ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರ ಮೇಲೆ ನೌಕಾಸೇನೆಯ ಗಸ್ತು ಸಿಬ್ಬಂದಿಯಿಂದ ತೊಂದರೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಅರಗಾದ ಕದಂಬ ನೌಕಾನೆಲೆ ಹಿರಿಯ ಅಧಿಕಾರಿಗಳೊಂದಿಗೆ ಯುವ ಮೀನುಗಾರರ ಸಂಘರ್ಷ ಸಮಿತಿ ಅಧ್ಯಕ್ಷ ವಿನಾಯಕ ಹರಿಕಂತ್ರ ಶುಕ್ರವಾರ ಸಮಾಲೋಚನೆ ನಡೆಸಿದರು.
ಮೀನುಗಾರರಿಗೆ ತೊಂದರೆ: ಅಧಿಕಾರಿಗಳೊಂದಿಗೆ ಸಮಾಲೋಚನೆ
ಕಾರವಾರ (ಮೇ.21) : ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರ ಮೇಲೆ ನೌಕಾಸೇನೆಯ ಗಸ್ತು ಸಿಬ್ಬಂದಿಯಿಂದ ತೊಂದರೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಅರಗಾದ ಕದಂಬ ನೌಕಾನೆಲೆ ಹಿರಿಯ ಅಧಿಕಾರಿಗಳೊಂದಿಗೆ ಯುವ ಮೀನುಗಾರರ ಸಂಘರ್ಷ ಸಮಿತಿ ಅಧ್ಯಕ್ಷ ವಿನಾಯಕ ಹರಿಕಂತ್ರ ಶುಕ್ರವಾರ ಸಮಾಲೋಚನೆ ನಡೆಸಿದರು.
ಕಾರವಾರ, ಅಂಕೋಲಾ ಭಾಗದಲ್ಲಿ ಅರಬ್ಬಿ ಸಮುದ್ರದಲ್ಲಿ ನೌಕಾನೆಲೆ ಗಸ್ತು ಸಿಬ್ಬಂದಿಯು ಮೀನುಗಾರರು ಬೀಸಿದ ಬಲೆ ಕತ್ತರಿಸುವುದು, ವೇಗವಾಗಿ ಚಲಿಸುವ ಬೋಟಿನ ಮೂಲಕ ಅಲೆ ಎಬ್ಬಿಸಿ ಭಯ ಪಡಿಸುವ ಪ್ರಯತ್ನ ಮಾಡಿದ್ದರು. ಹೀಗಾಗಿ ಅದನ್ನು ಖಂಡಿಸಿ ಯುವ ಮೀನುಗಾರರ ಸಂಘರ್ಷ ಸಮಿತಿಯು ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. ಮನವಿ ಆಧರಿಸಿ ನೌಕಾನೆಲೆಯ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ.
INS Vikrant: ಸಾಗರದ ಚಕ್ರವರ್ತಿ ನೌಕಾಸೇನೆಗೆ ನಿಯೋಜನೆ!
ನೌಕಾನೆಲೆ ಪ್ರದೇಶದ ಸಾರ್ವಜನಿಕರ ಪ್ರವೇಶ ನಿಷೇಧ ಇದೆ. ಹಾಗಾಗಿ ಹತ್ತಿರದಲ್ಲಿ ಮೀನುಗಾರಿಕೆ ಮಾಡಬಾರದು. ಭದ್ರತೆ ದೃಷ್ಟಿಯಿಂದ ಇದು ಅನಿವಾರ್ಯವಾಗಿದೆ. ವಿಕ್ರಮಾದಿತ್ಯ ನೌಕೆ ಒಳಗೊಂಡು ದೇಶದ ಅನೇಕ ನೌಕೆಗಳು ಇರುವುದರಿಂದ ಭದ್ರತೆಗೆ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ. ನೌಕಾನೆಲೆ ಸಮುದ್ರ ಗಡಿಯಿಂದ ಒಂದು ಕಿಮೀ ದೂರದಲ್ಲಿ ಮೀನುಗಾರರು ಮೀನುಗಾರಿಕೆ ನಡೆಸಬೇಕು. ಗಡಿಯ ಹತ್ತಿರವೂ ಬರಬಾರದು. ಅದರಿಂದ ಭದ್ರತೆಗೆ ತೊಂದರೆ ಆಗುತ್ತದೆ ಎಂದು ನೌಕಾನೆಲೆ ಅಧಿಕಾರಿಗಳು ಹೇಳಿದರು.
ಭದ್ರತೆ ವಿಚಾರ ಏನೇ ಇದ್ದರೂ, ಅದರಿಂದ ಮೀನುಗಾರರಿಗೆ ತೊಂದರೆ ಆಗಕೂಡದು. ಸಮುದ್ರದಲ್ಲಿ ಹೆಚ್ಚಿನ ಮೀನು ಸಿಗುವ ಸ್ಥಳವೇ ಕಾರವಾರ, ಅಂಕೋಲಾ ಭಾಗ. ಗಡಿಯಿಂದ ಒಂದು ಕಿಮೀ ವ್ಯಾಪ್ತಿಯಲ್ಲಿ ಮೀನುಗಾರರು ಬರಬಾರದು ಎಂದರೆ, ಮೀನು ಹಿಡಿಯುವುದಾದರೂ ಎಲ್ಲಿ? ಇದು ಸರಿಯಾದ ಕ್ರಮ ಅಲ್ಲ. ಮೀನುಗಾರರ ಸಮಸ್ಯೆ ಕೂಡ ಕೇಳಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದು ಉತ್ತಮ ಎಂದು ವಿನಾಯಕ ಹರಿಕಂತ್ರ ಸಲಹೆ ನೀಡಿದರು.
ಉಡುಪಿ: ಬಲವಾದ ಗಾಳಿ, ಮಲ್ಪೆ ಕಡಲಿಗೆ ಇಳಿಯದ ಮೀನುಗಾರಿಕೆ ಬೋಟುಗಳು!
ಒಂದು ವಾರದ ನಂತರ ಪ್ರತಿ ಊರಿನಿಂದ ಐವರು ಮೀನುಗಾರರ ಜತೆ ಸಭೆ ನಡೆಸುವುದಾಗಿ ನೌಕಾನೆಲೆ ಲೆಫ್ಟಿನಂಟ್ ಕರ್ನಲ್ ಭರವಸೆ ನೀಡಿದ್ದಾರೆ ಎಂದು ವಿನಾಯಕ ಹರಿಕಂತ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.