ಚಿಕ್ಕಮಗಳೂರು (ಅ.29) : ಜಿಲ್ಲಾ ಉತ್ಸವ ಬರುವ ಜನವರಿ 18 ರಿಂದ 22 ರವರೆಗೆ ಅಂದರೆ ನಾಲ್ಕು ದಿನ ಆಚರಿಸಲು ತಾತ್ಕಾಲಿಕವಾಗಿ ದಿನಾಂಕ ನಿಗದಿಪಡಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆ ನಡೆಯಿತು. ಈ ಉತ್ಸವ ಜಿಲ್ಲೆಯ ಕಲೆ, ಸಾಹಿತ್ಯ ಪರಿಚಯಿಸುವಂತಿರಬೇಕು. ಜನರ ಸಹಭಾಗಿತ್ವದ ಉತ್ಸವ ಆಗಲಿ, ಬಿಜೆಪಿ ಉತ್ಸವ ಆಗೋದು ಬೇಡ ಎಂದು ಪ್ರತಿಪಕ್ಷಗಳ ಮುಖಂಡರು ಹೇಳಿದರು.
Chikkamagaluru: ಮತ್ತೊಮ್ಮೆ ವಿಶೇಷ ಚೇತನರ ಆರೋಗ್ಯ ತಪಾಸಣೆ: ಸಿ.ಟಿ.ರವಿ
ಕಾಂಗ್ರೆಸ್ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಜಿಲ್ಲಾ ಉತ್ಸವದ ಮೂಲಕ ನಮ್ಮ ಜಿಲ್ಲೆಯನ್ನು ರಾಜ್ಯ ಮತ್ತು ದೇಶಕ್ಕೆ ಪರಿಚಯಿಸುವುದು ಒಳ್ಳೆಯದು. ಆದರೆ, ಒಂದು ಪಕ್ಷದ ವೇದಿಕೆ ಆಗಬಾರದು. ಖರ್ಚು ಪಾರದರ್ಶಕವಾಗಿರಬೇಕು. ಉತ್ಸವ ಮುಗಿದ ಮೇಲೆ ಲೆಕ್ಕಪತ್ರವನ್ನು ಮಂಡಿಸಬೇಕು. ಉತ್ಸವದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜೀವನ ಚರಿತ್ರೆ ಆಧಾರಿತ ಭಾಗ್ಯವಿಧಾತ ಚಲನಚಿತ್ರ ಪ್ರದರ್ಶಿಸಬೇಕು ಎಂದು ಮನವಿ ಮಾತನಾಡಿದರು.
ಶಾಸಕ ಸಿ.ಟಿ.ರವಿ ಮಾತನಾಡಿ, ತಾಲೂಕು ಮಟ್ಟದಲ್ಲೂ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಂದಾಜಿನ ಪ್ರಕಾರ ಜ. 18 ರಿಂದ 22 ರವರೆಗೆ ಉತ್ಸವ ನಡೆಸಲಾಗುವುದು. ಸರ್ಕಾರದ ನೇತೃತ್ವ, ಬೆಂಬಲ, ಜನರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಎಲ್ಲರನ್ನು ಜೋಡಿಸುವ ಸದುದ್ದೇಶದಿಂದ ಈ ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು.
ಕಳೆದ ಬಾರಿ ಹೇಗೆ ಜನರ ಉತ್ಸವ ಆಗಿತ್ತೋ, ಅದೇ ರೀತಿ ಆಗಬೇಕೆಂಬುದು ಇಚ್ಛೆಯಾಗಿದೆ. ಆದರೆ, ಕೆಲವರದ್ದು ಮೊಸರಲ್ಲಿ ಕಲ್ಲು ಹುಡುಕುವ ಸ್ವಭಾವ, ಇದೊಂದು ಉತ್ಸವ ಆಗಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಒಳಗೊಂಡ ಉಪ ಸಮಿತಿಗಳನ್ನು ರಚನೆ ಮಾಡಿ, ಸಲಹೆಗಳನ್ನು ಪರಿಗಣಿಸಬೇಕು. ಈ ಉತ್ಸವ ಜಿಲ್ಲೆಗೆ ಕಿರಿಟದಂತೆ, ಹಬ್ಬದಂತೆ ಇರಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎನ್. ರಮೇಶ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪಾ ಹಾಗೂ ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.
ಗಿರಿಯಲ್ಲಿ ಖಾಸಗಿ ವಾಹನಗಳಿಗೆ ಬ್ರೇಕ್
ಚಿಕ್ಕಮಗಳೂರು: ಸದ್ಯದಲ್ಲಿಯೇ ಗಿರಿ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛತೆ ಮಾಡಿ, ಮರು ದಿನವೇ ಪ್ರವಾಸಿಗರ ವಾಹನಗಳಿಗೆ ನಿರ್ಬಂಧ ಸೇರಿದಂತೆ ಇತರೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ಕುರಿತು ಆದೇಶವನ್ನು ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಹೇಳಿದರು.
ಕೈಮರದಲ್ಲಿರುವ ಚೆಕ್ ಪೋಸ್ಟ್‌ನಲ್ಲಿ ಟ್ರಾಫಿಕ್ ಜಾಮ್ ಆಗುತ್ತಿರುವುದರಿಂದ ಇತರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದನ್ನು ಮನಗಂಡು ಇದೇ ಮಾರ್ಗದಲ್ಲಿ ಇನ್ನು ಮುಂದೆ ಚೆಕ್ ಪೋಸ್ಟ್ ಸ್ಥಳಾಂತರಿಸಲು ಜಾಗವನ್ನು ಗುರುತು ಮಾಡಲಾಗಿದೆ ಎಂದರು.
ಚಿಕ್ಕಮಗಳೂರು: 'ಕಾಂತಾರ' ಹೌಸ್‌ಫುಲ್, ಬ್ಲ್ಯಾಕ್ ಟಿಕೇಟ್ ಮಾರಾಟ ಹೆಚ್ಚಳ: ಕ್ರಮಕ್ಕೆ ಆಗ್ರಹ
ಪಾರ್ಕಿಂಗ್ ಏರಿಯಾ ಮತ್ತು ಮಾಹಿತಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರ 67 ಲಕ್ಷ ರುಪಾಯಿ ಬಿಡುಗಡೆ ಮಾಡಿದೆ. ಕಾರಣಾಂತರಿಂದ ಹಣ ಬಂದಿರಲಿಲ್ಲ, ಈಗ ಬಂದಿದೆ. ಖಾಸಗಿ ವಾಹನ ನಿರ್ಬಂಧಿಸಿ, ಜಿಲ್ಲಾಡಳಿತದಲ್ಲಿ ನೋಂದಾಯಿತ ವಾಹನಗಳನ್ನು ಬಿಡಲಾಗುವುದು ಎಂದು ಹೇಳಿದರು. ಸಿಪಿಐ ಮುಖಂಡ ಎಚ್.ಎಚ್.ರೇಣುಕಾರಾಧ್ಯ ಮಾತನಾಡಿ, ಪ್ರವಾಸಿಗರಿಗೆ ಪೊಲೀಸರು ನೀಡುತ್ತಿರುವ ಕಿರಿಕಿರಿ ನೋಡಿದರೆ ಮುಂದಿನ ದಿನಗಳಲ್ಲಿ ಯಾರೂ ಕೂಡ ಪ್ರವಾಸಕ್ಕಾಗಿ ಜಿಲ್ಲೆಗೆ ಬರೋದಿಲ್ಲ, ಯಾರಿಗೆ ಕೇಳಿ ಈ ತೀರ್ಮಾನ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದರು. ಹೋಂ ಸ್ಟೇ ಮಾಲೀಕರ ಹಾಗೂ ಸಂಘ ಸಂಸ್ಥೆಗಳ ಸಭೆಯನ್ನು ಕರೆದು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಮೇಶ್ ಹೇಳಿದರು
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ: ಸಿ.ಟಿ. ರವಿ
ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಬರೆದು ಕೊಡುತ್ತೇನೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಭವಿಷ್ಯ ನುಡಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕಕ್ಕೂ ಮುನ್ನ ಗುಜರಾಜ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆ ನಡೆಯಲಿದ್ದು, ಅಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಚುನಾವಣೆಗಾಗಿ ನಾವು ಏನೂ ಕೆಲಸ ಮಾಡುತ್ತಿಲ್ಲ, ಆದರೆ ನಿರಂತರವಾಗಿ ಪಕ್ಷ ಮತ್ತು ಜನರ ಕೆಲಸ ಮಾಡುತ್ತಿರುತ್ತೇವೆ. ಕೆಲವರು ಎಲೆಕ್ಷನ್ ಬಂದಾಗ ಹೊರಗೆ ಬರುತ್ತಾರೆ, ಚುನಾವಣೆ ಮುಗಿದ ನಂತರ ಮನೆ ಸೇರಿಕೊಳ್ಳುತ್ತಾರೆ. ನಾವು 365 ದಿನ ಜನರ ನಡುವೆಯೇ ಇದೀವಿ, ನಿತ್ಯ ಹತ್ತಾರು ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.
ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳುವುದು ಆ ಪಕ್ಷದವರ ಕೆಲಸ ಹಾಗಾಗಿ ಹೇಳುತ್ತಾರೆ. ನಮ್ಮ ಕೆಲಸ ನಾವು ಮಾಡುತ್ತೇವೆ ತೀರ್ಮಾನಿಸುವುದು ಜನ. ಬಿಜೆಪಿ ಸರ್ಕಾರ ಮಾಡಿದ ಕೆಲಸಕ್ಕೆ ಜನ ನಮಗೆ ಮನ್ನಣೆ ನೀಡುತ್ತಾರೆ, ಮತ್ತೆ ರಾಜ್ಯದಲ್ಲಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅದರಲ್ಲಿ ಯಾವ ಸಂದೇಹವೂ ಇಲ್ಲಾ ಎಂಬ ವಿಶ್ವಾಸ ನನಗಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಮಾಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟವಿಚಾರ. ಶಾಸಕ ಪ್ರೀತಮ್‌ಗೌಡ ಯುವಕರು ಒಳ್ಳೆ ಕೆಲಸ ಮಾಡಿದ್ದಾರೆ. ಪಕ್ಷದ ಎಲ್ಲಾ ಶಾಸಕರು ಉತ್ತಮ ಕೆಲಸ ಮಾಡಿದ್ದಾರೆ, ಸಚಿವರಾಗುವ ಅರ್ಹತೆ ಎಲ್ಲರಿಗೂ ಇದೆ. ನಾನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಬೆನ್ನು ತಟ್ಟುವುದು ನನ್ನ ಜವಾಬ್ದಾರಿ. ಯಾರೇ ಕೇಳಿದರು ಒಳ್ಳೆಯದಾಗಲಿ ಎನ್ನುವುದು ನನ್ನ ಕರ್ತವ್ಯ. ಪ್ರೀತಮ್‌ಗೌಡಗೂ ಅದನ್ನೆ ಮಾಡಿದ್ದೇನೆ ಎಂದ ಅವರು, ಕೆಲಸ ಮಾಡುವವರಿಗೆ ಸಚಿವ ಸಂಪುಟದಲ್ಲಿ ಆದ್ಯತೆ ಇದ್ದೆ ಇರುತ್ತದೆ ಎಂದರು.