ನಿರಂತರ ಮಳೆಗೆ ಜಿಲ್ಲೆಯ ಸರ್ಕಾರಿ ಶಾಲೆಗಳು ಶಿಥಿಲಗೊಂಡಿವೆ. ಶಿಥಿಲಗೊಂಡ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಕೂರಿಸಬೇಡಿ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಖಡಕ್ ಸೂಚನೆ ನೀಡಿದ್ದಾರೆ.
ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ
ಹಾವೇರಿ (ಜು.12): ನಿರಂತರ ಮಳೆಗೆ ಜಿಲ್ಲೆಯ ಸರ್ಕಾರಿ ಶಾಲೆಗಳು ಶಿಥಿಲಗೊಂಡಿವೆ. ಶಿಥಿಲಗೊಂಡ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಕೂರಿಸಬೇಡಿ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಖಡಕ್ ಸೂಚನೆ ನೀಡಿದ್ದಾರೆ. ಇಂದು ಮಳೆ ಹಾನಿ ಕುರಿತು ಹಾವೇರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ವೇಳೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಿವರಾಮ್ ಹೆಬ್ಬಾರ್, ಪರ್ಯಾಯ ವ್ಯವಸ್ಥೆ ಮಾಡಿ ತರಗತಿ ನಡೆಸಬೇಕು. ಇದಕ್ಕಾಗಿ ಲಭ್ಯವಿರುವ ಅನುದಾನ ಬಳಸಿಕೊಂಡು ಕೆಲಸ ಮಾಡಬೇಕು. ಪುಟ್ಟ ಪುಟ್ಟ ಮಕ್ಕಳು ಶಾಲೆಗಳಲ್ಲಿ ಕುಳಿತಿರುತ್ತವೆ.
undefined
ಮಳೆ ಬಂದು ಶಾಲೆಗಳ ಗೋಡೆಗಳು ಶಿಥಿಲಾವಸ್ಥೆ ತಲುಪಿದ್ದರೆ ಕೂಡಲೇ ಮಕ್ಕಳನ್ನು ಬೇರೆ ಕಡೆ ಸುರಕ್ಷಿತ ಜಾಗದಲ್ಲಿ ಕೂರಿಸಿ ತರಗತಿ ನಡೆಸಬೇಕು. ಇಲ್ಲದಿದ್ದರೆ ಅವಘಡಗಳಾಗಿ ಮಕ್ಕಳ ಜೀವಕ್ಕೇನಾದರೂ ಹೆಚ್ಚು ಕಡಿಮೆ ಆದರೆ ಸಂಬಂಧಿಸಿದ ಅಧಿಕಾರಿ ಮೇಲೆ ಕ್ರಮಿನಲ್ ಕೇಸ್ ದಾಖಲಿಸಬೇಕಾಗುತ್ತೆ ಎಂದು ಖಡಕ್ ಎಚ್ಚರಿಕೆ ನೀಡಿದರು. ‘ಜಿಲ್ಲೆಯಲ್ಲಿ ಇದುವರೆಗೆ ಮಳೆಯಿಂದ ಹಾನಿಯಾಗಿರುವ ಮನೆಹಾನಿ, ಬೆಳೆಹಾನಿ ಹಾಗೂ ಮೂಲ ಸೌಕರ್ಯಗಳ ಹಾನಿಯ ಸರ್ವೆಯನ್ನು ಜುಲೈ 13ರ ಸಂಜೆಯೊಳಗಾಗಿ ಪೂರ್ಣಗೊಳಿಸಬೇಕು’ ಎಂದು ಸಚಿವರಾದ ಅರಬೈಲ್ ಶಿವರಾಮ್ ಹೆಬ್ಬಾರ್ ಅವರು ತಾಕೀತು ಮಾಡಿದರು.
Haveri: ಪಲ್ಟಿಯಾದ ಬಸ್: ಸಾವಿನ ದವಡೆಯಿಂದ ಸ್ವಲ್ಪದರಲ್ಲೇ ಪಾರಾದ ಪ್ರಯಾಣಿಕರು
ಸಭೆಯಲ್ಲಿ ಮಳೆಹಾನಿ ಸರ್ವೇ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕ್ಷೇತ್ರ ಮಟ್ಟದಲ್ಲಿ ತಾವು ಕೆಲಸ ಮಾಡುತ್ತಿಲ್ಲ, ಹಳೆಯ ಘಟನೆಯಿಂದ ನೀವು ಪಾಠ ಕಲಿತಿಲ್ಲ. ಮೂರು ದಿನ ಸತತ ಮಳೆಯಾದರೂ ವರದಿ ಮಾಡಿಲ್ಲ. ಎಷ್ಟು ಹಾನಿಯಾಗಿದೆ ಎಂಬ ಮಾಹಿತಿ ನಿಖರವಾಗಿಲ್ಲ. ತಾವು ಏನು ಕೆಲಸಮಾಡುತ್ತೀರಿ ಎಂದು ತಹಶೀಲ್ದಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮಳೆಯಿಂದ ಯಾವ ಯಾವ ಗ್ರಾಮಗಳಲ್ಲಿ ಏನೇನೂ ಹಾನಿಯಾಗಿದೆ ಎಂಬ ಮಾಹಿತಿಯನ್ನು ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆಯುವ ಎಲ್ಲ ಅವಕಾಶಗಳಿದ್ದರೂ ತಾವುಏಕೆ ವರದಿ ಪಡೆದಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳು ನಿಮ್ಮ ಹಿಡಿತದಲ್ಲಿ ಇಲ್ಲವೇ ಎಂದು ಚುಚ್ಚಿದರು. ನಾಳೆಯಿಂದಲೇ ಸರ್ವೇ ಕಾರ್ಯ ಆರಂಭಿಸಬೇಕು. ಸರ್ವೇಗೂ ಮುನ್ನ ಆಯಾ ತಾಲೂಕು ಶಾಸಕರೊಂದಿಗೆ ಚರ್ಚಿಸಬೇಕು.
ಸಾಧ್ಯವಾದರೆ ಸರ್ವೇ ಕಾರ್ಯಕ್ಕೆ ಅವರನ್ನು ಕರೆದೊಯ್ಯಬೇಕು. ಮಾನವೀಯ ಮತ್ತು ಉದಾರವಾದಿ ನೆಲೆಯಲ್ಲಿ ಸರ್ವೇ ಕಾರ್ಯಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು. ಸರ್ವೇ ಕಾರ್ಯದ ನೇತೃತ್ವವನ್ನು ಉಪವಿಭಾಗಾಧಿಕಾರಿಗಳು ವಹಿಸಿಕೊಳ್ಳಬೇಕು. ತಹಶೀಲ್ದಾರಗಳಿಗೆ ಸ್ಪಷ್ಟ ಸೂಚನೆ ನೀಡಿ, ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಿ ವರದಿ ಸಿದ್ಧಪಡಿಸಬೇಕು. ಇದೇ ಮಾದರಿಯಲ್ಲಿ ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಿ ಇಲಾಖೆಗಳು ಮನೆಹಾನಿ, ಬೆಳೆಹಾನಿ, ರಸ್ತೆ, ಸೇತುವೆ, ಅಂಗನವಾಡಿ, ಶಾಲಾ ಕೊಠಡಿಗಳು ಸೇರಿದಂತೆ ಮೂಲ ಸೌಕರ್ಯಗಳ ಹಾನಿ ಕುರಿತಂತೆ ವಾಸ್ತವಾಂಶ ಹಾಗೂ ಮಾನವೀಯ ನೆಲೆಯಲ್ಲಿ ಸರ್ವೇ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ನಿಮ್ಮ ವಿಳಂಬದಿಂದ ಜನಪ್ರತಿನಿಧಿನಿಗಳ ಮನೆ ಬಾಗಿಲಿನಲ್ಲಿ ತೊಂದರೆಗೊಳಗಾದ ಜನರು ಕುಳಿತಿದ್ದಾರೆ. ಎಷ್ಟು ಸಾಧ್ಯವೋ ಎಷ್ಟು ಬೇಗ ವರದಿ ಮಾಡಬೇಕು. ಮುಂದಿನ ಒಂದು ತಿಂಗಳಕಾಲ ವಿಶ್ರಾಂತಿ ರಹಿತ ಕೆಲಸ ಮಾಡಬೇಕು. ಜನರೊಂದಿಗೆ, ಜನಪ್ರತಿನಿಧಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಿ ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪನಿಧಿಯಲ್ಲಿ ರೂ.26 ಕೋಟಿ ಅನುದಾನವಿದೆ. ಪ್ರತಿ ತಹಶೀಲ್ದಾರ ಪಿಡಿ ಖಾತೆಯಲ್ಲಿ ರೂ.ಒಂದು ಕೋಟಿ ಅನುದಾನವಿದೆ. ಮಳೆಯಿಂದ ಜೀವಹಾನಿಯಾದ 24 ತಾಸಿನೊಳಗಾಗಿ ಪರಿಹಾರ ಕೊಡಬೇಕು.
ಹಾವೇರಿ: ಹಂದಿಗಳ ಕಾಟಕ್ಕೆ ಕಂಗಾಲಾದ ರೈತರು..!
ಪರಿಹಾರ ನೀಡಲು ಹಾಗೂ ಮೂಲ ಸೌಕರ್ಯಗಳ ದುರಸ್ತಿಗೆ ಯಾವುದೇ ಅನುದಾನದ ಕೊರತೆಯಿಲ್ಲ. ತ್ವರಿತ ಸರ್ವೇ ಕಾರ್ಯಮುಗಿಸಿ ತ್ವರಿತ ಪರಿಹಾರ ಪಾವತಿಸಿ, ಮೂಲ ಸೌಕರ್ಯಗಳ ದುರಸ್ತಿಗೆ ಅನುದಾನ ಬಳಸಿ, ಲಭ್ಯವಿರುವ ಅನುದಾನ ಖಾಲಿಯಾದರೆ ಸರ್ಕಾರದಿಂದ ಜಿಲ್ಲೆಗೆ ಹೆಚ್ಚಿನ ಅನುದಾನ ತರಲಾಗುವುದು. ಹೆಚ್ಚಿನ ಅನುದಾನ ಬಳಕೆಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು. ಮಳೆಯಿಂದ ಶಿಥಿಲವಾದ ಶಾಲಾ ಕೊಠಡಿಯಲ್ಲಿ ತರಗತಿ ನಡೆಸಬಾರದು. ಒಂದೊಮ್ಮೆ ತರಗತಿ ನಡೆಸಿ ಅವಘಡ ಸಂಭವಿಸಿದರೆ ಶಿಕ್ಷಣಾಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.