ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದಿಣೇಶ್ ಕಲ್ಲಹಳ್ಳಿ ಮತ್ತೊಮ್ಮೆ ಯೂ ಟರ್ನ್ ಹೊಡೆದಿದ್ದಾರೆ. ಏನಾಯ್ತು ಈ ಪ್ರಕರಣದ ಮುಂದಿನ ಹಂತ ..?
ರಾಮನಗರ (ಮಾ.09): ರಾಜ್ಯ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಸಿ.ಡಿ. ಪ್ರಕರಣದ ದೂರನ್ನು ಹಿಂಪಡೆಯಲು ನಿರ್ಧರಿಸುವುದಾಗಿ ಭಾನುವಾರವಷ್ಟೇ ಬೆಂಗಳೂರಿನಲ್ಲಿ ತಿಳಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಇದೀಗ ವಕೀಲರೊಂದಿಗೆ ಚರ್ಚೆ ನಡೆಸಿದ ಬಳಿಕವಷ್ಟೇ ಹಿಂಪಡೆಯುವುದಾಗಿ ಹೇಳಿದ್ದಾರೆ. ತಮ್ಮ ವಕೀಲರ ಮೂಲಕ ದೂರು ಹಿಂಪಡೆವ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರಿಗೆ ಪತ್ರ ಕಳುಹಿಸಿದ್ದ ದಿನೇಶ್ ಕಲ್ಲಹಳ್ಳಿ ಮತ್ತೆ ಉಲ್ಟಾಹೊಡೆದಿದ್ದು ಗೊಂದಲದ ಹೇಳಿಕೆಗಳನ್ನು ನೀಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನನಗೆ ವಕೀಲರು ಅಧಿಕೃತವಾಗಿ ಈವರೆಗೂ ಏನೂ ಹೇಳಿಲ್ಲ ಎಂದರು. ನೀವು ಕೇಸು ಹಿಂದಕ್ಕೆ ಪಡೆಯುತ್ತೀರೋ ಇಲ್ಲವೋ ಎಂಬ ಪ್ರಶ್ನೆಗೆ, ನಾನು ವಕೀಲರ ಜೊತೆ ಕಾನೂನು ಸಮಾಲೋಚನೆ ನಡೆಸಬೇಕಾಗಿದೆ. ಅವರು ನೀಡುವ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತೇನೆ. ಈವರೆಗೂ ದೂರು ಹಿಂಪಡೆಯುವ ಬಗ್ಗೆ ನನ್ನ ವಕೀಲರು ಯಾವ ಸಲಹೆಗಳನ್ನು ನೀಡಿಲ್ಲ ಎಂದರು.
ರಾಜಕೀಯದಲ್ಲಿ CD ಬಿರುಗಾಳಿ; ದಿನೇಶ್ ಕಲ್ಲಹಳ್ಳಿ ಯೂ ಟರ್ನ್ ಹೊಡೆದಿದ್ಯಾಕೆ..? .
ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿರುವುದು ಗೊತ್ತಿಲ್ಲ. ದೂರು ವಾಪಸ್ ಪಡೆಯುತ್ತಿರುವುದಾಗಿ ವಕೀಲರ ಮೂಲಕ ಪತ್ರ ಕಳುಹಿಸಿ ಕೊಟ್ಟಿದ್ದೇನೆ. ದೂರು ಹಿಂಪಡೆಯಲು ಕಾರಣ ಏನೆಂಬುದಕ್ಕೆ 5 ಪುಟಗಳ ಸ್ಪಷ್ಟನೆಯನ್ನೂ ನೀಡಿದ್ದೇನೆ. ಈಗಲೂ ನನ್ನ ದೂರಿಗೆ ಬದ್ಧನಾಗಿದ್ದೇನೆ ಎಂದು ದಿನೇಶ್ ಕಲ್ಲಹಳ್ಳಿ ಗೊಂದಲದ ಹೇಳಿಕೆ ನೀಡಿದರು.