
ಧಾರವಾಡ: ಸಮೀಪದ ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜ್‌ನಲ್ಲಿ ಎರಡು ದಿನಗಳ ಕಾಲ ನೇಚರ್ ರಿಸರ್ಚ್ ಸೆಂಟರ್ ಆಯೋಜಿಸಿದ್ದ ಕ್ಷೇತ್ರ ಕಾರ್ಯಾಗಾರದಲ್ಲಿ ಪರಿಸರಾಸಕ್ತರು, ಸಂಶೋಧಕರು, ವಿದ್ಯಾರ್ಥಿಗಳು ಸೇರಿದಂತೆ 35ಕ್ಕೂ ಹೆಚ್ಚು ಜನರು ಸ್ಥಳೀಯ ಜೀವವೈವಿಧ್ಯ ದಾಖಲಾತಿ ಮಹತ್ವ, ರೀತಿ-ನೀತಿಗಳನ್ನು ಅರಿತುಕೊಂಡರು.
ಈ ಸಮಯದಲ್ಲಿ 35ಕ್ಕೂ ಹೆಚ್ಚು ಕೀಟ ಪ್ರಭೇದಗಳು ಹಾಗೂ 28ಕ್ಕೂ ಅಧಿಕ ಜೇಡ ಪ್ರಭೇದಗಳನ್ನು ಪುಣೆಯ ಎಂಟಮಾನ್ ಇನ್‌ಸ್ಟಿಟ್ಯೂಟ್ ನಿರ್ದೇಶಕರು ಹಾಗೂ ಕೀಟತಜ್ಞ ಈಶಾನ ಪಹಾಡೆ ಹಾಗೂ ಜೇಡಗಳ ತಜ್ಞ ಅಥರ್ವ ಕುಲಕರ್ಣಿ ಗುರುತಿಸಿ ದಾಖಲಿಸುವಲ್ಲಿ ಯಶಸ್ವಿಯಾದರು.
ಕೀಟಗಳು ಮತ್ತು ಜೇಡಗಳ ಬಗ್ಗೆ ಸಮುದಾಯಗಳ ಸಹಭಾಗಿತ್ವದಲ್ಲಿ ಸಮೀಕ್ಷೆ, ಅಧ್ಯಯನ ಮತ್ತು ದಾಖಲೆ, ಜೀವ ವೈವಿಧ್ಯ ಮಂಡಳಿಗೆ, ಜನ ವಿಜ್ಞಾನಕ್ಕೆ ಅಪರೂಪದ ಆಕರವಾಗಿವೆ. ಐ-ನ್ಯಾಚುರಾಲಿಸ್ಟ್ ಆಪ್‌ನಲ್ಲಿ ಸಮಗ್ರ ಮಾಹಿತಿ ಕ್ರೊಡೀಕರಿಸಿ ಸದ್ಯದಲ್ಲೇ ದಾಖಲಿಸಲಾಗುವುದು ಎಂದು ಈಶಾನ್ ಹೇಳಿದರು.
ಹಿರಿಯ ಪರಿಸರವಾದಿ ಪಂಚಾಕ್ಷರಿ ಹಿರೇಮಠ ನೇತೃತ್ವದಲ್ಲಿ ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜ್‌ನಲ್ಲಿ ಅಪರೂಪದ ಚಿಟ್ಟೆ, ಹ್ಯಾತೆ, ಜೇಡ, ಜೇನು ಮತ್ತು ಕೀಟ ಪ್ರಪಂಚದ ಉದ್ಯಾನ ರೂಪಿಸಲು ಇದೇ ಸಂದರ್ಭದಲ್ಲಿ ಎಂಟಮಾನ್ ಇನ್‌ಸ್ಟಿಟ್ಯೂಟ್ ಒಡಂಬಡಿಕೆಗೆ ಸಹಿ ಹಾಕಿತು.
ಡಾ. ಧೀರಜ್ ವೀರನಗೌಡರ, ಕೃಷ್ಣಕುಮಾರ ಭಾಗವತ, ಆರ್.ಜಿ. ತಿಮ್ಮಾಪೂರ ಸೇರಿದಂತೆ ಕಲಕೇರಿ ಸಂಗೀತ ವಿದ್ಯಾಲಯ ಹಾಗೂ ಬಾಲಬಳಗ ಶಾಲೆಯ, ವಿಜ್ಞಾನ ಶಿಕ್ಷಕರು, ವಿದ್ಯಾರ್ಥಿಗಳು, ಪಾಲ್ಗೊಂಡಿದ್ದರು. ಸಂಚಾಲಕ ಹರ್ಷವರ್ಧನ ಶೀಲವಂತ ಸಂಯೋಜಿಸಿದರು.
ಇದನ್ನೂ ಓದಿ: Greater Coucal: ಹಿಚ್ಕಡದಲ್ಲಿ ಅಪರೂಪದ ಅತಿಥಿ; ಹಸಿರು ಪರಿಸರಕ್ಕೆ ಮನಸೋತ ಕೃಷ್ಣ ಪಕ್ಷಿ