ಅತ್ಯಾಧುನಿಕ ಸೌಕರ್ಯಗಳುಳ್ಳ ಈ ಪ್ರತಿಷ್ಠಿತ ರೈಲು ಪ್ರವಾಸದ ಅವಧಿಯನ್ನು ಗಣನೀಯವಾಗಿ ಕಡಿಮೆಗೊಳಿಸಲಿದೆ. ವಂದೇ ಭಾರತ್ ರೈಲು ಯೋಜನೆ ಪ್ರಧಾನಿ ಮೋದಿ ಅವರ ದೂರದೃಷ್ಟಿ ಮತ್ತು ಅಭಿವೃದ್ಧಿಶೀಲ ಮನೋಭಾವದ ಪ್ರತೀಕ ಎಂದ ಸಚಿವ ಅಶ್ವಿನಿ ವೈಷ್ಣವ್
ಧಾರವಾಡ(ಅ.12): ಧಾರವಾಡ-ಬೆಂಗಳೂರು ಮಧ್ಯೆ ಪ್ರತಿಷ್ಠಿತ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲು ಶೀಘ್ರ ಸಂಚಾರ ಆರಂಭಿಸಲಿದೆ ಎಂದು ಕೇಂದ್ರ ರೈಲ್ವೆ, ವಿದ್ಯುನ್ಮಾನ ಮತ್ತು ಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು. ಮಂಗಳವಾರ ನವೀಕೃತ ಧಾರವಾಡ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಿ ಮಾತನಾಡಿ ವಂದೇ ಭಾರತ್ ರೈಲು ಸಂಚಾರಕ್ಕೆ ಮಾರ್ಗದ ವಿದ್ಯುದೀಕರಣ ಅವಶ್ಯವಾಗಿದ್ದು, ಈ ಕಾರ್ಯ ಪ್ರಗತಿಯಲ್ಲಿದೆ. 2023ರ ಫೆಬ್ರವರಿ-ಮಾರ್ಚ್‌ನಲ್ಲಿ ಈ ಕಾರ್ಯ ಮುಗಿಯಲಿದ್ದು, ನಂತರ ರೈಲು ಸಂಚಾರ ಆರಂಭವಾಗಲಿದೆ ಎಂದರು. ಈಗಾಗಲೇ ಈ ರೈಲಿಗೆ ಅನುಮತಿ ನೀಡಲಾಗಿದ್ದು, ಧಾರವಾಡ ಪೇಢೆ ಪ್ರಧಾನಿ ಮೋದಿ ಅವರಿಗೆ ನೀಡಿ ಅವರ ಒಪ್ಪಿಗೆಯನ್ನೂ ಪಡೆಯುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಅತ್ಯಾಧುನಿಕ ಸೌಕರ್ಯಗಳುಳ್ಳ ಈ ಪ್ರತಿಷ್ಠಿತ ರೈಲು ಪ್ರವಾಸದ ಅವಧಿಯನ್ನು ಗಣನೀಯವಾಗಿ ಕಡಿಮೆಗೊಳಿಸಲಿದೆ. ವಂದೇ ಭಾರತ್ ರೈಲು ಯೋಜನೆ ಪ್ರಧಾನಿ ಮೋದಿ ಅವರ ದೂರದೃಷ್ಟಿ ಮತ್ತು ಅಭಿವೃದ್ಧಿಶೀಲ ಮನೋಭಾವದ ಪ್ರತೀಕ ಎಂದ ಅವರು, ಎರಡು ರೈಲುಗಳಿಂದ ಆರಂಭವಾದ ಈ ಯೋಜನೆ ಈಗ 75 ರೈಲುಗಳಿಗೆ ತಲುಪಿದೆ. 2019ರಲ್ಲಿ ಯೋಜನೆ ಆರಂಭವಾದಾಗ ಸಂಚಾರ ಪ್ರಾರಂಭಿಸಿದ 2 ರೈಲುಗಳು ಈಗಾಗಲೇ 18 ಲಕ್ಷ ಕಿ.ಮೀ. ಅಂತರ ಕ್ರಮಿಸಿವೆ ಎಂದರು.
ರೈಲ್ವೆಗೆ ಯುಪಿಎಗಿಂತ ಎನ್‌ಡಿಎ 3 ಪಟ್ಟು ಹೆಚ್ಚು ಅನುದಾನ
ವಂದೇ ಭಾರತ್ ರೈಲು ಶೂನ್ಯದಿಂದ 100 ಕಿ.ಮೀ. ವೇಗ ತಲುಪಲು ಕೇವಲ 52 ಸೆಕೆಂಡು ಸಾಕು. ಈ ರೈಲಿನಲ್ಲಿ ಪ್ರಯಾಣಿಸುವವರಿಗೆ ರೈಲಿನ ಸದ್ದು ಕೂಡಾ ತೀರಾ ಸಣ್ಣದಾಗಿಯಷ್ಟೇ ಕೇಳುತ್ತದೆ. ಸಂಚಾರ ಕೂಡಾ ಅತ್ಯಂತ ಸುಖಮಯವಾಗಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದರು. ಅತ್ಯಂತ ಸಂಕೀರ್ಣವಾದ ರೈಲು ಸಾರಿಗೆ ವಲಯದಲ್ಲಿ ಅಭಿವೃದ್ಧಿ ಮತ್ತು ಯಶಸ್ಸು ಕಾಣಲು ಮೋದಿ ಅವರೇ ಕಾರಣ. ಪ್ರಧಾನಿ ದೇಶದ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸಿದ್ದಾರೆ ಎಂದರು ಸಚಿವ ಅಶ್ವಿನಿ ವೈಷ್ಣವ್.
ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ: ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯ ಎಲ್ಲ ಗೊಂದಲಗಳನ್ನು ಪರಿಹರಿಸಿ ಅನುಷ್ಠಾನಗೊಳಿಸುವ ಪ್ರಯತ್ನವೂ ಸಾಗಿದೆ. ಯೋಜನೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದು, ಅವರ ಕಳಕಳಿ ಅರಿತುಕೊಂಡು ಪರಿಸರಕ್ಕೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಯೋಜನೆ ಪರಿಷ್ಕರಿಸಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಜನತೆಯ ಬೆಂಬಲವೂ ಬೇಕು ಎಂದು ಸಚಿವರು ಹೇಳಿದರು.
Hubballi: ಮಂಗಳವಾರ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್
ಧಾರವಾಡ ಪೇಢೆ ಶಕ್ತಿಶಾಲಿ: ಸಚಿವ
ಧಾರವಾಡ ಪೇಢೆ ಅತ್ಯಂತ ಪ್ರಸಿದ್ಧ ಮತ್ತು ಶಕ್ತಿಶಾಲಿ. ಪೇಢೆ ನೀಡಿ ತಮ್ಮ ಕ್ಷೇತ್ರಕ್ಕೆ ಯೋಜನೆಗಳಿಗೆ ಅನುಮೋದನೆ ಪಡೆಯುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿಸ್ಸೀಮರಾಗಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹೇಳಿದರು. ಧಾರವಾಡ ಸುಪ್ರಿಸಿದ್ಧ ಸಾಹಿತಿ, ಕಲಾವಿದರು, ಸಂಗೀತಗಾರರಿಗೆ ಹೇಗೆ ಪ್ರಸಿದ್ಧವೋ ರುಚಿಕರವಾದ ಪೇಢೆಗೂ ಅಷ್ಟೇ ಖ್ಯಾತಿ. ಪ್ರಹ್ಲಾದ್ ಜೋಶಿ ತಮ್ಮ ಕಚೇರಿಯಲ್ಲಿ ಬಂದವರಿಗೆಲ್ಲ ಪೇಢೆ ತಿನ್ನಿಸುತ್ತಾರೆ. ಪೇಢೆ ನೀಡಿ ತಮ್ಮ ಕ್ಷೇತ್ರದ ಕೆಲಸ ಮಾಡಿಸಿಕೊಳ್ಳುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಸವಾಯಿ ಗಂಧರ್ವರ ಹೆಸರಿಡಲು ಕ್ರಮ: ವೈಷ್ಣವ್
ಧಾರವಾಡ: ಹುಬ್ಬಳ್ಳಿ-ನಿಜಾಮುದ್ದೀನ್ ರೈಲನ್ನು‘ಪಂಡಿತ ಸವಾಯಿ ಗಂಧರ್ವ’ರೈಲು ಎಂದು ಮರುನಾಮಕರಣಗೊಳಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನವಿ ಮೇರೆಗೆ ಕ್ರಮ ಕೈಗೊಳ್ಳಲಾಗುವುದೆಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು. ಇದೇ ವೇಳೆ, ವಾರಾಣಸಿಗೆ ವಾರಕ್ಕೆರಡು ದಿನ ರೈಲು ಸಂಚಾರ ನಿಗದಿಗೊಳಿಸುವ ಬಗ್ಗೆ ವಾರಾಣಸಿಯಲ್ಲಿ ರೈಲ್ವೆ ಸಂಚಾರದ ಸಮಯ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದರು.