D Roopa Vs Rohini Sindhuri: ನಿಮ್ ಜಗಳದಲ್ಲಿ ನನ್ ಮಗನ ಹೆಸ್ರು ಎಳಿಬೇಡಿ: ಡಿಕೆ ರವಿ ತಾಯಿ ಕಣ್ಣೀರು

By BK Ashwin  |  First Published Feb 20, 2023, 1:12 PM IST

ನನ್ನ ಮಗ ಸತ್ತು 8 ವರ್ಷ ಕಳೆದಿವೆ, ಆದರೆ ಈಗ ಯಾಕೆ ನನ್ನ ಮಗನನ್ನ ಬೀದಿಗೆ ತರುತ್ತಿದ್ದಾರೆ. ಈಗ ರೂಪಾ ಯಾಕೆ ನನ್ನ ಮಗನ ಸುದ್ದಿ ತರುತ್ತಿದ್ದಾರೆ ಎಂದು ಡಿ.ಕೆ. ರವಿ ತಾಯಿ ಗೌರಮ್ಮ ಕಿಡಿ ಕಾರಿದ್ದಾರೆ. 


ರಾಮನಗರ (ಫೆಬ್ರವರಿ 20, 2023): ರಾಜ್ಯದಲ್ಲಿ ಐಎಎಸ್‌ ವರ್ಸಸ್‌ ಐಪಿಎಸ್‌ ಅಧಿಕಾರಿಗಳ ಜಡೆ ಜಗಳ ಜೋರಾಗಿದೆ. ಈ ವಿಚಾರದಲ್ಲಿ ಡಿ.ಕೆ.ರವಿ ತಾಯಿ ಗೌರಮ್ಮ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ತನ್ನ ಮಗನ ಹೆಸರು ಎಳೆದು ತರುತ್ತಿರುವುದಕ್ಕೆ ಕಣ್ಣೀರಿಟ್ಟಿದ್ದಾರೆ. IPS ಅಧಿಕಾರಿ ಡಿ ರೂಪಾ, IAS ಅಧಿಕಾರಿ ರೋಹಿಣಿ ಸಿಂಧೂರಿ ಅವರೇ ನಿಮ್ಮಿಬ್ಬರ ಜಗಳದ ನಡುವೆ ನನ್ನ ಮಗನ ಹೆಸರು ಎಳೆದು ತರಬೇಡಿ ಎಂದು ಡಿ.ಕೆ.ರವಿ ತಾಯಿ ಗೌರಮ್ಮ ಕಣ್ಣೀರಿಟ್ಟಿದ್ದಾರೆ.

IPS ಅಧಿಕಾರಿ ಡಿ ರೂಪಾ (D Roopa), IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ನಡುವೆ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ಇವರ ಇಬ್ಬರ ಜಗಳದಲ್ಲಿ ದಿವಂಗತ ಐಎಎಸ್​​ ಅಧಿಕಾರಿ ಡಿ.ಕೆ ರವಿ (DK Ravi) ಅವರ ಹೆಸರು ಎಳೆದು ತಂದಿದ್ದು, ಈ ವಿಚಾರವಾಗಿ ಡಿ.ಕೆ.ರವಿ ತಾಯಿ ಗೌರಮ್ಮ ನಿಮ್ಮ ಗಲಾಟೆ ವಿಚಾರದಲ್ಲಿ ನನ್ನ ಮಗನ ಹೆಸರು ಎಳೆದು ತರಬೇಡಿ ಎಂದು ಹೇಳಿದ್ದಾರೆ.

Tap to resize

Latest Videos

ಇದನ್ನು ಓದಿ: ಅಧಿಕಾರಿಯಾಗಿ ರಾಜಕಾರಣಿಗಳ ಜೊತೆಗೆ ಸಂಧಾನ ಯಾಕೆ: ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ ಡಿ. ರೂಪಾ

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕದರಮಂಗಳ ಗ್ರಾಮದಲ್ಲಿ ಮಾಧ್ಯಮ ಪ್ರಿನಿಧಿಗಳೊಂದಿಗೆ ಮಾತನಾಡಿದ ಅವರು ನೀವಿಬ್ಬರೂ ಏನಾದರೂ ಕಿತ್ತಾಡಿ, ಆದರೆ ನನ್ನ ಮಗನ ಹೆಸರು ತರಬೇಡಿ ಎಂದು ಕಣ್ಣೀರಿಟ್ಟಿದ್ದಾರೆ. 8 ವರ್ಷವಾಯ್ತು ನನ್ನನ್ನು ನೋಡಲು ಯಾರೂ ಬಂದಿಲ್ಲ. ಡಿ.ಕೆ.ರವಿಯನ್ನು ನಾನು ಸಾಕಿ ಬೆಳೆಸಿದ್ದೇನೆ. ಡಿ.ಕೆ.ರವಿ ಜತೆ ಕುಸುಮಾ 5 ವರ್ಷ ಅಷ್ಟೆ ಸಂಸಾರ ಮಾಡಿದ್ದಾಳೆ. ನನ್ನ ಮಗ ಇರುವವರೆಗೂ ಮಾತ್ರ ಆಕೆ ಸೊಸೆ. ಹೀಗಾಗಿ ನೀವ್ಯಾರೂ ನನ್ನ ಮಗನ ಹೆಸರನ್ನು ತರಬೇಡಿ ಎಂದೂ ಮನವಿ ಮಾಡಿದ್ದಾರೆ.

ನನ್ನ ಮಗ ಸತ್ತು 8 ವರ್ಷ ಕಳೆದಿವೆ, ಆದರೆ ಈಗ ಯಾಕೆ ನನ್ನ ಮಗನನ್ನ ಬೀದಿಗೆ ತರುತ್ತಿದ್ದಾರೆ. ಈಗ ರೂಪಾ ಯಾಕೆ ನನ್ನ ಮಗನ ಸುದ್ದಿ ತರುತ್ತಿದ್ದಾರೆ, ರೋಹಿಣಿಯಮ್ಮ ನನ್ನ ಮಗ ಸ್ನೇಹಿತರು. ಒಂದೆರಡು ಬಾರಿ ನಮ್ಮ ಮನೆಗೆ ಬಂದಿದ್ದರು. ನನ್ನ ಮಗ ಅವರು ಸ್ನೇಹಿತರಾಗಿದ್ದರು, ತಾಯಿಗೆ ನೋವು ಕೊಡಬೇಡಿ. ನಿಮ್ಮ ವ್ಯವಹಾರ ಮಾಡಿಕೊಳ್ಳಿ, ನನ್ನ ಮಗನ ವಿಚಾರ ತರಬೇಡಿ ಎಂದು ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್ ವಿರುದ್ಧ ಡಿ.ಕೆ.ರವಿ ಗೌರಮ್ಮ ಕಿಡಿ ಕಾರಿದ್ದಾರೆ. ರೂಪಾ ಅವರು ಈಗ ನನ್ನ ಮಗನ ಹೆಸರು ತಂದಿದ್ದಾರೆ, ಇದು ಸರಿಯಲ್ಲ ಎಂದು ಗೌರಮ್ಮ ಗರಂ ಆಗಿ ಹೇಳಿಕೆ ನೀಡಿದ್ದಾರೆ. 

ಸಿಂಧೂರಿ ಜೊತೆ ಮದುವೆಗೆ ವಿರೋಧ ಇರಲಿಲ್ಲ: ನನ್ನ ಮಗ ಡಿ.ಕೆ. ರವಿ ಸಾವಿಗೆ ರೋಹಿಣಿ ಸಿಂಧೂರಿ ಹೊಣೆಯಲ್ಲ. ಅವರಿಬ್ಬರು ಸ್ನೇಹಿತರು,‌ ಅವರು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲೂ ಸ್ನೇಹಿತರಾಗಿದ್ದರು. ಹಾಗಾಗ ನನಗೂ ಫೋನ್ ಮಾಡಿ ಮಾತನಾಡುತ್ತಿದ್ದರು. ಅವರು ಇಷ್ಟಪಟ್ಟಿದ್ದರೆ ಆ ಸಮಯದಲ್ಲೇ ಇಬ್ಬರು ಮದುವೆ ಅಗಬಹುದಿತ್ತು.‌‌ ಅದಕ್ಕೆ ಯಾರ ವಿರೋಧವೂ ಇರಲಿಲ್ಲ. ಹಾಗಾಗಿ ಅವರ ಮೇಲೆ ಎನೂ ಹೇಳುವುದಿಲ್ಲ‌‌, ಎಂದು ಡಿ.ಕೆ.ರವಿ ತಾಯಿ ಗೌರಮ್ಮ‌ ತಿಳಿಸಿದರು.

ಇದನ್ನೂ ಓದಿ: IAS vs IPS Fight: ರೂಪಾ ವಿರುದ್ಧ ಕೆಂಡಕಾರಿದ ರೋಹಿಣಿ ಸಿಂಧೂರಿ: ಗಂಡ ಸುಧೀರ್‌ ರೆಡ್ಡಿ ದೂರು ದಾಖಲು

ಮೂರು ಬಾರಿ ನಮ್ಮ ಮನೆಗೆ ಬಂದಿದ್ದ ರೋಹಿಣಿ ಸಿಂಧೂರಿ: ನಮ್ಮ ಮನೆಗೆ ರೋಹಿಣಿ ಸಿಂಧೂರಿ ಮೂರು ಬಾರಿ ಬಂದಿದ್ದಾರೆ. ಡಿ.ಕೆ. ರವಿಯ ಸಾಮಾಜಿಕ ಕಳಕಳಿ ಕಂಡು ನನಗೂ ಮಾರ್ಗದರ್ಶನ ಮಾಡು ಎಂದು ರೋಹಿಣಿ ನನ್ನ ಮುಂದೆಯೇ ಕೇಳಿದ್ದಾಳೆ. ರೋಹಿಣಿ ಸಿಂಧೂರಿ ಮೇಲೆ ಅಪರಾಧ ಹೊರಿಸಲು ರೂಪ‌ ಅವರು ನನ್ನ ಮಗನ ಹೆಸರನ್ನು ತಂದಿದ್ದಾರೆ. ನಿಮ್ಮಿಬ್ಬರ ಜಗಳದಲ್ಲಿ ನನ್ನ ಮಗನ ಹೆಸರು ತರಬೇಡಿ. ನೀವೆ ಆಗಲಿ, ರಾಜಕಾರಣಿಗಳೇ ಆಗಲಿ ಯಾವುದೆ ವಿಚಾರಕ್ಕೆ ನನ್ನ ಮಗನ ಹೆಸರು ತರಬೇಡಿ ಎಂದು ಗೌರಮ್ಮ ಎಚ್ಚರಿಕೆ ನೀಡಿದರು.

ನನ್ನ ಮಗನ ಹೆಸರಿಗೆ ಮಸಿ ಹಚ್ಚುವ ಕೆಲಸ ಮಾಡಬೇಡಿ: ನನ್ನ ಮಗನಿಗೆ ಇದ್ದಷ್ಟು ಅಧಿಕಾರ ನಿಮಗೂ ಇದೆ. ನಿಮ್ಮ‌ಅಧಿಕಾರ ಬಳಸಿಕೊಂಡು ಜನರಿಗೆ ಉಪಕಾರ ಮಾಡಿ. ದುಡಿಯುವ ಕೈಗಳಿಗೆ ಕೆಲಸ ಕೊಡುವ ಮೂಲ‌ಕ ಜೀವನ ರೂಪಿಸಿ. ನನ್ನ ಮಗ ನಡೆದ ದಾರಿಯಲ್ಲಿ ನಡೆಯಿರಿ‌. ಅದರೆ ನಿಮ್ಮ ಜಗಳದಲ್ಲಿ, ಸಿಂಧೂರಿ ಅವರ ಮೇಲೆ ಅಪವಾದ ಹೊರಿಸಿದ್ದೀರಿ. ಹಾಗೆಯೇ ನನ್ನ ಮಗನ ಹೆಸರು ತಂದು ಅವನ ಹೆಸರಿಗೆ ಮಸಿ ಹಚ್ಚುವ ಕೆಲಸ ಮಾಡಬೇಡಿ ರೂಪಾ ಅವರೇ ಎಂದು ಮಾಧ್ಯಮಗಳ ಮೂಲಕ ಮನವಿ ಮಾಡಿದರು. ನಾನು ಮುಖ್ಯಮಂತ್ರಿ ಯಾಗುತ್ತೇನೆ, ಮನೆಗೊಬ್ಬರಿಗೆ ಕೆಲಸ ಕೊಡುತ್ತೇನೆ ಎಂದು ಹೇಳುತ್ತಿದ್ದ ನನ್ನ ಮಗ ಅಪರಂಜಿ. ಅವನ ನಡೆ, ನುಡಿಗಳನ್ನು ಜನರು ಕೊಂಡಾಡುತ್ತಿದ್ದಾರೆ. ಇದೀಗ ನಿಮ್ಮಿಬ್ಬರ ರಂಪಾಟ ನೋಡಿ ಜನರು ನನಗೆ ರಾಜ್ಯದ ವಿವಿಧ ಭಾಗದಿಂದ ಫೋನ್ ಮಾಡಿ ಡಿ.ಕೆ.ರವಿಯ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದರು. ನಿಮ್ಮ ನಡೆಗೆ ಛೀಮಾರಿ ಹಾಕುತ್ತಿದ್ದಾರೆ ಎಂದು ಡಿ.ಕೆ.ರವಿ ತಾಯಿ ಡಿ. ರೂಪಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 

click me!