ಧಾರವಾಡಕ್ಕಿದೆ ಪ್ರತ್ಯೇಕ ಪಾಲಿಕೆಯ ಮಾನದಂಡ; ಎಚ್‌.ಕೆ. ಪಾಟೀಲ ಕೇಳಿದ ಪ್ರಶ್ನೆಗೆ ಮಾಹಿತಿ ನೀಡಿದ ಸರ್ಕಾರ

By Kannadaprabha News  |  First Published Oct 30, 2022, 9:11 AM IST
  • ಧಾರವಾಡಕ್ಕಿದೆ ಪ್ರತ್ಯೇಕ ಪಾಲಿಕೆಯ ‘ಮಾನದಂಡ’
  • ಸದನದಲ್ಲಿ ಎಚ್‌.ಕೆ. ಪಾಟೀಲ ಕೇಳಿದ ಪ್ರಶ್ನೆಗೆ ಮಾಹಿತಿ ನೀಡಿದ ಸರ್ಕಾರ
  • ಇನ್ನಾದರೂ ಈ ಬಗ್ಗೆ ಆಸಕ್ತಿ ತೋರದೇ ಇದ್ದಲ್ಲಿ ಹೈಕೋರ್ಟ್ ಮಾದರಿಯಲ್ಲಿ ಹೋರಾಟ

ಧಾರವಾಡ (ಅ.30) : ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ವಿಷಯವಾಗಿ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿ ದೊರಕಿದ್ದು, ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು ಪ್ರತ್ಯೇಕ ಮಹಾನಗರ ಪಾಲಿಕೆಗೆ ಆಸಕ್ತಿ ತೋರದೇ ಇದ್ದಲ್ಲಿ ಹೈಕೋರ್ಚ್‌ ಮಾದರಿಯಲ್ಲಿ ಹೋರಾಟ ಮಾಡಲಾಗುವುದು ಎಂದು ಹೋರಾಟ ವೇದಿಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆದಿಯಾಗಿ ಧಾರವಾಡ ಶಾಸಕರಿಗೆ ಎಚ್ಚರಿಸಿದೆ.

ವಾರ್ಡ್‌ ಸಮಿತಿ ರಚನೆ ನನೆಗುದಿಗೆ; ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ

Latest Videos

undefined

ಧಾರವಾಡ ಪ್ರತ್ಯೇಕ ಪಾಲಿಕೆಗೆ ಇರುವ ಮಾನದಂಡಗಳ ವಿಷಯವಾಗಿ ಮಾಜಿ ಸಚಿವರಾದ ಎಚ್‌.ಕೆ. ಪಾಟೀಲ ಅವರು ಕೇಳಿದ ಪ್ರಶ್ನೆಗೆ ಸರ್ಕಾರದ ಪರವಾಗಿ ನಗರಾಭಿವೃದ್ಧಿ ಸಚಿವರು ಉತ್ತರ ನೀಡಿದ್ದಾರೆ. ಆರ್‌ಟಿಐ ಮೂಲಕ ಈ ಮಾಹಿತಿ ವೇದಿಕೆಗೆ ದೊರಕಿದೆ. ಮೂರು ಲಕ್ಷಕ್ಕಿಂತ ಕಡಿಮೆ ಇಲ್ಲದ ಜನಸಂಖ್ಯೆ ಇರಬೇಕು. ಜನಸಾಂದ್ರತೆಯು ಒಂದು ಚದರ ಕಿಲೋಮೀಟರ್‌ ವಿಸ್ತ್ರೀರ್ಣದಲ್ಲಿ 3 ಸಾವಿರಕ್ಕಿಂತ ಕಡಿಮೆ ಇಲ್ಲದ ನಿವಾಸಿಗಳು ಇರಬೇಕು. ಆದಾಯ ಉತ್ಪಾದನೆಯು ವಾರ್ಷಿಕ .6 ಕೋಟಿಗಳಿಗಿಂತ ಹೆಚ್ಚಿರಬೇಕು ಎಂಬೆಲ್ಲ ಮಾನದಂಡಗಳಿವೆ. ಜನಸಂಖ್ಯೆ, ತೆರಿಗೆ ಆದಾಯ ಸೇರಿದಂತೆ ಧಾರವಾಡ ಎಲ್ಲ ರೀತಿಯ ಮಾನದಂಡಗಳಲ್ಲೂ ಪೂರೈಸುತ್ತದೆ. ಇಷ್ಟುದಿನಗಳ ಕಾಲ ಸ್ಥಳೀಯ ಜನಪ್ರತಿನಿಧಿಗಳು ಮಾನದಂಡದ ಬಗ್ಗೆ ಮಾತನಾಡುತ್ತಿದ್ದು, ಈಗ ಸರ್ಕಾರವೇ ಅದನ್ನು ಸ್ಪಷ್ಟಪಡಿಸಿದೆ. ಆದ್ದರಿಂದ ಇನ್ನಾದರೂ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಗೆ ಆಸಕ್ತಿ ತೋರಬೇಕೆಂದು ವೇದಿಕೆಯ ಸದಸ್ಯರಾದ ರವಿ ಮಾಳಗೇರ, ಎಂ.ಬಿ. ಕಟ್ಟಿ, ಶಂಕರ ನೀರಾವರಿ, ವಸಂತ ಅರ್ಕಾಚಾರ, ವೀರಣ್ಣ ಕಮ್ಮಾರ, ಜಿ.ಎಸ್‌. ಬ್ಯಾಡಗಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಈ ಮಾನದಂಡಗಳೊಂದಿಗೆ ಸ್ಥಳೀಯ ಸಾರ್ವಜನಿಕರ ಹಾಗೂ ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯ ಪಡೆದು ಆಡಳಿತ ಮತ್ತು ಅಭಿವೃದ್ಧಿ ಹಿತದೃಷ್ಟಿಯಿಂದ ಸಾಧಕ-ಬಾಧಕಗಳನ್ನು ಕುಲಂಕಷವಾಗಿ ಪರಿಶೀಲಿಸಲಾಗುವುದು ಎಂದೂ ನಗರಾಭಿವೃದ್ಧಿ ಸಚಿವರು ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ. ಈಗ ಮಾನದಂಡ ಪೂರೈಸಿದ್ದು ಸಾರ್ವಜನಿಕರ ಒತ್ತಾಸೆಯೂ ಇದಾಗಿದೆ. ಆದರೆ, ಜನಪ್ರತಿನಿಧಿಗಳ ಅದರಲ್ಲೂ ಪ್ರಮುಖವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಅಮೃತ ದೇಸಾಯಿ ಪಾತ್ರ ಜಾಸ್ತಿ ಇದೆ. ಜೊತೆಗೆ ಮೇಯರ್‌ ಈರೇಶ ಅಂಚಟಗೇರಿ ಅವರು ಮಹಾನಗರ ಪಾಲಿಕೆಯ ಸದಸ್ಯರೊಂದಿಗೆ ಚರ್ಚಿಸಿ ಠರಾವು ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಇದು ಪ್ರಕ್ರಿಯೆ. ಆದರೆ, ಸ್ಥಳೀಯ ಜನಪ್ರತಿನಿಧಿಗಳು ಈ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ತಮ್ಮದೇ ರಾಜಕೀಯದಲ್ಲಿ ತೊಡಗಿದ್ದಾರೆ. ಸಾರ್ವಜನಿಕರ ಆಶೋತ್ತರಗಳಿಗೆ ಬೆಲೆ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇನ್ಮುಂದೆ ನಡೆಯುವ ಪ್ರತಿ ಸಭೆ-ಸಮಾವೇಶದಲ್ಲಿ ಅವರನ್ನು ಪ್ರಶ್ನಿಸಲಾಗುವುದು. ಜೊತೆಗೆ ಹೈಕೋರ್ಚ್‌ ಮಾದರಿಯಲ್ಲಿ ಹೋರಾಟ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಭಾರತ್ ಜೋಡೋ ಯಾತ್ರೆಯನ್ನ ಭಾರತದ ಒಳಗಡೆ ಮಾಡುವ ಅವಶ್ಯಕತೆಯಿಲ್ಲ: ಶೋಭಾ ಕರಂದ್ಲಾಜೆ

ಮಾಜಿ ಸಿಎಂ ಯಡಿಯೂರಪ್ಪನವರ ಇಚ್ಛಾಶಕ್ತಿ ಫಲವಾಗಿ ಒಂದೇ ರಾತ್ರಿಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಾಗಿ ಇಡೀ ಊರೇ ಅಭಿವೃದ್ಧಿಯಾಯಿತು. ಅದೇ ರೀತಿ ನಮ್ಮ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕಿದೆ. ಇಲ್ಲದೇ ಹೋದಲ್ಲಿ ಅವರು ಭಾಗವಹಿಸುವ ಕಾರ‍್ಯಕ್ರಮಗಳಲ್ಲಿ ಕಪ್ಪು ಬಟ್ಟೆತೋರಿಸಿ ಪ್ರತಿಭಟಿಸುವ ಚಿಂತನೆಯೂ ಇದೆ ಎಂದು ಎಚ್ಚರಿಸಿದರು.

click me!