ವೈದ್ಯರು ಸತ್ತಿದೆ ಎಂದ ಮಗು ಆರೋಗ್ಯವಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಗರ್ಭಿಣಿಯ ಸ್ಕ್ಯಾನಿಂಗ್ ಮಾಡಿದ ವೈದ್ಯರು ಮಗು ಸತ್ತಿದೆ ಎಂದು ಅಬಾರ್ಷನ್ ಮಾತ್ರೆಗಳನ್ನೂ ಕೊಟ್ಟಿದ್ದಾರೆ. ಮಹಿಳೆ ಎರಡು ದಿನ ಮಾತ್ರೆಗಳನ್ನೂ ಸೇವಿಸಿದ್ದಾರೆ. ನಂತರದಲ್ಲಿ ಮಗು ಆರೋಗ್ಯವಾಗಿರುವುದು ಗಮನಕ್ಕೆ ಬಂದಿದೆ.
ಮಂಡ್ಯ(ಆ.22): ಗರ್ಭಿಣಿ ಸ್ಕ್ಯಾನಿಂಗ್ ಮಾಡಿಸಲು ಹೋದಾಗ ಮಗು ಮೃತಪಟ್ಟಿದೆ. ಗರ್ಭಪಾತ ಮಾಡಿಸಿಕೊಳ್ಳಿ ಎಂದು ತಪ್ಪು ವರದಿ ನೀಡಿದ ಕೆ.ಆರ್ .ಪೇಟೆ ಪಟ್ಟಣದ ಕುಶಲ್ ಡಯಾಗ್ನೋಸ್ಟಿಕ್ ಸ್ಕ್ಯಾನಿಂಗ್ ಸೆಂಟರ್ ಎದುರು ಮುಂದೆ ಪ್ರತಿಭಟನೆ ನಡೆಸಿದ ಗರ್ಭಿಣಿಯ ಸಂಬಂಧಿಕರು ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗರ್ಭಪಾತ ಮಾಡಿಸಿಕೊಳ್ಳಲು ಸಲಹೆ:
ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ ಯೋಧ ನಾಗೇಶ್ ಪತ್ನಿ ಗರ್ಭಿಣಿ ದಿವ್ಯಕುಮಾರಿ ಕಳೆದ ಮೂರು ದಿನಗಳ ಹಿಂದೆ ವೈದ್ಯರ ಸಲಹೆಯ ಮೇರೆಗೆ ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್‌ಗೆ ಹೋಗಿ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಆಗ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯ ಡಾ.ಎಚ್.ಹರೀಶ್, ಮಗು ಹೊಟ್ಟೆಯಲ್ಲಿಯೇ ಸತ್ತು ಹೋಗಿದೆ. ಹಾಗಾಗಿ ಗರ್ಭಪಾತ ಮಾಡಿಸಿಕೊಳ್ಳಿ ಎಂದು ಹೇಳಿ ಕಳುಹಿಸಿದ್ದಾರೆ.
KRS ಜಲಾಶಯದ ಸುತ್ತ ಮುತ್ತ ನಿಷೇಧಾಜ್ಞೆ ಜಾರಿ
ಇವರ ಸ್ಕ್ಯಾನಿಂಗ್ ರಿಪೋರ್ಟ್ ಆಧಾರದ ಮೇಲೆ ಹಾಗೂ ವೈದ್ಯರ ಸಲಹೆಯ ಮೇರೆಗೆ ಅಬಾರ್ಷನ್ ಮಾತ್ರೆಗಳನ್ನು ಎರಡು ಭಾರಿ ಸೇವಿಸಿದ್ದಾರೆ. ಆದರೂ ಯಾವುದೇ ಬದಲಾವಣೆ ಕಾಣಲಿಲ್ಲ. ಆಗ ಪಾಂಡವಪುರ ಖಾಸಗಿ ಆಸ್ಪತ್ರೆಗೆ ಹೋಗಿ ಮತ್ತೆ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಅಲ್ಲಿ ಮಗು ಬದುಕಿದೆ. ಆರೋಗ್ಯವಾಗಿದೆ, ಗರ್ಭಪಾತ ಮಾಡಿಸಿಕೊಳ್ಳಬೇಡಿ ಎಂದು ಅಲ್ಲಿನ ವೈದ್ಯರು ಸಲಹೆ ನೀಡಿದ್ದಾರೆ.
ಸುಳ್ಳು ಸ್ಕ್ಯಾನಿಂಗ್ ಮಾಡಿಸ್ತೀರಾ..?
ತಕ್ಷಣ ವಾಪಸ್ ಬಂದ ಗರ್ಭಿಣಿ ಮಹಿಳೆ ದಿವ್ಯಕುಮಾರಿ ಮತ್ತು ಅವರ ಪೋಷಕರು ಕೆ.ಆರ್.ಪೇಟೆ ಪಟ್ಟಣದ ಕುಶಾಲ್ ಡಯಾಗ್ನೋಸ್ಟಿಕ್ ಸ್ಕ್ಯಾನಿಂಗ್ ಸೆಂಟರ್ ವೈದ್ಯರಿಗೆ ಪಾಂಡವಪುರ ಆಸ್ಪತ್ರೆಯಲ್ಲಿ ನೀಡಿರುವ ಸ್ಕ್ಯಾನಿಂಗ್ ವರದಿ ತೋರಿಸಿದಾಗ ಮತ್ತೆ ಸ್ಕ್ಯಾನಿಂಗ್ ಮಾಡಿ ಈಗ ಮಗು ಉಸಿರಾಡುತ್ತಿದೆ. ಏನೋ ತಪ್ಪಾಗಿದೆ ಕ್ಷಮಿಸಿ ಎಂದು ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಗರ್ಭಿಣಿ ದಿವ್ಯಕುಮಾರಿ ಹಾಗೂ ಬಂಧುಗಳು ಜನಕ್ಕೆ ಸುಳ್ಳು ಸ್ಕ್ಯಾನಿಂಗ್ ವರದಿ ನೀಡಿದ್ದಾರಾ ಎಂದು ಆಕ್ರೋಶ ವ್ಯಕ್ತಪಡಿಸಿ ಸ್ಕ್ಯಾನಿಂಗ್ ಸೆಂಟರ್ ಮುಂದೆ ಪ್ರತಿಭಟನೆ ನಡೆಸಿ ಬಾಗಿಲು ಮುಚ್ಚಿಸಿದರು. ಸ್ಕ್ಯಾನಿಂಗ್ ನಡೆಸಲು ಅವಕಾಶ ನೀಡಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿ ಕೂಡಲೇ ಕಾನೂನು ಕ್ರಮ ಕೈಗೊಂಡು ಸ್ಕ್ಯಾನಿಂಗ್ ಸೆಂಟರ್ ಅನ್ನು ಮುಚ್ಚಿಸಬೇಕು. ತಪ್ಪು ಸ್ಕ್ಯಾನಿಂಗ್ ವರದಿ ನೀಡಿರುವ ವೈದ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.