನಿಜ, ಯಾಕಂದರೆ ಚಿರತೆ ನಾಯಿಯ ಕುತ್ತಿಗೆಯನ್ನು ಸುಮಾರು 3-4 ನಿಮಿಷಗಳ ಕಾಲ ಕಚ್ಚಿ ಹಿಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಚಿರತೆಯಿಂದ ದಾಳಿಗೊಳಗಾದ ಟಾಮಿ, ಕೆಲಕಾಲ ಒದ್ದಾಡಿ, ಬಳಿಕ ಸತ್ತು ಹೋದಂತೆ ಬಿದ್ದುಕೊಂಡಿತ್ತು.
ರೈಲು ಬರುವುದನ್ನು ಲೆಕ್ಕಿಸದೇ ಹಳಿಯಲ್ಲಿದ್ದ ಬೀದಿನಾಯಿಯ ರಕ್ಷಣೆ: ಯುವಕನ ಕಾರ್ಯಕ್ಕೆ ಶ್ಲಾಘನೆ
ಇದೇ ವೇಳೆ ಶಬ್ದ ಕೇಳಿದ ಮನೆಮಾಲಕರು ವಿದ್ಯುತ್ ದೀಪ ದ ಸ್ವಿಚ್ ಆನ್ ಮಾಡಿದ್ದಾರೆ. ಸತ್ತಂತೆ ಬಿದ್ದಿರುವ ನಾಯಿಯನ್ನು ಅಲ್ಲೇ ಬಿಟ್ಟು ಚಿರತೆಯ ಸ್ಥಳದಿಂದ ಪರಾರಿಯಾಗಿದೆ. ಬದುಕಲು ಅವಕಾಶವೇ ಇಲ್ಲದಿದ್ದರೂ ಟಾಮಿ ಬದುಕಿ ಬಂದಿದೆ.
ಸಿಪಿಆರ್ ಮಾಡಲು ಕಲಿತ ಶ್ವಾನ: ಹಸ್ಕಿ ನಾಯಿಯ ಮುದ್ದಾದ ವಿಡಿಯೋ ವೈರಲ್
ಸದ್ಯಕ್ಕೆ ಕೆದಿಲಾಯರ ಮನೆಯ ನಾಯಿ ಟಾಮಿ ಸುರಕ್ಷಿತವಾಗಿದೆ. ಕುತ್ತಿಗೆಗೆ ಘಾಸಿಯಾಗಿದ್ದರೂ ಜೀವಂತವಾಗಿ ಉಳಿದಿದೆ. ಸಕಾಲದಲ್ಲಿ ಉತ್ತಮ ನಾಟಕ ಮಾಡಿ ಟಾಮಿ ಬದುಕಿ ಬಂದಿದೆ. ಅದೇ ವೇಳೆ ವಿದ್ಯುತ್ ದೀಪ ಬೆಳಗಿದ್ದರಿಂದ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ. ಚಾರ್ಲಿಗಿಂತಲೂ ಟಾಮಿಯ ನಟನೆ ಚೆನ್ನಾಗಿತ್ತು ಎಂದು ಜನ ತಮಾಷೆ ಮಾಡುತ್ತಿದ್ದಾರೆ!