
ಬೆಂಗಳೂರು (ಆ.17): ನಗರದ ಪ್ರತಿ ಮನೆಗೆ ಭೇಟಿ ನೀಡಿ ಆರೋಗ್ಯ ಸಮೀಕ್ಷೆ ನಡೆಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಮ್ಮಿಕೊಂಡಿರುವ ‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ’ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಮೊದಲ ಹಂತದಲ್ಲಿ 27 ವಿಧಾನಸಭಾ ಕ್ಷೇತ್ರಗಳ 54 ವಾರ್ಡ್‌ಗಳಲ್ಲಿ ವೈದ್ಯರ ತಂಡ ಮನೆಗಳಿಗೆ ಭೇಟಿ ನೀಡಿ ಕುಟುಂಬದ ಸದಸ್ಯರ ಆರೋಗ್ಯ ಮಾಹಿತಿ ಸಂಗ್ರಹಿಸಲಿದೆ. ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಕೊರೋನಾ ನಿಯಂತ್ರಣ ಸಂಬಂಧ ‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕೋವಿಡ್ ಪತ್ತೆಗೆ ಆ.16ರಿಂದ ಮನೆಮನೆಗೆ ವೈದ್ಯರು
ನಗರದ 29 ಲಕ್ಷ ಮನೆಗಳಿಗೂ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುವ ಗುರಿಯಿದೆ. ಮೊದಲ ಹಂತದಲ್ಲಿ ನಗರದ 27 ವಿಧಾನಸಭಾ ಕ್ಷೇತ್ರಗಳ ಆಯ್ದ 54 ವಾರ್ಡ್‌ಗಳಲ್ಲಿ ಆರೋಗ್ಯ ತಪಾಸಣೆ ನಡೆಯಲಿದೆ ಎಂದರು.
ವೈದ್ಯರ ತಂಡವು ಪ್ರತಿ ಮನೆಗೂ ಭೇಟಿ ನೀಡಿ ಸದಸ್ಯರ ಆರೋಗ್ಯ ವಿಚಾರಿಸಲಿದೆ. ಮನೆಯಲ್ಲಿ ಎಷ್ಟು ಮಂದಿ ವಾಸವಿದ್ದಾರೆ, ಎಷ್ಟು ಮಂದಿಗೆ ಲಸಿಕೆ ನೀಡಲಾಗಿದೆ, ಮೊದಲ ಲಸಿಕೆ ಹಾಗೂ ಎರಡನೇ ಲಸಿಕೆ ಪಡೆದಿರುವ ಬಗ್ಗೆ, ಕ್ಯಾನ್ಸರ್, ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಇನ್ನಿತರೆ ರೋಗಗಳಿರುವ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇದರಿಂದ ಕೊರೋನಾ ಲಸಿಕೆ ಪಡೆದವರ ನಿಖರ ಮಾಹಿತಿ ಲಭ್ಯವಾಗಲಿದೆ. ಕೊರೋನಾ ಸೋಂಕು ಇರುವವರನ್ನು ಪತ್ತೆಹಚ್ಚಿ ಸಕಾಲಕ್ಕೆ ಚಿಕಿತ್ಸೆ ನೀಡಲು ಸಹಾಯವಾಗಲಿದೆ ಎಂದು ಹೇಳಿದರು.
ಪ್ರತಿ ವಾರ್ಡ್‌ಗೆ 5 ತಂಡ: ಪ್ರತಿ ವಾರ್ಡ್‌ಗೆ 5 ವೈದ್ಯರ ತಂಡ ನಿಯೋಜಿಸಲಾಗಿದೆ. ಈ ತಂಡದಲ್ಲಿ ಓರ್ವ ವೈದ್ಯಾಧಿಕಾರಿ, ಅರೆವೈದ್ಯಕೀಯ ಸಿಬ್ಬಂದಿ ಸೇರಿದಂತೆ ನಾಲ್ಕು ಮಂದಿ ಇರಲಿದ್ದಾರೆ. ಪ್ರತಿ ತಂಡಕ್ಕೆ ನಿತ್ಯ 50 ಮನೆಗೆ ಭೇಟಿ ನೀಡುವ ಗುರಿ ನಿಗದಿಪಡಿಸಲಾಗಿದೆ. ಪ್ರತಿ ತಂಡಕ್ಕೂ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮನೆಗೆ ಭೇಟಿ ನೀಡಿದಾಗ ಕೊರೋನಾ ಬಗ್ಗೆ ಅರಿವು ಮೂಡಿಸುವ ಕರಪತ್ರಗಳನ್ನು ನೀಡಲಾಗುವುದು ಎಂದರು.
ಕಾಗದ ರಹಿತ ಸಮೀಕ್ಷೆ: ಸಮೀಕ್ಷೆ ವೇಳೆ ಪಡೆದ ಮಾಹಿತಿಯನ್ನು ಕಾಗದ ಬಳಕೆ ಮಾಡದೆ ಪ್ರತಿ ದಿನ ನಿಗದಿತ ಬಿಬಿಎಂಪಿ ಪಿಎಚ್‌ಎಎಸ್‌ಟಿ ತಂತ್ರಾಂಶದಲ್ಲಿ ನಮೂದಿಸಲು ವೈದ್ಯರ ತಂಡಕ್ಕೆ ಸೂಚಿಸಲಾಗಿದೆ. ಕೊರೋನಾ ಸೋಂಕಿತರು ಪತ್ತೆಯಾದಲ್ಲಿ, ಸದರಿ ಸೋಂಕಿತರಿಗೆ ಹೋಂ ಐಸೋಲೇಷನ್ ಕಿಟ್ ನೀಡಲಾಗುತ್ತದೆ. ಮನೆಯ ಸದಸ್ಯರಿಗೆ ಸಾಂತ್ವನ ಹಾಗೂ ಧೈರ್ಯ ತುಂಬಲ್ಲಿದ್ದಾರೆ. ಹಾಸಿಗೆ, ಆ್ಯಂಬುಲೆನ್‌ಸ್, ಔಷಧ ಹುಡುಕಾಟ ಇನ್ನಿತರೆ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಲು ಸಹಾಯ ಮಾಡಲಾಗುವುದು ಎಂದು ಸಚಿವ ಆರ್.ಅಶೋಕ್ ಹೇಳಿದರು. ಪಾಲಿಕೆ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತಾ, ಶಾಸಕ ರಿಜ್ವಾನ್ ಅರ್ಷದ್, ವಿಶೇಷ ಆಯುಕ್ತರಾದ ಡಿ.ರಂದೀಪ್, ತುಳಸಿ ಮದ್ದಿನೇನಿ, ಮನೋಜನ್ ಜೈನ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು