
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ವೀರಭದ್ರೇಶ್ವರ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಧರ್ಮೋತ್ಥಾನ ಸಮ್ಮೇಳನ ಹಾಗೂ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿ ಧಾರ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳ ಮಹತ್ವವನ್ನು ಒತ್ತಿಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ ಮತ್ತು ದೇವರ ನೆನಪು ಭಕ್ತಿಯ ಮೂಲ. ಈ ಮೂರರ ನೆನಪುಗಳು ಮನುಷ್ಯತ್ವದ ಮೂಲವಾಗಿವೆ. ಧರ್ಮ ಉಳಿದರೆ ಧರ್ಮವೇ ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆ ನಮಗೆ ಶಕ್ತಿ ತುಂಬುತ್ತದೆ” ಎಂದು ಹೇಳಿದರು.
ವೀರಭದ್ರ ದೇವರ ವಿಚಾರದಲ್ಲಿ ರಕ್ಷಣೆಯ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದ ಅವರು, ಮನುಷ್ಯನ ಬದುಕಿಗೆ ದೇವರ ನಂಬಿಕೆ ಅಗತ್ಯ ಎಂದು ತಿಳಿಸಿದರು. “ಮನುಷ್ಯರಿಗೆ ದೇವರು ಬೇಕು. ಇಲ್ಲವಾದರೆ ಬದುಕಿಗೆ ಅರ್ಥ ನೀಡಲು ಸಾಧ್ಯವಾಗುವುದಿಲ್ಲ. ಈ ದೇಶದ ಆಧ್ಯಾತ್ಮಿಕ ಮೂಲವೇ ಶಿವ. ಶಿವನಿಗಿಂತ ಶ್ರೇಷ್ಠವಾದದ್ದು ಮತ್ತೊಂದಿಲ್ಲ” ಎಂದು ಅವರು ಅಭಿಪ್ರಾಯಪಟ್ಟರು.
“ನಿಂಬೆಹಣ್ಣಿಗಿಂತ ಶ್ರೇಷ್ಠವಾದ ಹುಳಿ ಇಲ್ಲ, ದುಂಬಿಗಿಂತ ಕಪ್ಪಿಲ್ಲ ಎನ್ನುವಂತೆ, ಶಂಭುವಿಗಿಂತ ಶ್ರೇಷ್ಠನಾದ ದೇವರು ಇಲ್ಲ. ಇದಕ್ಕಿಂತ ದೊಡ್ಡ ಗುಣವೆಂದರೆ ನಂಬಿಕೆ. ನಮಗೆಲ್ಲಾ ಅತ್ಯಂತ ದೊಡ್ಡ ನಂಬಿಕೆಯ ಸಂಕೇತವೇ ಶಿವ” ಎಂದು ಅವರು ಹೇಳಿದರು.
ದೇವಾಲಯಗಳು ಭಕ್ತರು ಮತ್ತು ಭಗವಂತನ ನಡುವೆ ಸಂಬಂಧ ಬೆಳೆಸುವ ಪವಿತ್ರ ಸ್ಥಳಗಳಾಗಿವೆ. “ದೇವರು ವರವೂ ಕೊಡುವುದಿಲ್ಲ, ಶಾಪವೂ ಕೊಡುವುದಿಲ್ಲ. ಆದರೆ ಬದುಕಿನಲ್ಲಿ ಮುಂದುವರಿಯಲು ಅವಕಾಶ ಮಾತ್ರ ನೀಡುತ್ತಾನೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಈ ಭಾಗದ ಅಭಿವೃದ್ಧಿಗೆ ಶಾಸಕ ಗಣೇಶ್ ಹುಕ್ಕೇರಿ ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದು ಪ್ರಶಂಸಿಸಿದ ಅವರು, “ನಾನು ಎಷ್ಟು ದಿನ ಅಧಿಕಾರದಲ್ಲಿರುತ್ತೇನೆ ಎಂಬುದು ಮುಖ್ಯವಲ್ಲ. ಆದರೆ ಇಂತಹ ದೊಡ್ಡ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದು ನನಗೆ ಸಂತೋಷದ ಸಂಗತಿ” ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿರುವ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಅವರ ಸೇವೆಯನ್ನು ಕೂಡ ಅವರು ಸ್ಮರಿಸಿದರು. “ನಾನು ಇಲ್ಲಿ ಉಪ ಮುಖ್ಯಮಂತ್ರಿಯಾಗಿ ಬಂದಿಲ್ಲ. ಶ್ರೀಗಳು ಮಾಡುತ್ತಿರುವ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳ ಬಗ್ಗೆ ನನಗೆ ಗೊತ್ತಿದೆ. ನಾನು ವೀರಗಂಗಾಧರ ಅಜ್ಜನ ಪರಮ ಶಿಷ್ಯ” ಎಂದು ಹೇಳಿದರು.
ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶವನ್ನು ಶ್ರೀಗಳು ನೀಡುತ್ತಿದ್ದು, ಧರ್ಮದ ಮೂಲಕವೇ ವಿಶ್ವದಲ್ಲಿ ಶಾಂತಿ ಸಾಧ್ಯ ಎಂಬುದನ್ನು ಅವರು ಒತ್ತಿಹೇಳಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. “ಧರ್ಮ ಯಾವುದಾದರೂ ಇರಬಹುದು, ಆದರೆ ತತ್ವ ಒಂದೇ. ದೇವರು ಒಬ್ಬನೇ, ಹೆಸರುಗಳು ಮಾತ್ರ ಅನೇಕ” ಎಂದು ಅವರು ಅಭಿಪ್ರಾಯಪಟ್ಟರು.
ಪಂಚಪೀಠದ ಧರ್ಮಶ್ರೀಗಳು ಇಡೀ ದೇಶಕ್ಕೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಮಾರ್ಗದರ್ಶನವನ್ನು ನಾವು ಉಳಿಸಿಕೊಂಡು ಹೋಗಬೇಕು ಎಂದು ಅವರು ಕರೆ ನೀಡಿದರು. “ಮಾನವ ಜೀವನದಲ್ಲಿ ಏನನ್ನಾದರೂ ಸಾಧಿಸುವ ಶಕ್ತಿ ದೇವರು ಕೊಡುತ್ತಾನೆ. ಆದರೆ ಮನಸ್ಸಿಗೆ ಶಾಂತಿ ಬೇಕಾದರೆ ಇಂತಹ ಮಠಗಳು ಮತ್ತು ಧಾರ್ಮಿಕ ಕೇಂದ್ರಗಳು ಅಗತ್ಯ” ಎಂದು ಅವರು ಹೇಳಿದರು.
ರಾಜಕಾರಣದಲ್ಲಿ ಧರ್ಮ ಇರಬೇಕು ಹೊರತು ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಸ್ಪಷ್ಟಪಡಿಸಿದ ಅವರು, ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ ಮತ್ತು ಸಹೋದರತ್ವವನ್ನು ಬೆಳೆಸುತ್ತವೆ ಎಂದರು. ಇಂದು ಕ್ಯಾಬಿನೆಟ್ ಇದೆ, ನಾಳೆ ಬಜೆಟ್ ಇದೆ. ಮುಖ್ಯಮಂತ್ರಿಗಳು ಬರಲೇಬೇಕು ಅಂದ್ರೂ ಕ್ಯಾಬಿನೆಟ್ ಮುಂದಕ್ಕೆ ಹಾಕಿಸಿ ಇಲ್ಲಿಗೆ ಬಂದಿದ್ದೇನೆ. ಈ ಭಾಗದ ನೀರಾವರಿ ಕ್ಷೇತ್ರ ಅಭಿವೃದ್ಧಿಗೆ ಡಿಕೆ ಶಿವಕುಮಾರ್ ಬದ್ದನಾಗಿದ್ದೇನೆ. ತಮ್ಮ ಆಶೀರ್ವಾದ ನಮ್ಮ ಮೇಲೂ ಹಾಗೂ ನಮ್ಮ ಸರ್ಕಾರದ ಮೇಲೂ ಇರಲಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿಯನ್ನು ಕೊಂಡಾಡಿದರು. “ರಾಜ್ಯದ ಧೈರ್ಯಶೀಲ ಉಪ ಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಅವರು ಹಿಡಿದ ಕೆಲಸವನ್ನು ಸಾಧಿಸುವವರೆಗೆ ಬಿಡುವುದಿಲ್ಲ. ಚಿಕ್ಕೋಡಿ ಮತ್ತು ಯಡೂರು ಕ್ಷೇತ್ರಗಳ ಅಭಿವೃದ್ಧಿಗೆ ಅವರು ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರು ಶ್ರೀಶೈಲದ ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮತ್ತು ಕಾಶಿಯ ಜಗದ್ಗುರು ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಶಾಸಕ ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕೂಡ ಡಿ.ಕೆ. ಶಿವಕುಮಾರ್ ಅವರಿಗೆ ಸಾಥ್ ನೀಡಿದರು. ಯಡೂರು ಗ್ರಾಮದ ಕಾಡದೇವರು ಮಠದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಧರ್ಮೋತ್ಥಾನ ಕಾರ್ಯಕ್ರಮವು ಭಕ್ತರು ಹಾಗೂ ಸಾರ್ವಜನಿಕರ ಅಪಾರ ಉಪಸ್ಥಿತಿಯಲ್ಲಿ ಭಕ್ತಿಭಾವದಿಂದ ನೆರವೇರಿತು.