
ನಮ್ಮ ಹಣೆಬರಹ ಬದಲಿಸಬೇಕಾದ ವ್ಯವಸ್ಥೆಯೇ ನಮ್ಮ ಬದುಕನ್ನು ಬೀದಿಗೆ ತಳ್ಳುತ್ತಿದೆಯಲ್ಲಾ, ನಾವು ಮಾಡಿದ್ದಾದರೂ ಏನು ಅಪರಾಧ ಸ್ವಾಮಿ?" ಇದು ಇಂದು ಧಾರವಾಡದ ಮಿಚಿಗಿನ್ ಕಂಪೌಂಡ್ ಹಾಗೂ ಜಯನಗರದ ರಸ್ತೆಗಳಲ್ಲಿ ಕೇಳಿಬಂದ ನೊಂದ ಉದ್ಯೋಗಾಕಾಂಕ್ಷಿಗಳ ಆಕ್ರಂದನ ಭರಿತ ನೇರ ಸವಾಲು. ತಮ್ಮ ಹಕ್ಕುಗಳಿಗಾಗಿ, ಸರ್ಕಾರಿ ಉದ್ಯೋಗದ ನ್ಯಾಯಯುತ ಕನಸುಗಳಿಗಾಗಿ ಶಾಂತಿಯುತವಾಗಿ ಸತ್ಯಾಗ್ರಹ ನಡೆಸಲು ಮುಂದಾದ ಯುವ ಸಮೂಹದ ಧ್ವನಿಯನ್ನು ಇಂದು ಮತ್ತೊಮ್ಮೆ ಖಾಕಿ ದರ್ಪದ ಮೂಲಕ ಹತ್ತಿಕ್ಕುವ ಪ್ರಯತ್ನ ನಡೆದಿದೆ ಎಂದು ತಮ್ಮ ಅಳಲನ್ನು ವಿವಿಧ ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಳ್ಳುತ್ತಿದ್ದಾರೆ.
ಸರ್ಕಾರಿ ಖಾಲಿ ಹುದ್ದೆಗಳ ಭರ್ತಿ, ಕೆಪಿಎಸ್‌ಸಿ ಅಕ್ರಮಗಳ ತನಿಖೆ ಹಾಗೂ ಬಾಧಿತ ಕಾನ್‌ಸ್ಟೆಬಲ್ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿ ಇಂದು ಧಾರವಾಡದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹಗಲಿರುಳು ಪುಸ್ತಕ ಹಿಡಿದು ಕಣ್ಣು ಸವೆಸಿದ ಯುವಕರು ತಮ್ಮ ನೋವನ್ನು ಸರ್ಕಾರದ ಗಮನಕ್ಕೆ ತರಲು ಬಯಸಿದ್ದರು. ಆದರೆ, ಕೊನೆ ಕ್ಷಣದಲ್ಲಿ 'ಸೂಕ್ಷ್ಮ ಪ್ರದೇಶ', 'ಆಸ್ಪತ್ರೆಗಳಿವೆ' ಎಂಬ ಕಾರಣ ನೀಡಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಪೊಲೀಸ್ ಇಲಾಖೆಯ ಧೋರಣೆ ವಿದ್ಯಾರ್ಥಿಗಳ ಆಸೆಗೆ ತಣ್ಣೀರೆರಚಿದೆ. ನಮ್ಮ ನೋವನ್ನು ಹೇಳಿಕೊಳ್ಳಲು ನಮಗೆ ಜಾಗವೂ ಇಲ್ಲವೇ? ನಾವು ಕಳ್ಳರೇ, ದರೋಡೆಕೋರರೇ? ಎಂದು ಉದ್ಯೋಗಾಕಾಂಕ್ಷಿಗಳು ಸಮಾಜವನ್ನು ಪ್ರಶ್ನಿಸುತ್ತಿದ್ದಾರೆ.
ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿ, ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದ ಅಕ್ಸಾ (AKSSA) ಸಂಘಟನೆಯ ಅಧ್ಯಕ್ಷ ಕಾಂತಕುಮಾರ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಯಕನನ್ನು ಅರೆಸ್ಟ್ ಮಾಡಿ, ಪ್ರತಿಭಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸುವ ಮೂಲಕ ಯುವಕರ ಧ್ವನಿಯನ್ನು ಅಡಗಿಸಲು ಯತ್ನಿಸಲಾಗಿದೆ. ಈ ಖಾಕಿ ನಡೆ ಉದ್ಯೋಗಾಕಾಂಕ್ಷಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ತಮಗಾಗಿ ಧ್ವನಿ ಎತ್ತುವವರನ್ನು ಜೈಲಿಗಟ್ಟಿದರೆ, ತಮ್ಮ ಅಸಹಾಯಕತೆಯನ್ನು ಕೇಳುವವರಾರು ಎಂಬ ಆತಂಕ ಜಯನಗರದ ಸುತ್ತಮುತ್ತಲಿನ ವಿದ್ಯಾರ್ಥಿಗಳಲ್ಲಿ ಮನೆಮಾಡಿದೆ.
ಹಳ್ಳಿಯಲ್ಲಿ ಹೊಟ್ಟೆ ಕಟ್ಟಿ, ಸಾಲ ಮಾಡಿ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಓದಲು ಧಾರವಾಡಕ್ಕೆ ಕಳುಹಿಸಿದ್ದಾರೆ. "ಮಗ ಸಾಹೇಬನಾಗಿ ಮನೆಗೆ ಬರುತ್ತಾನೆ, ಕಷ್ಟ ತೀರಿಸುತ್ತಾನೆ" ಎಂದು ಹೆತ್ತವರು ದಿನ ಎಣಿಸುತ್ತಿದ್ದಾರೆ. ಆದರೆ ಇಲ್ಲಿ ವಯಸ್ಸು ಮೀರುತ್ತಿದ್ದರೂ ಪರೀಕ್ಷೆಗಳಿಲ್ಲ, ಉದ್ಯೋಗಗಳಿಲ್ಲ. ಕೊನೆಗೆ ನ್ಯಾಯ ಕೇಳಲು ಬೀದಿಗಿಳಿದರೆ ಸಿಗುತ್ತಿರುವುದು ಸಾಂತ್ವನವಲ್ಲ, ಬದಲಿಗೆ ಖಾಕಿ ದರ್ಪದ ಬೂಟುಗಾಲುಗಳು ಮತ್ತು ಬಂಧನದ ಭೀತಿ.
ಇಂದು ಧಾರವಾಡದ ಬೀದಿಗಳಲ್ಲಿ ನೊಂದ ವಿದ್ಯಾರ್ಥಿಗಳು ವ್ಯವಸ್ಥೆಗೆ ನೇರ ಸವಾಲು ಹಾಕುತ್ತಿದ್ದಾರೆ, ಅದೇನೆಂದರೆ ನಾವೇನು ಉಚಿತ ಭಾಗ್ಯಗಳನ್ನು ಕೇಳುತ್ತಿಲ್ಲ, ನಮ್ಮ ಅರ್ಹತೆಗೆ ತಕ್ಕ ಉದ್ಯೋಗ ಕೇಳುತ್ತಿರುವುದು ಅಪರಾಧವೇ? ನಿಯಮಗಳ ಹೆಸರಿನಲ್ಲಿ ಪ್ರತಿಭಟನೆಯ ಹಕ್ಕನ್ನೇ ಕಸಿದುಕೊಳ್ಳುವ ನೀವು, ನಮ್ಮ ಭವಿಷ್ಯ ಹಾಳಾಗುತ್ತಿರುವಾಗ ಎಲ್ಲಿ ಹೋಗಿದ್ದಿರಿ? ಖಾಕಿ ದರ್ಪದಿಂದ ನಮ್ಮ ಶರೀರಕ್ಕೆ ನೋವು ನೀಡಬಹುದು, ಆದರೆ ನಮ್ಮ ಉದ್ಯೋಗದ ಹಸಿವನ್ನು ನೀಗಿಸಲು ನಿಮ್ಮಿಂದ ಸಾಧ್ಯವೇ? ಧಾರವಾಡದ ಮಿಚಿಗಿನ್ ಕಂಪೌಂಡ್ ಬಳಿ ಇಂದು ನಿರ್ಮಾಣವಾಗಿರುವ ಬಿಗುವಿನ ವಾತಾವರಣ ಕೇವಲ ಒಂದು ಪ್ರತಿಭಟನೆಯ ಹತ್ತಿಕ್ಕುವಿಕೆಯಲ್ಲ, ಇದು ಇಡೀ ರಾಜ್ಯದ ನಿರುದ್ಯೋಗಿ ಯುವಕರ ಸ್ವಾಭಿಮಾನಕ್ಕೆ ಬಿದ್ದ ಪೆಟ್ಟು. ಈ ಕಣ್ಣೀರು, ಈ ಆಕ್ರೋಶ ವ್ಯವಸ್ಥೆಯನ್ನು ಸುಟ್ಟು ಬೂದಿ ಮಾಡುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ನ್ಯಾಯ ನೀಡಬೇಕಿದೆ ಎಂದು ವಿದ್ಯಾರ್ಥಿಗಳು ಸಾಲು-ಸಾಲು ಪ್ರಶ್ನೆಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.