ಆದಾಯ ಮೀರಿ ಆಸ್ತಿ ಗಳಿಕೆ: ಸಿಬಿಐ ಮುಂದೆ ಡಿಕೆಶಿ ಹಾಜರು

By Kannadaprabha NewsFirst Published Jan 13, 2021, 11:10 AM IST
Highlights

 2 ತಾಸು ವಿಚಾರಣೆ ಎದುರಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ| ಆದಾಯಕ್ಕಿಂತ 74.93 ಕೋಟಿ ರು. ಅಧಿಕ ಆಸ್ತಿ ಹೊಂದಿರುವ ಆರೋಪ| ಶಿವಕುಮಾರ್‌ ಮತ್ತವರ ಸಂಬಂಧಿಕರಿಗೆ ಸೇರಿದ 14 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದ ಸಿಬಿಐ ಅಧಿಕಾರಿಗಳು| ಮತ್ತೊಮ್ಮೆ ವಿಚಾರಣೆಗೊಳಪಡಿಸುವ ಸಾಧ್ಯತೆ| 

ಬೆಂಗಳೂರು(ಜ.13):  ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸಿಬಿಐ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

ಮಂಗಳವಾರ ನಗರದ ಗಂಗೇನಹಳ್ಳಿಯಲ್ಲಿನ ಸಿಬಿಐ ಕಚೇರಿಗೆ ಮಧ್ಯಾಹ್ನ 12.45ರ ಸುಮಾರಿಗೆ ಆಗಮಿಸಿದ ಶಿವಕುಮಾರ್‌ ಅವರನ್ನು ಸಿಬಿಐ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಕುರಿತು ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು.

ಡಿಕೆಶಿ VS ಸಿದ್ದು: ಒಂದೇ ವರ್ಷದಲ್ಲಿ ಬಿರುಕು ಬಿಟ್ಟಿದ್ದೇಕೆ ಕಾಂಗ್ರೆಸ್ ಕೋಟೆ.?

ಸಿಬಿಐ ಅಧಿಕಾರಿಗಳು ಸಮನ್ಸ್‌ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾದ ಶಿವಕುಮಾರ್‌ ಅವರನ್ನು ಸುಮಾರು ಎರಡು ತಾಸುಗಳ ಕಾಲ ವಿಚಾರಣೆ ನಡೆಸಲಾಯಿತು. ಸಿಬಿಐ ದಾಳಿ ವೇಳೆ ಪತ್ತೆಯಾದ ಮಾಹಿತಿಯನ್ನಾಧರಿಸಿ ಮತ್ತು ಆದಾಯ ಕುರಿತು ಕ್ರೋಢೀಕರಿಸಲಾದ ಮಾಹಿತಿಗಳ ಆಧಾರದ ಮೇಲೆ ಶಿವಕುಮಾರ್‌ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಕೋಟ್ಯಂತರ ರು. ಆಸ್ತಿಗೆ ಸಂಬಂಧಪಟ್ಟಂತೆ ದಾಖಲೆ, ಬ್ಯಾಂಕ್‌ ಖಾತೆಯ ವಿವರಗಳನ್ನು ಮುಂದಿಟ್ಟು ಸಿಬಿಐ ವಿಚಾರಣೆ ನಡೆಸಿತು ಎಂದು ತಿಳಿದುಬಂದಿದೆ. ಇದೀಗ ಶಿವಕುಮಾರ್‌ ಹೇಳಿಕೆ ಆಧರಿಸಿ ಸಿಬಿಐ ಅಧಿಕಾರಿಗಳು ಮುಂದಿನ ತನಿಖೆಯನ್ನು ಕೈಗೊಳ್ಳಲಿದ್ದಾರೆ. ಅಲ್ಲದೆ, ಮತ್ತೊಮ್ಮೆ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಆದಾಯಕ್ಕಿಂತ 74.93 ಕೋಟಿ ರು. ಅಧಿಕ ಆಸ್ತಿ ಹೊಂದಿರುವ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಶಿವಕುಮಾರ್‌ ಮತ್ತವರ ಸಂಬಂಧಿಕರಿಗೆ ಸೇರಿದ 14 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಆಸ್ತಿಗೆ ಸಂಬಂಧಪಟ್ಟಂತೆ ದಾಖಲೆಗಳನ್ನು, 57 ಲಕ್ಷ ರು. ನಗದು, ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದರು.
 

click me!