ಧರ್ಮಸ್ಥಳದಿಂದ ರಕ್ಷಣೆಗೆ ‘ವಿಪತ್ತು ನಿರ್ವಹಣಾ ತಂಡ’

By Web DeskFirst Published Aug 19, 2019, 1:52 PM IST
Highlights

ರಾಜ್ಯವೀಗ ಪ್ರವಾಹ ಪೀಡಿತವಾಗಿ ಲಕ್ಷಾಂತರ ಜನರ ಬದುಕು ತತ್ತರಿಸಿದೆ. ಇಂತಹ ವಿಕೋಪಗಳ ಸಂದರ್ಭದಲ್ಲಿ ರಕ್ಷಣೆ ಒದಗಿಸುವ ಉದ್ದೇಶದಿಂದ ತಂಡ ರಚನೆ ಮಾಡಲಾಗುತ್ತಿದೆ. 

ಬೆಳ್ತಂಗಡಿ [ಆ.19] : ರಾಜ್ಯದಲ್ಲಿ ನೆರೆ ಹಾವಳಿ, ಭೂಕುಸಿತ, ಬಿರುಗಾಳಿ ಮುಂತಾದ ಪ್ರಕೋಪಗಳು ಪುನರಾವರ್ತಿಸುತ್ತಿರುವ ಹಿನ್ನೆಲೆಯಲ್ಲಿ ತುರ್ತು ರಕ್ಷಣೆಗೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗಸಂಸ್ಥೆಗಳ ಪೈಕಿ ಜನ ಜಾಗೃತಿ ವೇದಿಕೆ, ಪ್ರಗತಿಬಂಧು ಒಕ್ಕೂಟಗಳು, ಜ್ಞಾನವಿಕಾಸ ಕೇಂದ್ರಗಳು, ಸ್ವಸಹಾಯ ಸಂಘಗಳು ಜಂಟಿ ಬಾಧ್ಯತಾ ಗುಂಪುಗಳು ಸಕ್ರಿಯವಾಗಿದ್ದು ಇವರುಗಳಿಂದ ಆಯ್ದ ಸದಸ್ಯರ ತಂಡವೊಂದನ್ನು ಪ್ರತಿ ತಾಲೂಕು ಮಟ್ಟದಲ್ಲಿ ರಚಿಸಲಾಗುವುದು. ಪ್ರತಿಯೊಂದು ತಾಲೂಕಿನಲ್ಲಿಯೂ 100 ಸದಸ್ಯರನ್ನೊಳಗೊಂಡ ವಿಪತ್ತು ನಿರ್ವಹಣಾ ತಂಡವೊಂದನ್ನು ರಚಿಸಲಾಗುವುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್‌. ಎಚ್‌. ಮಂಜುನಾಥ್‌ ತಿಳಿಸಿದ್ದಾರೆ.

ಪ್ರವಾಹ ಪೀಡಿತರಿಗೆ ಧರ್ಮಸ್ಥಳ ಕ್ಷೇತ್ರ ನೀಡುವ ನೆರವಿನ ಕುರಿತು ಶನಿವಾರ ಧರ್ಮಸ್ಥಳ ಬೀಡಿನಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.

ರಾಜ್ಯಾದ್ಯಂತ ಸುಮಾರು 2 ಲಕ್ಷ ಸದಸ್ಯರನ್ನೊಳಗೊಂಡ ‘ವಿಪತ್ತು ನಿರ್ವಹಣಾ ವೇದಿಕೆ’ಯನ್ನು ಸ್ಥಾಪಿಸಲಾಗುವುದು. ಇವರಿಗೆ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯಿಂದ ತರಬೇತಿ ನೀಡಿ, ಅಗತ್ಯವಿರುವ ಉಪಕರಣಗಳನ್ನು ದಾಸ್ತಾನು ಇರಿಸಲಾಗುವುದು. ಮುಂದಿನ ದಿನಗಳಲ್ಲಿ ಯಾವುದೇ ತಾಲೂಕಿನಲ್ಲಿ ಯಾವುದೇ ಪ್ರಾಕೃತಿಕ ವಿಕೋಪ ಉಂಟಾದಲ್ಲಿ ಕೂಡಲೇ ಸ್ಪಂದಿಸುವಂತೆ ಈ ವೇದಿಕೆಯು ಕಾರ್ಯನಿರ್ವಹಿಸಲಿದೆ ಎಂದು ಮಂಜುನಾಥ್‌ ಮಾಹಿತಿ ನೀಡಿದರು.

ನೆರೆ ಸಂತ್ರಸ್ತರಿಗೆ ಇದುವರೆಗೆ ಸುಮಾರು 19,000 ಬೆಡ್‌ಶೀಟ್‌ಗಳನ್ನು ಹಂಚಲಾಗಿದೆ. ಮುಳುಗಡೆಯಾದ ಮನೆಗಳನ್ನು ಸ್ವಚ್ಛಗೊಳಿಸಲು ಸುಮಾರು 2 ಟನ್‌ನಷ್ಟು ಬ್ಲೀಚಿಂಗ್‌ ಪೌಡರ್‌ಗಳನ್ನು ಒದಗಿಸಿಕೊಡಲಾಗಿದೆ. ನೆರೆ ಇಳಿದ ನಂತರ ಮನೆಗೆ ತೆರಳುತ್ತಿರುವ 4,990 ಕುಟುಂಬಗಳಿಗೆ ತಲಾ 1,000 ರು. ಮೌಲ್ಯದ ತುರ್ತು ನಿತ್ಯೋಪಯೋಗಿ ವಸ್ತುಗಳನ್ನು ಒದಗಿಸಲಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯಿಂದ ಎರಡು ಲೋಡ್‌ ಹುಲ್ಲು ತರಿಸಲಾಗುತ್ತಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರದಿಂದ ಸೋಮವಾರ ಮೂರು ಲೋಡ್‌ ಹುಲ್ಲನ್ನು ಒದಗಿಸಲಾಗುವುದು. ಇದಲ್ಲದೆ ಸಮಸ್ಯೆಗೊಳಗಾಗಿರುವ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುತ್ತಿದೆ. ಸ್ವಸಹಾಯ ಸಂಘಗಳ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಯೋಜನೆಯಕಾರ್ಯಕರ್ತರು ನೆರೆಪರಿಹಾರ ಕಾರ್ಯಕ್ರಮದಲ್ಲಿ ಈಗಾಗಲೇ ತೊಡಗಿಕೊಂಡಿದ್ದಾರೆ ಎಂದರು.

ಈ ಕುರಿತಂತೆ ಎನ್‌.ಡಿ.ಆರ್‌.ಎಫ್‌ ಮತ್ತು ಸಮಾನಮನಸ್ಕರೊಂದಿಗೆ ಸಮಾಲೋಚನೆ ನಡೆಸಿ ಸದ್ಯದಲ್ಲಿಯೇ ಇದಕ್ಕೆ ಅಂತಿಮ ಸ್ವರೂಪವನ್ನು ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ಅಗತ್ಯವಿರುವ ಹಣವನ್ನು ಕ್ಷೇತ್ರದಿಂದ ಒದಗಿಸಲಾಗುವುದು ಎಂದರು.

ಕರ್ನಾಟಕ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾಳಜಿ ರಿಲೀಫ್‌ ಫಂಡ್‌ಗೆ ಡಾ. ಹೆಗ್ಗಡೆ ಅವರು ನೀಡಿದ 50 ಲಕ್ಷ ರು. ಚೆಕ್‌ನ್ನು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಶಾಸಕ ಹರೀಶ್‌ ಪೂಂಜ ಸ್ವೀಕರಿಸಿದರು. ಹೇಮಾವತಿ ವೀ. ಹೆಗ್ಗಡೆ ಇದ್ದರು.

click me!