ಅಕ್ರಮ ರೆಸಾರ್ಟ್‌ ತೆರವಿಗೆ ಸಿಎಂ ಬೊಮ್ಮಾಯಿ ತಡೆ

By Kannadaprabha NewsFirst Published Oct 2, 2021, 12:05 PM IST
Highlights

* ಗಂಗಾವತಿ ಅಕ್ರಮ ರೆಸಾರ್ಟ್‌ಗಳ ತೆರವುಗೊಳಿಸದಂತೆ ಸಿಎಂ ಸೂಚನೆ
* ಸಿಎಂ ಬೊಮ್ಮಾಯಿ ಭೇಟಿಯಾದ ರೆಸಾರ್ಟ್‌ ಮಾಲೀಕರ ನಿಯೋಗ
* ಅರಣ್ಯ, ಪ್ರವಾಸೋದ್ಯಮ, ಹಂಪಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆದೇ ನಿರ್ಣಯ ಕೈಗೊಳ್ಳಿ
 

ಗಂಗಾವತಿ(ಅ.02):  ತಾಲೂಕಿನ ಹಂಪಿ(Hampi) ವಿಶ್ವ ಪರಂಪರೆ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಅಕ್ರಮ ರೆಸಾರ್ಟ್‌ಗಳ ತೆರವುಗೊಳಿಸಬಾರದು. ಇದಕ್ಕೆ ಸಂಬಂಧಿಸಿದಂತೆ ಸಂಸದರ, ಶಾಸಕರ, ಗ್ರಾಮ ಪಂಚಾಯಿತಿ ಅಧ್ಯಕ್ಷರ ಮತ್ತು ಅರಣ್ಯಇಲಾಖೆ, ಪ್ರವಾಸೋದ್ಯಮ ಮತ್ತು ಹಂಪಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆದು ನಿರ್ಣಯ ಕೈಗೊಳ್ಳುವಂತೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳು ರೆಸಾರ್ಟ್‌ಗಳನ್ನು(Resort) ತೆರವುಗೊಳಿಸುವಂತೆ ಆದೇಶ ನೀಡಿದ ಬೆನ್ನ ಹಿಂದೆಯೆ ತಾಲೂಕಿನ ರೆಸಾರ್ಟ್‌ ಮಾಲೀಕರ ನಿಯೋಗ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ರೆಸಾರ್ಟ್ಗಳನ್ನು ತೆರವುಗೊಳಿಸುವುದಕ್ಕೆ ಆಸ್ಪದ ನೀಡಬಾರದೆಂದು ಕೋರಿದರು. ಇದಕ್ಕೆ ಸ್ಪಂದಿಸಿರುವ ಸಿಎಂ ಸಭೆ ಕರೆದು ನಿರ್ಣಯ ಕೈಗೊಳ್ಳುವಂತೆ ತಿಳಿಸಿದ್ದಾರೆ

ಸೆ. 27ರಂದು ಈ ಕುರಿತು ಜಿಲ್ಲಾಧಿಕಾರಿಗಳು, ತಹಸೀಲ್ದಾರರಿಗೆ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿ ತೆರವುಗೊಳಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಆದೇಶ ಪತ್ರದಲ್ಲಿ ತಿಳಿಸಿದ್ದರು.

ಗಂಗಾವತಿ: ಅಂಜನಾದ್ರಿ ಪ್ರದೇಶದಲ್ಲಿ ಮತ್ತೆ ಅಕ್ರಮ ರೆಸಾರ್ಟ್‌

ಗಂಗಾವತಿ(Gangavati) ತಾಲೂಕಿನ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ 15 ಗ್ರಾಮಗಳು ಇದ್ದು, ಈ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಪಟ್ಟಾಜಮೀನುಗಳಲ್ಲಿ ಭೂ ಪರಿವರ್ತನೆ ಮಾಡಿಕೊಳ್ಳದೆ ಪ್ರಾಧಿಕಾರದಿಂದ, ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆಯದೇ ಅನಧಿಕೃತ ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡಿ ಅಕ್ರಮವಾಗಿ ರೆಸಾರ್ಟ್‌ ನಡೆಸುತ್ತಿರುವುದರಿಂದ ಧಾರ್ಮಿಕ ಕ್ಷೇತ್ರ ಎನಿಸಿಕೊಂಡಿರುವ ಅಂಜನಾದ್ರಿ ಕಲುಷಿತಗೊಂಡಿದ್ದು, ಇದರಿಂದ ಪ್ರವಾಸಗರಿಗೆ ತೊಂದರೆಯಾಗುತ್ತಿದೆ. ಕಾರಣ ಅಕ್ರಮ ವಾಣಿಜ್ಯ ಚಟುವಟಿಕೆ ನಡೆಸುವ ಕಟ್ಟಡ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು.

ಈ ಪ್ರದೇಶದಲ್ಲಿ ಮಾಸ್ಟರ್‌ ಪ್ಲಾನ್‌ ತಿದ್ದುಪಡಿಯಲ್ಲಿದ್ದು, ಅನುಮೋದನೆ ಆಗಿಲ್ಲದಿರುವುದರಿಂದ ಈ ಹಿಂದೆ ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶದ ಪ್ರಕಾರ ವ್ಯಾಪ್ತಿಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ರೆಸಾರ್ಟ್ಮಾಲೀಕರಿಗೆ ಆದೇಶ ನೀಡಿದ್ದರು.

ಗಂಗಾವತಿ: ವಿರೂಪಾಪುರಗಡ್ಡೆಯಲ್ಲಿ​ನ ಅಕ್ರಮ ರೆಸಾರ್ಟ್‌ ತೆರವು

ಜಿಲ್ಲಾ ಉಸ್ತುವಾರಿ ಸಚಿವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ(Halappa Achar), ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ರೆಸಾರ್ಟ್‌ ಮಾಲೀಕರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರೆಸಾರ್ಟ್ ಉಳಿಸಿ ಎಂಬ ಬೇಡಿಕೆ ಇಟ್ಟಿದ್ದಾರೆ.

ಹಂಪಿ ಪ್ರದೇಶ ಅಭಿವೃದ್ಧಿಯಾದಂತೆ ಆನೆಗೊಂದಿ ಪ್ರದೇಶದಲ್ಲಿರುವ ಪ್ರವಾಸೋದ್ಯಮ ಪ್ರಗತಿಯಾಗಬೇಕಾಗಿದೆ. 10 ವರ್ಷಕ್ಕೊಮ್ಮೆ ಮಾಸ್ಟರ್‌ ಪ್ಲಾನ್‌ ತಿದ್ದುಪಡಿಯಾಗುತ್ತಿದೆ. ಕಾರಣ ಈ ಪ್ರದೇಶದಲ್ಲಿ ಅಂಜನಾದ್ರಿ, ಪಂಪಾಸರೋವರ, ವಾಲಿ ಕಿಲ್ಲಾ ಸೇರಿದಂತೆ ಐತಿಹಾಸಿಕ ಪ್ರದೇಶ ಇಲ್ಲಿದ್ದು, ಪ್ರವಾಸಿಗರಿಗೆ ಅನುಕೂಲವಾಗುವ ಉದ್ದೇಶದಿಂದ ಹೋಮ್ಸ್ಟೇಗಳಿಗೆ ಸಹಕರಿಸುವಂತೆ ಮುಖ್ಯಮಂತ್ರಿಗಳಿಗೆ ಕೋರಲಾಗಿದೆ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ. 
 

click me!