ಹೊಸ ವರ್ಷಾಚರಣೆ ಅಂಗವಾಗಿ ಪ್ರತಿ ವರ್ಷದಂತೆಯೇ ಈ ವರ್ಷವೂ ವಿಜಯನಗರದ ಶ್ರೀ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಲಾಡು ಪ್ರಸಾದ ವಿತರಿಸಲಾಯಿತು.
ಮೈಸೂರು (ಡಿ. 02): ಹೊಸ ವರ್ಷಾಚರಣೆ ಅಂಗವಾಗಿ ಪ್ರತಿ ವರ್ಷದಂತೆಯೇ ಈ ವರ್ಷವೂ ವಿಜಯನಗರದ ಶ್ರೀ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಲಾಡು ಪ್ರಸಾದ ವಿತರಿಸಲಾಯಿತು.
ದೇವಸ್ಥಾನದ ಸ್ಥಾಪಕ ಪ್ರೊ. ಭಾಷ್ಯಂ ಸ್ವಾಮಿ ಅವರು ಹೊಸ ವರ್ಷದ ಮೊದಲ ದಿನವಾದ ಭಾನುವಾರಕ್ಕೆ ಆಗಮಿಸಿದ ಭಕ್ತರಿಗೆ ಸಿಹಿ ನೀಡಿ ಶುಭ ಕೋರಿದರು. ತಿರುಪತಿ ಮಾದರಿಯ ಲಾಡುಗಳನ್ನು ಸಾರ್ವಜನಿಕರಿಗೆ ಪ್ರತಿ ವರ್ಷದಂತೆ ವಿತರಿಸಿದರು.
undefined
ಹೊಸ ವರ್ಷದ ಮೊದಲ ದಿನವಾದ ಭಾನುವಾರ ಸಾವಿರಾರು ಮಂದಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ದೇವಾಲಯದಲ್ಲಿ ಶ್ರೀ ಯೋಗಾನರಸಿಂಹಸ್ವಾಮಿಗೆ ವಿಶೇಷ ಅಲಂಕಾರ, ಶ್ರೀರಂಗಂ, ಮಧುರೈ ಕ್ಷೇತ್ರದಿಂದ ತರಿಸಿರುವ ವಿಶೇಷ ತೋಮಾಲೆ ಮತ್ತು ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ ಸಹಸ್ರನಾಮರ್ಚನೆ ಮತ್ತು ದೇವಾಲಯದ ಉತ್ಸವ ಮೂರ್ತಿ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೆ ದೇವಾಲಯದ ಆವರಣದಲ್ಲಿ ಏಕಾದಶ ಪ್ರಾಕಾರೋತ್ಸವ ನಡೆಯಿತು. ಬಳಿಕ ಲಾಡು ಪ್ರಸಾದ ವಿತರಿಸಲಾಯಿತು.
ಮುಂಜಾನೆಯಿಂದಲೇ ದೇಗುಲದತ್ತ ಬಂದ ಸಾರ್ವಜನಿಕರು ಯೋಗನರಸಿಂಹಸ್ವಾಮಿ ದರ್ಶನ ಪಡೆದು ಲಾಡು ಪ್ರಸಾದ ಸ್ವೀಕರಿಸಿದರು. ಬೆಳಗ್ಗೆಯಿಂದ ಸಂಜೆ 7 ಗಂಟೆಯವರೆಗೂ ಲಾಡು ವಿತರಿಸಲಾಯಿತು. ಜೊತೆಗೆ 20 ಕ್ವಿಂಟಾಲ್ ಪುಳಿಯೋಗರೆ ತಯಾರಿಸಿ ವಿತರಿಸಲಾಯಿತು.
ಈ ವರ್ಷ ಅಂದಾಜು 2 ಕೆ.ಜಿ ತೂಕದ 10 ಸಾವಿರ ಲಾಡುಗಳು ಹಾಗೂ 150 ಗ್ರಾಂ ತೂಕದ 2 ಲಕ್ಷ ಲಾಡುಗಳನ್ನು 60 ನುರಿತ ಬಾಣಸಿಗರಿಂದ ತಯಾರಿಸಲಾಗಿತ್ತು. ಡಿ. 21 ರಿಂದ ಆರಂಭವಾದ ಲಾಡು ತಯಾರಿಕೆ 31 ರಂದು ಮುಕ್ತಾಯಗೊಂಡಿತು.
ಲಾಡು ತಯಾರಿಕೆಗೆ 75 ಕ್ವಿಂಟಾಲ್ ಕಡ್ಲೆಹಿಟ್ಟು, 200 ಕಿಂಟಾಲ್ ಸಕ್ಕರೆ, 6000 ಲೀಟರ್ ಖಾದ್ಯ ತೈಲ, 200 ಕೆ.ಜಿ ಗೋಡಂಬಿ, 200 ಕೆ.ಜಿ ಒಣದ್ರಾಕ್ಷಿ, 100 ಕೆ.ಜಿ ಬಾದಾಮಿ, 500 ಕೆ.ಜಿ ಡೈಮಂಡ್ ಸಕ್ಕರೆ, 1000 ಕೆ.ಜಿ ಬೂರಾ ಸಕ್ಕರೆ, 20 ಕೆ.ಜಿ ಪಿಸ್ತಾ, 50 ಕೆ.ಜಿ ಏಲಕ್ಕಿ, 40 ಕೆ.ಜಿ ಜಾಕಾಯಿ ಮತ್ತು ಜಾಪತ್ರೆ, 10 ಕೆ.ಜಿ, ಪಚ್ಚೆ ಕರ್ಪೂರ, 100 ಕೆ.ಜಿ ಲವಂಗ ಬಳಸಲಾಗಿದೆ.
ಮುಂಜಾನೆ 4 ಗಂಟೆಯಿಂದ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ಸುಮಾರಿಗೆ 50 ಸಾವಿರ ಜನರಿಗೆ ಲಾಡು ವಿತರಿಸಲಾಗಿದೆ.
-ಎನ್. ಶ್ರೀನಿವಾಸನ್, ಆಡಳಿತಾಧಿಕಾರಿ
1994ರಿಂದ ಹೊಸ ವರ್ಷದ ದಿನ ಲಾಡು ವಿತರಣೆ ಮಾಡಲಾಗುತ್ತಿದೆ. ಸ್ವಾಮಿಗೆ ವಿಶೇಷ ಕೈಂಕರ್ಯಗಳ ನೆರವೇರಿಸಲಾಗಿದೆ. ಜಾತಿ ಭೇದವಿಲ್ಲದೇ ಸಾರ್ವಜನಿಕರು ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು.
-ಪ್ರೊ. ಭಾಷ್ಯಂ ಸ್ವಾಮಿ, ದೇವಸ್ಥಾನದ ಸಂಸ್ಥಾಪಕರು.