2ಎ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿ, ಶಕ್ತಿ ತುಂಬಿ: ಕಾಶಪ್ಪನವರ

By Kannadaprabha News  |  First Published Oct 29, 2022, 11:00 AM IST

ನಮ್ಮ ಹೋರಾಟ ನಿಲ್ಲುವುದಿಲ್ಲ ಮತ್ತು ಕೊನೆಯ ಹೋರಾಟ ಡಿ.12 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಹೋರಾಟಕ್ಕೆ ಎಲ್ಲರೂ ಭಾಗವಹಿಸಿ ಶಕ್ತಿ ತುಂಬಬೇಕಾಗಿದೆ: ವಿಜಯಾನಂದ ಕಾಶಪ್ಪನವರ 


ತಾಳಿಕೋಟೆ(ಅ.29):  ಲಿಂಗಾಯತ ಸಮಾಜದ 112 ಒಳ ಪಂಗಡಗಳಲ್ಲಿ 32 ಪಂಗಡಗಳು ಮೀಸಲಾತಿ ಪಡೆದುಕೊಳ್ಳಲು ಅರ್ಹತೆ ಹೊಂದಿವೆ. ಆದರೆ, ನಾವು ನಮ್ಮ ಸಮಾಜಕ್ಕೆ ಮೀಸಲಾತಿ ಕೇಳಿದರೆ ಕೆಲವರಿಗೆ ಹೊಟ್ಟೆಉರಿ ಸುರುವಾಗಿದೆ. ಆದರೆ, ನಮ್ಮ ಹೋರಾಟ ನಿಲ್ಲುವುದಿಲ್ಲ ಮತ್ತು ಕೊನೆಯ ಹೋರಾಟ ಡಿ.12 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಹೋರಾಟಕ್ಕೆ ಎಲ್ಲರೂ ಭಾಗವಹಿಸಿ ಶಕ್ತಿ ತುಂಬಬೇಕಾಗಿದೆ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಕರೆ ನೀಡಿದರು.

ತಾಲೂಕಿನ ಬಳಗಾನೂರ ಗ್ರಾಮದ ಶ್ರೀ ನೀಲಗಂಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಗುರುವಾರ ವೀರರಾಣಿ ಕಿತ್ತೂರ ಚನ್ನಮ್ಮಾಜಿ ಅವರ 244ನೇ ಜಯಂತಿ, 199ನೇ ವಿಜಯೋತ್ಸವ ಹಾಗೂ 2ಎ ಮೀಸಲಾತಿ ಹಕ್ಕೋತ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, 1824ರಲ್ಲಿ ವೀರಮಾತೆ ಚನ್ನಮ್ಮಾ ದೇಶದ ಸ್ವಾತಂತ್ರ್ಯಕೊಸ್ಕರ ದಂಡೆದ್ದು ನಿಂತು ಹೋರಾಡಿದ ಪ್ರಥಮ ಮಹಿಳೆಯಾಗಿದ್ದಾಳೆ. ಅವಳ ಹೆಗಲಿಗೆ ಹೆಗಲ ಕೊಟ್ಟು ಹೋರಾಡಿದ ಸಂಗೋಳಿ ರಾಯಣ್ಣನಾಗಿದ್ದಾನೆ. ಈ ಭಾರತ ದೇಶಕ್ಕೊಸ್ಕರ ಅನೇಕ ಮಹನೀಯರು ತಮ್ಮ ಜೀವವನ್ನು ತ್ಯಾಗ ಮಾಡಿದ್ದಾರೆ. ಅಂತಹ ದೇಶದಲ್ಲಿ ಜನ್ಮ ತಾಳಿದ ನಾವು ಮೊದಲು ಭಾರತೀಯರು ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಪಂಚಮಸಾಲಿ ಸಮಾಜದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಡಿ.12ರಂದು ಪಂಚಮಸಾಲಿ ಸಮಾಜದ ಶಕ್ತಿಯನ್ನು ತೊರಿಸಲು ಸಮಾಜದ ಯುವಕರು, ಸಮಾಜದ ಎಲ್ಲರೂ ಮುಂದೆ ಬರಬೇಕು ಎಂದು ಮನವಿ ಮಾಡಿದರು.

Tap to resize

Latest Videos

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವೆ: ಜಾರಕಿಹೊಳಿ

ಸಮಾಜದ ಯುವಕರು, ತಾಯಂದಿಯರು ಹೆಚ್ಚು ಸಂಘಟನೆಯಾಗಬೇಕು. ಹೋರಾಟದುದ್ದಕ್ಕೂ ನೋಡಿದರೇ ಯುವಕರ ಸಂಖ್ಯೆ ಕಡಿಮೆ ಕಾಣುತ್ತಿದೆ. ಕೇವಲ ಡಿಜೆ ಹಚ್ಚಿ ಡೊಲ್ಲ ಹಚ್ಚಿ ಕುಣಿಯುವುದಲ್ಲ. ಹೋರಾಟಕ್ಕೆ ಪ್ರಾಣ ತೆತ್ತಬೇಕಾಗಿಲ್ಲ. ಹೋರಾಟ ಮಾಡಲು ಸಜ್ಜಾಗಬೇಕಾಗಿದೆ. ಮುಂದೆ ಗುರಿ ಇದೆ, ಹಿಂದೆ ಗುರು ಇದ್ದಾರೆ. ಗುರಿ ಮುಟ್ಟುವ ಧ್ಯೇಯವಾಗಿರಬೇಕು ಹೊರತು ಇಟ್ಟಹೆಜ್ಜೆ ಎಂದಿಗೂ ಹಿಂದೆ ಇಡಬಾರದು ಎಂದು ತಿಳಿಸಿದರು.

ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಧರ್ಮಕ್ಷೇತ್ರ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಅಖಂಡ ಕರ್ನಾಟಕವು ಪಂಚಮಸಾಲಿಗಳ ಬೀಡಾಗಿದೆ. ಸಮಾಜದಲ್ಲಿ ತುಳಿತಕ್ಕೊಳಗಾದವರಿಗೆ ಮಿಸಲಾತಿ ಎಂಬುವುದು ಅವಶ್ಯವಾಗಿದೆ. ಸದಾ ಕೃಷಿಯಲ್ಲಿ, ಕೂಲಿಕಾರ್ಮಿಕರಾಗಿ ದುಡಿಯುತ್ತಿರುವ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿ ಇಲ್ಲಾ ಕೊನೆಯ ಹೋರಾಟ ಡಿ.12 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವಂತಹ ಕಾರ್ಯ ನಡೆಯಲಿದೆ ಎಂದು ಎಚ್ಚರಿಸಿದರು.

ಡಿ.12 ಮಾಡು ಇಲ್ಲವೇ ಮಡಿ ಎಂಬ ಘೋಷವಾಖ್ಯದೊಂದಿಗೆ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶದ ನಂತರ ವಿಧಾನಸೌಧಕ್ಕೆ ಮುತ್ತಗಿ ಹಾಕುವಂತಹ ಕಾರ್ಯ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಪಂಚಮಸಾಲಿ ಸಮಾಜದ ಜನರು 25 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ. ಈ ಭಾಗದಲ್ಲಿ ದೇಶಮುಖರಂತವರನ್ನು ಕಳೆದುಕೊಂಡ ಮೇಲೆ ಎಲ್ಲರಲ್ಲಿಯೂ ನೋವು ಕಾಡುತ್ತಿದೆ. ಪಂಚಮಸಾಲಿಗಳು ಹೊರಗಡೆ ಗುಡುಗಿದರೇ, ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರು ವಿಧಾನಸೌದದಲ್ಲಿ ಗುಡುಗಿದ್ದಾರೆ. ನನಗೆ ಮಂತ್ರಿ ಪದವಿ ಬೇಕಿಲ್ಲ, ನನ್ನ ಸಮಾಜಕ್ಕೆ ಮೀಸಲಾತಿ ಬೇಕು ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಲು ಮೀಸಲಾತಿ ಅವಶ್ಯವಾಗಿದ್ದು, ಅದನ್ನು ಒದಗಿಸುವಂತಹ ಕಾರ್ಯ ಮಾಡಿ ಎಂದು ವಿಧಾನಸೌಧದ ಬಾವಿಯಲ್ಲಿ ಕುಳಿತು ಪ್ರತಿಭಟಿಸುವಂತಹ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕಿ ಸಂಯುಕ್ತಾ ಪಾಟೀಲ ಮಾತನಾಡಿ, ಸಮಾಜವು ಗಟ್ಟಿಯಾಗಿ ಬೆಳೆದು ನಿಲ್ಲಬೇಕಾದರೆ ಶಿಕ್ಷಣವೆಂಬುದು ಅವಶ್ಯವಾಗಿದೆ. ನಮ್ಮಲ್ಲಿರುವ ಸಂಪತ್ತು, ಆಸ್ತಿ, ಅಂತಸ್ತು ಎಂಬುವುದು ಯಾವುದೇ ಸಮಯದಲ್ಲಿ ಕಳೆದು ಹೋಗಬಹುದು. ಆದರೆ, ಕಲೆತ ಶಿಕ್ಷಣ ನಮ್ಮ ಜೀವನವನ್ನು ರೂಪಿಸಿ ಕೊಡುತ್ತದೆ ಹೀಗಾಗಿ ಸಮಾಜದ ಏಳಿಗೆಗಾಗಿ ಕೈಗೊಂಡಿರುವ ಹೋರಾಟದಲ್ಲಿ ಮಹಿಳೆಯರು ಭಾಗವಹಿಸಬೇಕು ಎಂದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಯುವ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ ಮಾತನಾಡಿ, ಪಂಚಮಸಾಲಿ ಸಮಾಜವು ಶತಮಾನಗಳಿಂದಲೂ ಇತಿಹಾಸವನ್ನು ಹೊಂದಿದ ಸಮಾಜವಾಗಿದೆ. ಈ ಸಮಾಜದಲ್ಲಿರುವ ಮಕ್ಕಳ ಶಿಕ್ಷಣಕ್ಕೆ ಮತ್ತು ಬಡವರಿಗೆ ಆರ್ಥಿಕವಾಗಿ ಮೇಲಕ್ಕೆ ಬರಲಿ ಮೀಸಲಾತಿ ಎಂಬುವುದು ಅವಶ್ಯಕ. ಹೀಗಾಗಿ ಡಿ.12 ಕೊನೆಯ ಹೋರಾಟವಾಗಿದ್ದು, ಮುದ್ದೇಬಿಹಾಳ, ತಾಳಿಕೋಟೆ ಅವಳಿ ತಾಲೂಕಿನ ಪಂಚಮಸಾಲಿ ಸಮಾಜ ಬಾಂಧವರು ಭಾಗವಹಿಸಿ ಕೊನೆಯ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಕೋರಿದರು.

ಬಿಜೆಪಿ ಮುಖಂಡ ಶಿವಶಂಕರಗೌಡ ಹಿರೇಗೌಡರ, ವೀರಾಜ ಪಾಟೀಲ, ಎಂ.ಬಿ.ಅಲದಿ, ಜಿಲ್ಲಾ ಅಧ್ಯಕ್ಷ ಬಿ.ಎಂ.ಪಾಟೀಲ ಮಾತನಾಡಿದರು. ಬಳಗಾನೂರ ಗ್ರಾಮದ ಮಂಜುಳಾತಾಯಿ ಸಾನ್ನಿಧ್ಯ ವಹಿಸಿದ್ದರು. ಬಳಗಾನೂರ ಗ್ರಾಮದ ನಿಂಗನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಂಜಿವಿಸಿ ಕಾಲೇಜ್‌ ಉಪನ್ಯಾಸಕ ಪ್ರಕಾಶ ನರಗುಂದ ಉಪನ್ಯಾಸ ನೀಡಿದರು.

ಈ ಸಮಯದಲ್ಲಿ ಸಮಾಜದ ಮುಖಂಡರುಗಳಾದ ಗುರು ತಾರನಾಳ, ಗುರು ದೇಶಮುಖ, ಅಮರೇಶ ಗೂಳಿ, ಡಾ.ವಿ.ಎಸ್‌.ಕಾರ್ಚಿ, ಜಿ.ಎಸ್‌.ಸೋಲ್ಲಾಪೂರ, ಕಾಮರಾಜ ಬಿರಾದಾರ, ಡಾ.ಶ್ರೀಶೈಲ ಹುಕ್ಕೇರಿ, ಪ್ರಭು ಬಿಳೇಭಾವಿ, ಶಿವರಾಜ ಪಾಟೀಲ, ಬಸವರಾಜ ಡೆಂಗಿ, ಶರಣಪ್ಪ ಗಂಗನಗೌಡರ, ಸಂತೋಷ ಹಂಗರಗಿ, ದೇವಿಂದ್ರ ಕೊಪ್ಪದ, ಎಂ.ಎಸ್‌.ಪಾಟೀಲ, ಪೃಥ್ವಿರಾಜ ಪಾಟೀಲ, ಪ್ರಭುಗೌಡ ಪಾಟೀಲ, ಚಂದ್ರಶೇಖರ ಅಲದಿ, ಅಂಬ್ರೀಶ ಪಾಟೀಲ, ಶ್ರೀಕಾಂತ ಬಿರಾದಾರ, ಮುತ್ತು ವನಹಳ್ಳಿ, ಅನೀಲಗೌಡ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು. ಶ್ರೀಕಾಂತ ಬಿರಾದಾರ ಸ್ವಾಗತಿಸಿದರು. ರಾಜು ಹಾದಿಮನಿ ನಿರೂಪಿಸಿದರು. ಸವಿತಾ ಬಿರಾದಾರ ವಂದಿಸಿದರು.

ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಕೊಟ್ಟೇ ಸರ್ಕಾರ ಚುನಾವಣೆಗೆ ಹೋಗುತ್ತೆ‌‌; ವಚನಾನಂದ ಶ್ರೀ

ಭಾರತ ದೇಶಕೋಸ್ಕರ ದುಡಿದಂತಹ ಪಂಚಮಸಾಲಿ ಸಮಾಜದ ಜನರು ಇಂದು ಕೂಲಿ ನಾಲಿ ಮಾಡುತ್ತಿದ್ದಾರೆ. ಹಮಾಲಿ ಕೆಲಸ ಮಾಡುತ್ತಿದ್ದಾರೆ. ಕೃಷಿಕ ಕೆಲಸ ಮಾಡುತ್ತಿದ್ದಾರೆ. ಇಂತಹ ಸಮಾಜ ಎಲ್ಲ ರಂಗಗಳಲ್ಲಿಯೂ ಅರ್ಹತೆ ಪಡೆಯಲು 2ಎ ಮೀಸಲಾತಿ ಅವಶ್ಯವಾಗಿದೆ ಅಂತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ. 

ಸಮಾಜದ ಎಲ್ಲರೂ ಸಂಘಟಿತರಾಗಿ ಮೀಸಲಾತಿ ಹೋರಾಟದಲ್ಲಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಹೋರಾಟವನ್ನು ಯಶಸ್ವಿಗೊಳಿಸೋಣ. ಮೀಸಲಾತಿ ಘೋಷಣೆಯಾದರೇ ಸನ್ಮಾನ, ಇಲ್ಲವಾದರೇ ಅವಮಾನ. ಮಹಿಳೆಯರು ಹೆಚ್ಚು ಸಂಘಟನೆ ಮಾಡುವ ಮೂಲಕ ಹೋರಾಟಕ್ಕೆ ಶಕ್ತಿ ತುಂಬೋಣ ಅಂತ ಪಂಚಮಸಾಲಿ ಸಮಾಜದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದ್ದಾರೆ.  
 

click me!