
ಕಾರವಾರ/ಭಟ್ಕಳ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಉಂಟಾಗಬಹುದು ಅಥವಾ ಇಂಧನ ದರ ಏರಿಕೆ ಆಗಬಹುದು ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹಬ್ಬಿದ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ದಾಂಡೇಲಿ ಪಟ್ಟಣಗಳಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳ ದೀರ್ಘ ಸಾಲು ಕಂಡುಬಂದಿದೆ. ಮಂಗಳವಾರದಿಂದಲೇ ಆರಂಭವಾದ ಈ ಗೊಂದಲ ಬುಧವಾರವೂ ಮುಂದುವರಿದಿದ್ದು, ಗುರುವಾರ ಕೂಡ ಹಲವೆಡೆ ಅದೇ ಪರಿಸ್ಥಿತಿ ಕಾಣಿಸಿಕೊಂಡಿದೆ.
ಭಟ್ಕಳ ಪಟ್ಟಣದಲ್ಲಿ ಜನರು ಆತಂಕದಿಂದ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ತುಂಬಿಸಿಕೊಳ್ಳಲು ಬಂಕ್‌ಗಳಿಗೆ ಧಾವಿಸಿದ ಪರಿಣಾಮ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳ ದೀರ್ಘ ಸರದಿ ಸಾಲು ಉಂಟಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವದಂತಿಗೆ ಕಿವಿಗೊಟ್ಟ ಹಲವರು ವಾಹನಗಳಿಗೆ ಮಾತ್ರವಲ್ಲದೆ ಬಾಟಲಿ, ಕ್ಯಾನ್‌ಗಳಲ್ಲೂ ಪೆಟ್ರೋಲ್ ಸಂಗ್ರಹಿಸಲು ಮುಂದಾದರು.
ಇದಕ್ಕೆ ಸಮಾನವಾದ ಪರಿಸ್ಥಿತಿ ದಾಂಡೇಲಿ ಪಟ್ಟಣದಲ್ಲೂ ಕಂಡುಬಂತು. ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರು ಪೆಟ್ರೋಲ್ ಬಂಕ್‌ಗಳ ಪೈಕಿ ಒಂದರಲ್ಲಿ ಈಗಾಗಲೇ ಇಂಧನ ಖಾಲಿಯಾದ ಹಿನ್ನೆಲೆ ಬಂದ್ ಆಗಿದ್ದು, ಉಳಿದ ಎರಡು ಬಂಕ್‌ಗಳಲ್ಲಿ ಗ್ರಾಹಕರ ನೂಕುನುಗ್ಗಲು ಉಂಟಾಯಿತು. ನಿನ್ನೆ ರಾತ್ರಿ ಕೂಡ ಹಲವರು ತಮ್ಮ ವಾಹನಗಳನ್ನು ಬಂಕ್ ಮುಂದೆ ನಿಲ್ಲಿಸಿ ಸಾಲಿನಲ್ಲಿ ಕಾಯುತ್ತಿದ್ದ ದೃಶ್ಯ ಕಂಡುಬಂದಿತು.
ಪಟ್ಟಣದ ನಾಲ್ಕು ಪೆಟ್ರೋಲ್ ಬಂಕ್‌ಗಳಲ್ಲೂ ಬೆಳಗಿನ ಜಾವದಿಂದಲೇ ವಾಹನಗಳ ದೀರ್ಘ ಸಾಲು ಕಾಣಿಸಿಕೊಂಡಿತ್ತು. ವೃತ್ತದ ಬಳಿ ಇರುವ ಪೆಟ್ರೋಲ್ ಬಂಕ್‌ನಲ್ಲಿ ಮಧ್ಯಾಹ್ನದ ಹೊತ್ತಿಗೆ ಪೆಟ್ರೋಲ್ ಸ್ಟಾಕ್ ಸಂಪೂರ್ಣ ಖಾಲಿಯಾಗಿತ್ತು. ಜನರು ವಾಹನಗಳಿಗೆ ಪೆಟ್ರೋಲ್ ತುಂಬಿಸಿಕೊಂಡು ಹೋಗುವುದರ ಜೊತೆಗೆ ಕ್ಯಾನ್‌ಗಳು ಹಾಗೂ ಬಾಟಲಿಗಳಲ್ಲೂ ಇಂಧನ ಸಂಗ್ರಹಿಸಲು ಮುಂದಾದ ಕಾರಣ ಸ್ಟಾಕ್ ವೇಗವಾಗಿ ಖಾಲಿಯಾಗುವಂತಾಯಿತು.
ಇದಾದ ಬಳಿಕ ಕಾಮಾಕ್ಷಿ ಪೆಟ್ರೋಲ್ ಬಂಕ್‌ಗೆ ತುರ್ತುವಾಗಿ ಟ್ಯಾಂಕರ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ತರಿಸಲಾಗಿ, ರಾತ್ರಿ ವರೆಗೆ ಗ್ರಾಹಕರಿಗೆ ಇಂಧನ ವಿತರಣೆ ಮಾಡಲಾಯಿತು. ಏಕಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಹನಗಳನ್ನು ತಂದ ಹಿನ್ನೆಲೆಯಲ್ಲಿ ಪೆಟ್ರೋಲ್ ತುಂಬಿಸುವ ಸಿಬ್ಬಂದಿ ತೀವ್ರ ಒತ್ತಡಕ್ಕೆ ಒಳಗಾದರು. ಕೆಲವು ಕಡೆಗಳಲ್ಲಿ ವಾಹನಗಳ ಸಾಲು ಮುಖ್ಯರಸ್ತೆಯವರೆಗೂ ವಿಸ್ತರಿಸಿದ್ದರಿಂದ ಸಂಚಾರಕ್ಕೂ ಅಡಚಣೆ ಉಂಟಾಯಿತು.
ಇಂಧನ ಕೊರತೆ ಇಲ್ಲ ಎಂಬ ಸ್ಪಷ್ಟನೆ ನೀಡಿದ ಬಂಕ್ ಮಾಲೀಕರು, “ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಭಾರತಕ್ಕೆ ತೈಲ ಸರಬರಾಜಿನಲ್ಲಿ ಯಾವುದೇ ತೊಂದರೆ ಉಂಟಾಗಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ವದಂತಿಯಿಂದ ಜನರು ಭೀತಿಗೊಂಡು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಇಂಧನ ಖರೀದಿಸಲು ಮುಂದಾಗಿದ್ದಾರೆ” ಎಂದು ಹೇಳಿದರು.
ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದಂತೆ ದಾಂಡೇಲಿ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಅವರು ಮಧ್ಯಾಹ್ನ ಪೆಟ್ರೋಲ್ ಬಂಕ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಬಂಕ್ ಮಾಲೀಕರಿಗೆ ಸೂಚನೆ ನೀಡಿದ ಅವರು, “ವಾಹನಗಳ ಟ್ಯಾಂಕ್‌ಗಳಿಗೆ ಮಾತ್ರ ಪೆಟ್ರೋಲ್ ಹಾಗೂ ಡೀಸೆಲ್ ತುಂಬಿಸಬೇಕು. ಯಾವುದೇ ಕಾರಣಕ್ಕೂ ಕ್ಯಾನ್‌ಗಳು ಅಥವಾ ಬಾಟಲಿಗಳಿಗೆ ಇಂಧನ ನೀಡಬಾರದು” ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಇದೇ ವೇಳೆ ಬಂಕ್‌ಗಳ ಮುಂದೆ ಸಾಲಿನಲ್ಲಿ ನಿಂತಿದ್ದ ಗ್ರಾಹಕರಿಗೂ ಅವರು ಮನವಿ ಮಾಡಿದರು. “ಪೆಟ್ರೋಲ್ ಸಿಗುವುದಿಲ್ಲ ಅಥವಾ ದರ ಏರಿಕೆ ಆಗಲಿದೆ ಎಂಬುದು ಕೇವಲ ವದಂತಿ ಮಾತ್ರ. ಇಂತಹ ಗಾಳಿ ಮಾತುಗಳನ್ನು ನಂಬಬಾರದು. ದೇಶಕ್ಕೆ ಇಂಧನ ಸರಬರಾಜಿನಲ್ಲಿ ಯಾವುದೇ ತೊಂದರೆ ಇಲ್ಲ” ಎಂದು ಸ್ಪಷ್ಟಪಡಿಸಿದರು. ಭಾರತದಲ್ಲಿ ಇನ್ನೂ ಕೂಡ ಹಲವು ತಿಂಗಳುಗಳಿಗೆ ಬೇಕಾಗಿರುವ ಪೆಟ್ರೋಲ್ ಸಂಗ್ರಹವಿದೆ.