* ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆ
* ಖಾಸಗಿ ವಿಮಾನ ನಿಲ್ದಾಣ ಕೈಬಿಟ್ಟ ಜಿಲ್ಲಾಡಳಿತ
* ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾದ ಜಿಲ್ಲಾಡಳಿತ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜೂ.28): ಕೇಂದ್ರ ಸರ್ಕಾರ ಕೊಪ್ಪಳಕ್ಕೆ ಉಡಾನ್ ಘೋಷಣೆ ಮಾಡಿ ನಾಲ್ಕು ವರ್ಷಗಳೇ ಕಳೆದರೂ ಇನ್ನು ಜಾರಿಯಾಗಿಲ್ಲ. ಬರಿ ಸಭೆ, ಯೋಜನೆ ಸಿದ್ಧಪಡಿಸುವಲ್ಲಿಯೇ ಜಿಲ್ಲಾಡಳಿತ ಕಾಲಕಳೆಯುತ್ತಿರುವುದು ವ್ಯಾಪಕ ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ ಮತ್ತೆ ಗರಿಗೆದರಿಗೆ ಉಡಾನ್ ಯೋಜನೆ ಜಾರಿಯ ಕನಸು.
ಖಾಸಗಿ ವಿಮಾನ ತಂಗುದಾಣದಲ್ಲಿಯೇ ಉಡಾನ್ ಅನುಷ್ಠಾನ ಮಾಡಲು ಮುಂದಾಗಿದ್ದ ಜಿಲ್ಲಾಡಳಿತಕ್ಕೆ ಖಾಸಗಿ ಕಂಪನಿಯ ಷರತ್ತುಗಳು ಇರಸುಮುರಸು ಮಾಡಿತು. ಅಲ್ಲದೆ ಯೋಜನೆಯ ಅನುಷ್ಠಾನಕ್ಕೆ ಕೊನೆಗೂ ಸಮ್ಮತಿ ನೀಡಿದ ಬಲ್ಡೋಟಾ ಕಂಪನಿ ನಾನಾ ಷರತ್ತು ವಿಧಿಸಿದೆ. ಇದರಿಂದ ರೋಸಿ ಹೋಗಿರುವ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈಗ ಹೊಸ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ನೂರು ಕೋಟಿ ರುಪಾಯಿ ಅನುದಾನದ ಭರವಸೆ ಸಿಕ್ಕಿದೆ. ಹೀಗಾಗಿ, ಪ್ರತ್ಯೇಕವಾಗಿ ಸರ್ಕಾರದಿಂದಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಏನಿದು ಹೊಸ ಯೋಜನೆ?:
ಅಭಿವೃದ್ಧಿ ಮಂಡಳಿಯಿಂದ ನೂರು ಕೋಟಿ ರುಪಾಯಿ ಅನುದಾನ ಸಿಗುವ ಭರವಸೆ ಸಿಕ್ಕಿರುವುದರಿಂದ ಕುಷ್ಟಗಿ ರಸ್ತೆಯಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಭೂಮಿಯನ್ನು ಗುರುತಿಸಿ, ಜಿಲ್ಲಾಡಳಿತ ಯೋಜನೆ ಸಿದ್ಧ ಮಾಡಿದೆ. ಇದಕ್ಕಾಗಿ ಈಗಾಗಲೇ 512 ಎಕರೆ ಭೂಮಿಯನ್ನು ಗುರುತಿಸಿದ್ದು, ಖರೀದಿ ಮಾಡಲು ಮುಂದಾಗಿದೆ. ವಿಮಾನ ನಿಲ್ದಾಣಕ್ಕೆ ಭೂಮಿ ಖರೀದಿ ಮಾಡುವುದೇ ದೊಡ್ಡ ಸವಾಲು ಆಗಿತ್ತು. ಹೀಗಾಗಿ, ಖಾಸಗಿ ವಿಮಾನ ನಿಲ್ದಾಣದಲ್ಲಿಯೇ ಉಡಾನ್ ಯೋಜನೆಯನ್ನು ಜಾರಿ ಮಾಡಲು ಮುಂದಾಗಿತ್ತು. ಆದರೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಭೂಮಿಯನ್ನು ಖರೀದಿ ಮಾಡಲು ಅನುಮತಿ ಸಿಕ್ಕಿರುವುದರಿಂದ ಹೊಸ ವಿಮಾನ ನಿಲ್ದಾಣವನ್ನೇ ನಿರ್ಮಾಣ ಮಾಡಲು ಮುಂದಾಗಿದೆ.
ನಾಲ್ಕು ವರ್ಷ ಬೇಕಾಯಿತು:
2017ರಲ್ಲಿಯೇ ಕೊಪ್ಪಳಕ್ಕೆ ಉಡಾನ್ ಯೋಜನೆ ಮಂಜೂರಿಯಾಗಿದೆ. ಇದರ ಜತೆಗೆ ಮಂಜೂರಿಯಾಗಿರುವ ಎಲ್ಲ ಜಿಲ್ಲೆಯಲ್ಲಿಯೂ ಈಗಾಗಲೇ ಉಡಾನ್ ಯೋಜನೆಯನ್ನು ಜಾರಿ ಮಾಡಲಾಗಿದೆ. ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಅದು ಅನುಷ್ಠಾನವಾಗಿಲ್ಲ.
ಖಾಸಗಿ ವಿಮಾನ ನಿಲ್ದಾಣದಲ್ಲಿಯೇ ಮಾಡಬೇಕೇ ಅಥವಾ ಹೊಸ ವಿಮಾನ ನಿಲ್ದಾಣವನ್ನೇ ನಿರ್ಮಾಣ ಮಾಡಬೇಕೆ ಎನ್ನುವ ಕುರಿತು ತೀರ್ಮಾನ ಮಾಡಲು ನಾಲ್ಕು ವರ್ಷ ಬೇಕಾಯಿತು. ಕೇವಲ ತೀರ್ಮಾನ ಮಾಡಲು ನಾಲ್ಕು ವರ್ಷ ಬೇಕಾಗಿರುವುದರಿಂದ ಜಾರಿ ಮಾಡಲು ಎಷ್ಟುವರ್ಷ ಬೇಕಾಗಬಹುದು ಎಂದು ಪ್ರಶ್ನೆ ಮಾಡಲಾಗುತ್ತದೆ.
ಪ್ರಸ್ಥಾವನೆ ಸಿದ್ಧ:
ಹೊಸ ವಿಮಾನ ನಿಲ್ದಾಣಕ್ಕೆ ಪ್ರಸ್ತಾವನೆ ಸಿದ್ಧ ಮಾಡಿರುವ ಜಿಲ್ಲಾಡಳಿತ ಈ ಕುರಿತು ಚರ್ಚೆ ಮಾಡಲು ಜೂ. 28ರಂದು ಸಭೆ ಕರೆಯಲಾಗಿದೆ. ಈಗಾಗಲೇ ಪ್ರಸ್ತಾವನೆಯನ್ನು ಸಿದ್ಧ ಮಾಡಿರುವ ಜಿಲ್ಲಾಡಳಿತ ಜನಪ್ರತಿನಿಧಿಗಳು ಮತ್ತು ಪ್ರಜ್ಞಾವಂತರ ಅಭಿಪ್ರಾಯದೊಂದಿಗೆ ಸರ್ಕಾರಕ್ಕೆ ಕಳುಹಿಸಿಕೊಡಲು ಮುಂದಾಗಿದೆ.
ಶಾಶ್ವತ ಪರಿಹಾರ:
ಜಿಲ್ಲೆಯಲ್ಲಿ ಕೈಗಾರಿಕಾ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಇವೆ. ತೋಟಗಾರಿಕೆ ಬೆಳೆಯಲ್ಲಿ ಜಿಲ್ಲೆ ಅದ್ವಿತೀಯ ಸಾಧನೆ ಮಾಡುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣ ಬೇಕೆ ಬೇಕು. ಹೀಗಾಗಿ, ಖಾಸಗಿ ವಿಮಾನ ನಿಲ್ದಾಣವನ್ನು ಅವಲಂಬಿಸಿಕೊಂಡು, ಅವರ ಕಿರಿಕಿರಿಯನ್ನು ಸಹಿಸಿಕೊಳ್ಳುವ ಬದಲು ಪ್ರತ್ಯೇಕವಾಗಿ ವಿಮಾನ ನಿಲ್ದಾಣ ಮಾಡಿ, ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಆದರೆ, ಇದು ವೇಗವಾಗಿ ಆಗಬೇಕು ಎನ್ನುವ ಆಗ್ರಹವೂ ಕೇಳಿ ಬರುತ್ತಿದೆ. ಇದು ಕೇವಲ ನನೆಗುದಿಗೆ ಬಿದ್ದಿರುವ ಉಡಾನ್ ಯೋಜನೆ ಕುರಿತು ಕಣ್ಣೊರೆಸುವ ತಂತ್ರವಾಗಬಾರದು.
ವಿಮಾನ ನಿಲ್ದಾಣ ಹಾಗೂ ಉಡಾನ್ ಯೋಜನೆ ಜಾರಿ ಕುರಿತು ನಾವು ಅನೇಕ ಬಾರಿ ಮನವಿ ಮಾಡಿದರೂ ಅನುಷ್ಠಾನ ನಿಧಾನಗತಿಯಲ್ಲಿ ಆಗುತ್ತಿರುವುದು ಬೇಸರ ತರಿಸಿದೆ. ಆದರೂ ಇದನ್ನು ಇಷ್ಟಕ್ಕೆ ಕೈಬಿಡುವುದಿಲ್ಲ ಎಂದು ಉಡಾನ್ ಅನುಷ್ಠಾನ ಹೋರಾಟ ಸಮಿತಿ ಸಂಚಾಲಕ ಆರ್.ಬಿ. ಪಾನಘಂಟಿ ತಿಳಿಸಿದ್ದಾರೆ.
ಖಾಸಗಿ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಬದಲು ಶಾಶ್ವತ ಪರಿಹಾರಕ್ಕಾಗಿ ಹೊಸ ವಿಮಾನ ನಿಲ್ದಾಣಕ್ಕೆ ಯೋಜನೆಯನ್ನು ಸಿದ್ಧ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೂಲಕ 100 ಕೋಟಿ ಅನುದಾನ ಪಡೆಯಲಾಗುತ್ತಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.