ನಗರದಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ರೈಲ್ವೆ ಬೋರ್ಡ್ ಹಾಗೂ ರೈಲ್ವೆ ಸಚಿವರೊಂದಿಗೆ ಮಾತನಾಡಿದ್ದೇನೆ ಎಂದು ಸಂಸದ ಜಿ.ಎಸ್. ಬಸವರಾಜ್ ತಿಳಿಸಿದರು.
ತುಮಕೂರು: ನಗರದಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ರೈಲ್ವೆ ಬೋರ್ಡ್ ಹಾಗೂ ರೈಲ್ವೆ ಸಚಿವರೊಂದಿಗೆ ಮಾತನಾಡಿದ್ದೇನೆ ಎಂದು ಸಂಸದ ಜಿ.ಎಸ್. ಬಸವರಾಜ್ ತಿಳಿಸಿದರು.
ತುಮಕೂರು ಜಿಲ್ಲಾ ಪ್ರಯಾಣಿಕರ ವೇದಿಕೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ,ಗಳನ್ನು ಪುರಸ್ಕರಿಸಿ ಮಾತನಾಡಿದ ಅವರು, ತುಮಕೂರು ನಗರ ಸಾಕಷ್ಟುಅಭಿವೃದ್ಧಿಯಾಗುತ್ತಿದೆ. ಸ್ಮಾರ್ಚ್ ಸಿಟಿಯಾಗಿ, ಕೈಗಾರಿಕಾ ಪ್ರದೇಶವಾಗಿಯೂ ಹೆಚ್ಚು ಪ್ರಾತಿನಿಧ್ಯ ಪಡೆಯುತ್ತಿದ್ದು, ಬೆಂಗಳೂರಿನಿಂದ ತುಮಕೂರಿಗೆ ಬಂದು ವಾಸಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಪ್ರಯಾಣಕ್ಕೆ ಇನ್ನೂ ಹೆಚ್ಚಿನ ರೈಲ್ವೆ ಸಂಪರ್ಕ ಪಡೆಯುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಾಕಷ್ಟುಶ್ರಮಿಸುತ್ತಿರುವುದಾಗಿ ಬಸವರಾಜ್ ತಿಳಿಸಿದರು.
ಪ್ರಯಾಣಿಕರ ವೇದಿಕೆ ಮನವಿ ಮೇರೆಗೆ ಜಿಲ್ಲಾ ರೈಲ್ವೆ ಪ್ರಯಾಣಿಕರ ಅನುಕೂಲಕ್ಕೆ ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಮುಂದೆ ಬರುವ ಜನಪ್ರತಿನಿಧಿಗಳು ಕೂಡಾ ಪ್ರಯಾಣಿಕರ ಬೇಡಿಕೆಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸಬೇಕೆಂದು ಸಂಸದರು ಆಶಿಸಿದರು.
ಪಾಲಿಕೆ ಸದಸ್ಯೆ ಗಿರಿಜಾ ಧನಿಯಾ ಕುಮಾರ್ ಮಾತನಾಡಿ, ರೈಲ್ವೇ ಪ್ರಯಾಣಿಕರ ಬೇಡಿಕೆಗಳಿಗೆ, ಅಗತ್ಯಗಳಿಗೆ ಪೂರಕವಾಗಿ ವೇದಿಕೆ ಶ್ರಮಿಸುತ್ತಿದ್ದು, ಇಲ್ಲಿ ಪುರಸ್ಕಾರಗೊಂಡ ವಿದ್ಯಾರ್ಥಿಗಳು ಮುಂದಿನ ವಿದ್ಯಾರ್ಥಿಗಳು ಮಾದರಿಯಾಗಿ ಬೆಳೆದು ಸಮಾಜಕ್ಕೆ ಆದರ್ಶರಾಗಬೇಕೆಂದು ಕಿವಿಮಾತು ಹೇಳಿದರು.
ನೈಋುತ್ಯ ರೈಲ್ವೆ ಹುಬ್ಬಳ್ಳಿಯ ಸಹಾಯಕ ವಾಣಿಜ್ಯ ಅಧಿಕಾರಿ ಡಿ. ಧನಂಜಯ ಮಾತನಾಡಿ, ರೈಲ್ವೆ ಇಲಾಖೆಯ ಎಲ್ಲ ಕಾರ್ಯಕ್ರಮಗಳಲ್ಲೂ ಪ್ರಯಾಣಿಕರ ವೇದಿಕೆ ಅತ್ಯಂತ ಸಕ್ರಿಯವಾಗಿ ಭಾಗವಹಿಸುತ್ತಿದೆ. ಅಲ್ಲದೆ ಪ್ರಯಾಣಿಕರ ಅಗತ್ಯಗಳಿಗೆ ತಕ್ಕಂತೆ ಸ್ಪಂದಿಸಿ ಅನುಕೂಲ ಕಲ್ಪಸುವಲ್ಲಿ ಶ್ರಮಿಸುತ್ತಿದೆ ಎಂದರು. ರೋಟರಿ ತುಮಕೂರು ಅಧ್ಯಕ್ಷ ಸಿ. ನಾಗರಾಜ್ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲೂ ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವವಾದುದು. ಪ್ರತಿ ವಿದ್ಯಾರ್ಥಿಯೂ ಹೆತ್ತವರು, ಗುರುಗಳು ಹಾಗೂ ತುಮಕೂರು ನಗರಕ್ಕೆ ಒಳ್ಳೆಯ ಹೆಸರನ್ನು ತರಬೇಕು. ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಸಂಘ-ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ಪೂರಕವಾಗಿ ಸ್ಪಂದಿಸುವ ಅಗತ್ಯವಿದೆ ಎಂದರು.
ರೋಟರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಸ್.ಎಲ್. ಕಾಡದೇವರ ಮಠ್ ಮಾತನಾಡಿ, ತಮ್ಮ ರೀಡ್ ಬುಕ್ ¶ೌಂಡೇಶನ್ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳು ಪುಸ್ತಕ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕೆಂದರು.
ವೇದಿಕೆ ಪ್ರಧಾನ ಕಾರ್ಯದರ್ಶಿ ಕರಣಂ ರಮೇಶ್ ಮಾತನಾಡಿ, ಪ್ರಯಾಣಿಕರ ಬಹುದಿನಗಳ ಬೇಡಿಕೆಯಾದ ಬೆಳಗ್ಗೆ ಮತ್ತು ಸಂಜೆ ಬೆಂಗಳೂರಿನಿಂದ ತುಮಕೂರು ಕಡೆಗೆ ಹೊಸ ಮೆಮು ರೈಲು ಸಂಚಾರ ಆರಂಭಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿದ್ದು, ಇನ್ನೊಂದೆರಡು ತಿಂಗಳಲ್ಲಿ ಈ ಬೇಡಿಕೆ ಈಡೇರಬಹುದು. ತುಮಕೂರು ರೈಲು ಪ್ರಯಾಣಿಕರಿಗೆ ಅಗತ್ಯವಾದ ಅನುಕೂಲಗಳನ್ನು ಕಲ್ಪಿಸಲು ಪ್ರಯಾಣಿಕರ ವೇದಿಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ಹಲವಾರು ಬೇಡಿಕೆಗಳನ್ನು ಇಲಾಖೆ ಅಧಿಕಾರಿಗಳು ಈಡೇರಿಸಿದ್ದಾರೆ ಎಂದ ಅವರು ಇನ್ನು ಮುಂದೆಯೂ ಪ್ರಯಾಣಿಕರ ಅಗತ್ಯಗಳಿಗೆ ವೇದಿಕೆ ಸ್ಪಂದಿಸಲಿದೆ ಎಂದರು.
ವೇದಿಕೆ ಅಧ್ಯಕ್ಷೆ ಬಾ. ಹ. ರಮಾಕುಮಾರಿ ಮಾತನಾಡಿ, ಪ್ರಯಾಣಿಕರ ವೇದಿಕೆಯ ವ್ಯಾಪ್ತಿ ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿದ್ದು, ಜಿಲ್ಲೆಯ ಎಲ್ಲ ರೈಲ್ವೆ ಪ್ರಯಾಣಿಕರ ಸಮಸ್ಯೆಗಳನ್ನು ಬಗೆಹರಿಸುವತ್ತ ಹೆಚ್ಚಿನ ರೀತಿಯಲ್ಲಿ ಶ್ರಮಿಸುವ ಜವಾಬ್ದಾರಿ ಹೊತ್ತಿದೆ ಎಂದರು.
ಇನ್ನರ್ ವ್ಹೀಲ್ ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾಗರಾಜ್, ಪ್ರತಿಭಾ ಪುರಸ್ಕೃತಿ ವಿದ್ಯಾರ್ಥಿಗಳ ಹೆತ್ತವರು, ಆಟೋ ಚಾಲಕರು ಹಾಗು ಹಲವು ರೈಲ್ವೆ ಪ್ರಯಾಣಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜನ್ ಪ್ರಾರ್ಥಿಸಿ, ವೇದಿಕೆ ನಿರ್ದೇಶಕ ಮಂಜೇಶ್ ಸ್ವಾಗತಿಸಿದರು. ಉಪಾಧ್ಯಕ್ಷ ಪರಮೇಶ್, ಜಂಟಿ ಕಾರ್ಯದರ್ಶಿಗಳಾದ ರಘು ರಾಮಚಂದ್ರಯ್ಯ, ಸಗರ ಚಕ್ರವರ್ತಿ ಅಭಿನಂದಿತರ ಪರಿಚಯ ಮಾಡಿಕೊಟ್ಟರು. ನಿರ್ದೇಶಕ ರಾಮಾಂಜನೇಯ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ಆರ್. ಬಾಲಾಜಿ ವಂದಿಸಿದರು.
ರೈಲು ನಿಲ್ದಾಣಕ್ಕೆ ಸಾರಿಗೆ ಬಸ್: ಜ್ಯೋತಿಗಣೇಶ್
ತುಮಕೂರು ನಗರ ನಿಲ್ದಾಣಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿ ಅನುಕೂಲ ಮಾಡಿಕೊಡಲಾಗುವುದು ಎಂದು ನಗರ ಶಾಸಕ ಜ್ಯೋತಿಗಣೇಶ್ ಭರವಸೆ ನೀಡಿದರು.
ತುಮಕೂರಿನ ಸಿದ್ಧಗಂಗಾ ಆಸ್ಪತ್ರೆ ಸಹಯೋಗದಲ್ಲಿ ವೇದಿಕೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸ್ವಯಂ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಉದ್ಘಾಟಿಸಿದ ನಗರ ಶಾಸಕ ಜ್ಯೋತಿ ಗಣೇಶ್ ಮಾತನಾಡಿದರು. ಬೆಳಗ್ಗೆ ಮತ್ತು ಸಂಜೆ ನಿಗದಿತ ವೇಳೆಯಲ್ಲಿ ರೈಲು ನಿಲ್ದಾಣದ ಮೂಲಕ ನಗರ ಸಾರಿಗೆ ಬಸ್ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲಿದೆ ಎಂಬ ವೇದಿಕೆಯ ಬೇಡಿಕೆಗೆ ಸ್ಪಂದಿಸಿದ ಅವರು, ಈ ಬಗ್ಗೆ ಒಂದು ಮನವಿ ಕೊಡಿ, ಅಧಿಕಾರಿಗಳೊಂದಿಗೆ ಮಾತನಾಡಿ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚಿಸುವುದಾಗಿ ನುಡಿದರು.
ಸಿದ್ಧಗಂಗಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ನಡೆಸಿಕೊಟ್ಟಆರೋಗ್ಯ ಶಿಬಿರದಲ್ಲಿ 236 ಜನರು ಆರೋತ್ಯ ತಪಾಸಣೆ ಮಾಡಿಸಿಕೊಂಡರು. 15 ಯೂನಿಟ್ ರಕ್ತ ಸಂಗ್ರಹಿಸಿ ಸಿದ್ಧಗಂಗಾ ಆಸ್ಪತ್ರೆಗೆ ಕೊಡುಗೆ ನೀಡಲಾಯಿತು.