
ಸ್ಟಾರ್ಟಪ್ ಒಂದರ ಸಂಸ್ಥಾಪಕರು ಬೇರೆ ಬೇರೆ ನಗರಗಳ ಎಳನೀರು ಬೆಲೆ ಬಗ್ಗೆ X (ಹಿಂದಿನ ಟ್ವಿಟರ್) ನಲ್ಲಿ ಹಾಕಿದ ಪೋಸ್ಟ್ ಒಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಪೋಸ್ಟ್, ಬೆಂಗಳೂರಿನ ದುಬಾರಿ ಜೀವನ ವೆಚ್ಚದ ಬಗ್ಗೆ ಹೊಸ ಚರ್ಚೆಯನ್ನೇ ಶುರು ಮಾಡಿದೆ. ಪರಿತೋಷ್ ಶರ್ಮಾ ಅನ್ನೋ ಈ ಉದ್ಯಮಿ, ದೆಹಲಿ-NCR ಮತ್ತು ಪುಣೆಯಂತಹ ಉತ್ತರ ಹಾಗೂ ಪಶ್ಚಿಮದ ನಗರಗಳಲ್ಲಿ ಎಳನೀರು ಅಗ್ಗವಾಗಿ ಸಿಗುತ್ತೆ ಅಂತ ಹೇಳಿದ್ದಾರೆ. ಆದರೆ, ತೆಂಗು ಬೆಳೆಯೋ ಕರಾವಳಿ ಪ್ರದೇಶಕ್ಕೆ ಹತ್ತಿರ ಇರೋ ಬೆಂಗಳೂರಿನಲ್ಲಿ ಯಾಕೆ ಇಷ್ಟೊಂದು ದುಬಾರಿ ಅಂತ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಜನ ಬಾಡಿಗೆ, ಊಟ, ಓಡಾಟ ಅಂತ ಎಲ್ಲದಕ್ಕೂ ಹೆಚ್ಚು ಹಣ ಕೊಡಲೇಬೇಕಾದ ಸ್ಥಿತಿ ಇದೆ ಅಂತಾನೂ ಅವರು ಹೇಳಿದ್ದಾರೆ. "ದೆಹಲಿ-NCR ನಲ್ಲಿ ಎಳನೀರಿಗೆ ಸುಮಾರು 60 ರೂಪಾಯಿ. ಪುಣೆಯಲ್ಲಿ 50 ರಿಂದ 70 ರೂಪಾಯಿ ಇತ್ತು. ಆದರೆ, ತೆಂಗು ಬೆಳೆಯೋ ಪ್ರದೇಶಕ್ಕೆ ಹತ್ತಿರ ಇರೋ ಬೆಂಗಳೂರಿಗೆ ಬಂದಾಗ, ಅದೇ ಎಳನೀರಿಗೆ 100 ರಿಂದ 120 ರೂಪಾಯಿ ಕೊಡಬೇಕಾಯ್ತು," ಅಂತ ಪರಿತೋಷ್ ಶರ್ಮಾ X ನಲ್ಲಿ ಬರೆದುಕೊಂಡಿದ್ದಾರೆ.
In Delhi and NCR coconut water is priced around ₹60.
Went to Pune, got it for around ₹50-70.
Went to Bangalore, and the same coconut cost me around ₹100-120, despite Bangalore being closer to the coast and closer to the source of coconuts.
I feel people in Bangalore are…— Paritsh Sharrma (🗣️Paritosh) (@Paritolkks) August 16, 2026
ಶರ್ಮಾ ಅವರ ಪೋಸ್ಟ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಜೋರಾಗಿದೆ. ಒಬ್ಬ ಬಳಕೆದಾರರು, 'ತೆಂಗಿನಕಾಯಿ ಹೆಚ್ಚಾಗಿ ಸಿಗುವ ಪೊಲ್ಲಾಚಿಗೆ ಹತ್ತಿರದ ಕೊಯಮತ್ತೂರಿನಲ್ಲೇ 60 ರೂಪಾಯಿ ಕೊಡಬೇಕು' ಅಂತ ಕಾಮೆಂಟ್ ಮಾಡಿದ್ದಾರೆ. ಬೆಂಗಳೂರಿನಿಂದ ಪಾಂಡಿಚೇರಿಗೆ ಪ್ರಯಾಣಿಸಿದ ಅನುಭವ ಹಂಚಿಕೊಂಡ ಇನ್ನೊಬ್ಬರು, 'ಬೆಂಗಳೂರಿನಲ್ಲಿ ಎಳನೀರಿಗೆ 100-120 ರೂ. ಇತ್ತು. ಆದರೆ ದಾರಿ ಮಧ್ಯೆ ಬರೀ 10 ರೂಪಾಯಿಗೆ ಸಿಕ್ತು. ಪಾಂಡಿಚೇರಿ ತಲುಪಿದಾಗ 80 ರೂಪಾಯಿ ಆಯ್ತು' ಅಂತ ಹೇಳಿದ್ದಾರೆ.
ಆದರೆ, ಎಲ್ಲರೂ ಈ ವಾದವನ್ನು ಒಪ್ಪಿಲ್ಲ. ದೆಹಲಿ-NCR ನಲ್ಲಿ ಶರ್ಮಾ ಹೇಳಿದ್ದಕ್ಕಿಂತ ಹೆಚ್ಚು ಬೆಲೆ ಇದೆ ಅಂತ ಕೆಲವರು ವಾದಿಸಿದ್ದಾರೆ. 'ಸೌತ್ ದೆಹಲಿಯಲ್ಲಿ ಅಸಲಿ ಬೆಲೆ 80 ರೂಪಾಯಿ' ಅಂತ ಒಬ್ಬರು ಬರೆದಿದ್ದಾರೆ. ಒಟ್ಟಿನಲ್ಲಿ, ಈ ಒಂದು ಸೋಶಿಯಲ್ ಮೀಡಿಯಾ ಪೋಸ್ಟ್, ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿನ ಜೀವನ ವೆಚ್ಚ ಮತ್ತು ಬೆಲೆ ಏರಿಕೆಯ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ವಿಶ್ವದಲ್ಲಿ ಅತಿಹೆಚ್ಚು ಎಳನೀರು ಪೂರೈಕೆ ಮಾಡುವಂತಹ ಮಾರುಕಟ್ಟೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿದೆ. ಮದ್ದೂರಿನಿಂದ ದೇಶದ ಪ್ರಸಿದ್ಧ ನಗರಗಳಾದ ಮುಂಬೈ, ದೆಹಲಿ, ಪುಣೆ, ಹೈದರಾಬಾದ್ ಸೇರಿದಂತೆ ಹಲವು ನಗರಗಳಿಗೆ ಗುಣಮಟ್ಟದ ಎಳನೀರು ಪೂರೈಕೆ ಮಾಡಲಾಗುತ್ತದೆ. ಜೊತೆಗೆ, ದುಬೈ, ಅಮೇರಿಕಾ ಸೇರಿದಂತೆ ಹಲವು ದೇಶಗಳಿಗೆ ಮದ್ದೂರು ಎಳನೀರು ಎಕ್ಸ್‌ಪೋರ್ಟ್ ಆಗುತ್ತದೆ. ಆದರೆ, ಮದ್ದೂರು ಪಕ್ಕದಲ್ಲಿರುವ ಬೆಂಗಳೂರಿನಲ್ಲಿಯೇ ಎಳನೀರು ಬೆಲೆ 120 ರೂ. ಆಗಿದೆ.