
ಮಯೂರ್ ಹೆಗಡೆ
ಬೆಂಗಳೂರು(ಮೇ.21): ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ರೈಲನ್ನು ಹೆಚ್ಚಿಸಿಕೊಳ್ಳುವ ಸಂಬಂಧ ನಮ್ಮ ಮೆಟ್ರೋ ಮಾಡಿಕೊಂಡಿದ್ದ ಒಪ್ಪಂದದ ಭಾಗವಾಗಿ ಚೀನಾ ಮೂಲದ ಕಂಪನಿ ಆಗಸ್ಟ್‌ನಲ್ಲಿ ಎರಡು ರೈಲನ್ನು ಪೂರೈಸುತ್ತಿದೆ. ಮುಂದಿನ ತಿಂಗಳಿಗೆ ಎರಡು ರೈಲಿನಂತೆ 36 ರೈಲುಗಳು ಸೇರ್ಪಡೆ ಆಗಲಿವೆ.
ನಮ್ಮ ಮೆಟ್ರೋದಲ್ಲಿ ಹೊಸ ಮಾರ್ಗಗಳು ಆರಂಭಗೊಳ್ಳುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಈಗಾಗಲೇ ಜನ ಬಳಕೆಗೆ ಮುಕ್ತವಾಗಿರುವ ಕೆ.ಆರ್.ಪುರ-ವೈಟ್‌ಫೀಲ್ಡ್, ಜುಲೈ ಅಂತ್ಯಕ್ಕೆ ನಿರೀಕ್ಷಿಸಲಾದ ಬೈಯಪ್ಪನಹಳ್ಳಿ-ಕೆಆರ್‌ಪುರ ಸೇರಿ ಈ ವರ್ಷ 40 ಕಿ.ಮೀ. ಮೆಟ್ರೋ ಮಾರ್ಗ ಜನಬಳಕೆಗೆ ಲಭ್ಯವಾಗಿಸಲು ಬಿಎಂಆರ್‌ಸಿಎಲ್ ಗುರಿ ಹೊಂದಿದೆ. ಇದಕ್ಕೆ ಅನುಗುಣವಾಗಿ ಹೊಸ ರೈಲುಗಳನ್ನು ಸೇರ್ಪಡೆ ಮಾಡಿಕೊಳ್ಳಲು ಸಂಸ್ಥೆ ಮೂರು ವರ್ಷದ ಹಿಂದೆಯೇ ಚೀನಾ ಮೂಲದ ಕಂಪನಿ ಜೊತೆಗೆ ಒಡಂಬಡಿಕೆ ಮಾಡಿಕೊಂಡಿತ್ತು.
Bengaluru - ನಮ್ಮ ಮೆಟ್ರೋದಲ್ಲಿ ಕ್ಯೂಆರ್ ಕೋಡ್ ಟಿಕೆಟ್‌ಗೆ ಭಾರಿ ಬೆಂಬಲ: ದಿನಕ್ಕೆ 22 ಸಾವಿರ ಸ್ಕ್ಯಾನ್
ಸದ್ಯ ಬಿಎಂಆರ್‌ಸಿಎಲ್ ನೇರಳೆ, ಹಸಿರು ಮಾರ್ಗ ಸೇರಿ 57 ರೈಲುಗಳು ಅಂದರೆ ಒಟ್ಟಾರೆ 342 ಬೋಗಿಗಳನ್ನು ಹೊಂದಿದೆ. ರೈಲು ಸಂಖ್ಯೆ ಹೆಚ್ಚಿಸಿಕೊಳ್ಳಲು 2019ರಲ್ಲಿಯೇ ಚೀನಾ ಮೂಲದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಝ್ಹೆನ್ ಕೊ. ಲಿ. ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದಂತೆ 2021ರ ಸೆಪ್ಟೆಂಬರ್ ಹೊತ್ತಿಗೆ ಕಂಪನಿ 216 ರೈಲ್ವೇ ಬೋಗಿ (6 ಬೋಗಿ ಸೆಟ್‌ನ 36 ರೈಲು) ಪೂರೈಸಬೇಕಿತ್ತು. ಆದರೆ, ಮೇಕ್ ಇನ್ ಇಂಡಿಯಾ ನೀತಿಯಂತೆ ಶೇ.75ರಷ್ಟು ದೇಶದಲ್ಲೇ ಉತ್ಪಾದನೆ ಎಂಬ ನಿಬಂಧನೆ ಇದಕ್ಕೆ ಅಡ್ಡಿಯಾಗಿತ್ತು. ದೇಶದಲ್ಲಿನ ಮೆಟ್ರೋ ರೈಲ್ವೇ ಕೋಚ್ ಉತ್ಪಾದಿಸುವ ಕಂಪನಿ ಹುಡುಕಿಕೊಳ್ಳುವಲ್ಲಿ ಸಿಆರ್‌ಆರ್‌ಸಿಗೆ ವಿಳಂಬವಾಯಿತು. ಜೊತೆಗೆ ಕೋವಿಡ್ ಸೇರಿ ಇತರೆ ಕಾರಣಗಳು ನಿಗದಿತ ವೇಳೆಯೊಳಗೆ ರೈಲ್ವೆ ಬೋಗಿಗಳನ್ನು ಪೂರೈಸಲು ಅಡ್ಡಿಯಾಗಿತ್ತು.
ಇದೀಗ ಅಂತಿಮವಾಗಿ ಆಗಸ್ಟ್‌ನಲ್ಲಿ ಸಿಆರ್‌ಆರ್‌ಸಿ ಒಪ್ಪಂದದ ಮೊದಲ ಹಂತವಾಗಿ ಆರು ಬೋಗಿಗಳ ಸೆಟ್‌ನ ಎರಡು ರೈಲನ್ನು ಒದಗಿಸುತ್ತಿದೆ. ಈ ಕಂಪನಿಯ ಪಾಲುದಾರಿಕೆ ಹೊಂದಿರುವ ಕೊಲ್ಕತ್ತಾ ಮೂಲದ ತೀತಾಗರ್ ವ್ಯಾಗನ್ಸ್ ಕಂಪನಿ ಇನ್ನುಳಿದ ರೈಲ್ವೇ ಬೋಗಿಗಳನ್ನು ಪೂರೈಸಲಿದೆ. ಮುಂದಿನ ದಿನಗಳಲ್ಲಿ ಇನ್ನೂರಕ್ಕೂ ಹೆಚ್ಚು ಬೋಗಿಗಳು ಸೇರ್ಪಡೆ ಆಗುತ್ತಿವೆ.
ಹಳದಿ ಮಾರ್ಗಕ್ಕೆ ಬೋಗಿ
ಕೆ.ಆರ್.ಪುರ ಬಳಿಕ ಇನ್ನೊಂದು ಮೆಟ್ರೋದ ಇನ್ನೊಂದು ಟೆಕ್ ಕಾರಿಡಾರ್ ಎಂದೆ ಪರಿಗಣಿಸಲ್ಪಟ್ಟಆರ್.ವಿ.ರೋಡ್-ಬೊಮ್ಮಸಂದ್ರ (ಎಲೆಕ್ಟ್ರಾನಿಕ್ ಸಿಟಿಯ ಮೆಟ್ರೋ) ಬಹುತೇಕ ಡಿಸೆಂಬರ್‌ನಲ್ಲಿ ಜನಬಳಕೆಗೆ ಪ್ರಯಾಣಿಕರಿಗೆ ಮುಕ್ತವಾಗಲಿದೆ. ಈ ಮಾರ್ಗದಲ್ಲಿ ಸಿಆರ್‌ಆರ್‌ಸಿ-ತೀತಾಗರ್ ವ್ಯಾಗನ್ಸ್‌ನ 90 ಬೋಗಿ ಅಂದರೆ 15 ರೈಲುಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಉಳಿದ 126 ಬೋಗಿಗಳು ಅಂದರೆ 21 ಸೆಟ್ ರೈಲುಗಳನ್ನು ನೇರಳೆ ಹಾಗೂ ಹಸಿರು ಮಾರ್ಗಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
ತಪಾಸಣೆ
ಈಗಾಗಲೇ ಲಭ್ಯವಿರುವ ಮಾದರಿಯ ರೈಲುಗಳಾದರೆ ಅದಕ್ಕೆ ಹೆಚ್ಚಿನ ತಪಾಸಣೆ ಇರುವುದಿಲ್ಲ. ಆದರೆ, ಚೀನಾದಿಂದ ಬರುತ್ತಿರುವ ಬೋಗಿಗಳು ಭಿನ್ನ ಮಾದರಿಯ, ಹೊಸ ತಂತ್ರಜ್ಞಾನದಿಂದ ಕೂಡಿರಲಿವೆ. ಆಗಸ್ಟ್‌ನಲ್ಲಿ ಇವು ಲಭ್ಯವಾದರೂ ಮಾರ್ಗಸೂಚಿ ಪ್ರಕಾರ ನೂರಾರು ಕಿ.ಮೀ. ಸಂಚಾರ ಪರೀಕ್ಷೆ, ಪ್ರಯಾಣಿಕರ ಅನುಕೂಲತೆ ತಪಾಸಣೆ, ಲೋಕೋ ಪೈಲೆಟ್‌ಗಳ ತರಬೇತಿ ಆಗಲಿವೆ. ಬಳಿಕವಷ್ಟೇ ಜನಬಳಕೆಗೆ ಬಳಸಿಕೊಳ್ಳಲಾಗುವುದು ಎಂದು ಮೆಟ್ರೋದ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌಹಾಣ್ ತಿಳಿಸಿದರು.
Bengaluru: ಕೆ.ಆರ್.ಪುರ-ಏರ್‌ಪೋರ್ಟ್ ಮೆಟ್ರೋ ಮಾರ್ಗಕ್ಕೆ 'ಯು ಗರ್ಡರ್'
ನಮ್ಮ ಮೆಟ್ರೋದಲ್ಲಿ ಈಗಿರುವ ರೈಲು- 57 (342 ಬೋಗಿ)
ಸಿಆರ್‌ಆರ್‌ಸಿ-ತೀತಾಗರ್ ಒದಗಿಸಲಿರುವ ರೈಲು- 36 (216 ಬೋಗಿ)
ಆಗಸ್ಟ್ ಬಳಿಕ ಪ್ರತಿ ತಿಂಗಳು ಸೇರ್ಪಡೆ- 2 ರೈಲು (12 ಬೋಗಿ)
ಚೀನಾದಿಂದ ಬರಬೇಕಿರುವ ಎರಡು ಸೆಟ್‌ಗಳ ರೈಲು ಆಗಸ್ಟ್‌ನಲ್ಲಿ ಬರಲಿದೆ. ಬಳಿಕ ಹಂತ ಹಂತವಾಗಿ 216 ಬೋಗಿಗಳು ಸೇರ್ಪಡೆ ಆಗಲಿವೆ ಅಂತ ಬಿಎಂಆರ್‌ಸಿಎಲ್ ಎಂ.ಡಿ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.