
ಮಂಗಳೂರು (ಆ.13): ಸೌಜನ್ಯ ಮಾವ ಪುರಂದರ ಗೌಡ ಅವರು ಅನಾಮಿಕ ದೂರದಾರನ ಪರವಾಗಿ ಸಾಕ್ಷಿ ನುಡಿಯಲು ಮುಂದಾಗಿದ್ದು, ಈ ವಿಚಾರವಾಗಿ ತನಿಖಾ ಸಂಸ್ಥೆಗಳ ಕ್ರಮದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾನು ನೋಡಿದ ಎರಡು ಸ್ಥಳಗಳಲ್ಲಿ ಹೆಣಗಳನ್ನು ಹೂಳಲಾಗಿದೆ ಎಂದು ಹೇಳಿಕೆ ನೀಡಿದ ಬಳಿಕ, ತನ್ನ ವಿರುದ್ಧವೇ ಸುಳ್ಳು ಪ್ರಕರಣ ದಾಖಲಿಸಿ ಬೆದರಿಸುವ ಯತ್ನ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಸುಳ್ಳು ಪ್ರಕರಣದ ಆರೋಪ: ಪುರಂದರ ಗೌಡ ಅವರು ಕಳೆದ ಆಗಸ್ಟ್ 6ರಂದು ಎಸ್‌ಐಟಿ ಕಚೇರಿಗೆ ಭೇಟಿ ನೀಡಿ ಮುಖ್ಯಸ್ಥ ಪ್ರಣವ್ ಮೊಹಂತಿಯವರನ್ನು ಭೇಟಿಯಾಗಿದ್ದರು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಸೂಚಿಸಿದ್ದರಿಂದ ಅವರು ಅಲ್ಲಿಗೆ ತೆರಳಿದ್ದರು. ಆದರೆ, ಅದೇ ಸಂದರ್ಭದಲ್ಲಿ ಪಾಂಗಾಳ ಕ್ರಾಸ್ ಬಳಿ ನಡೆದ ಘರ್ಷಣೆಯೊಂದರಲ್ಲಿ ತನ್ನನ್ನು 'ಎ1' ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ನಾನು ಆ ಸ್ಥಳದಲ್ಲಿ ಇರಲೇ ಇಲ್ಲ. ಎಸ್‌ಐಟಿ ಕಚೇರಿಗೆ ದೂರು ನೀಡಲು ಬಂದಿದ್ದಕ್ಕಾಗಿಯೇ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಇದು ನಮ್ಮನ್ನು ಹೆದರಿಸುವ ಹುನ್ನಾರ" ಎಂದು ಗೌಡ ಹೇಳಿದ್ದಾರೆ.
ಕಣ್ಣಾರೆ ಕಂಡದ್ದನ್ನು ವಿವರಿಸಿದ ಸಾಕ್ಷಿ: ನೇತ್ರಾವತಿ ನದಿಯ ಬಳಿ ತಾನು 2003ರಿಂದ 2014ರವರೆಗೆ ಅಂಗಡಿ ಇಟ್ಟುಕೊಂಡಿದ್ದಾಗ ಎರಡು ಸ್ಥಳಗಳಲ್ಲಿ ಹೆಣಗಳನ್ನು ಹೂಳಿದ್ದನ್ನು ನೋಡಿದ್ದೇನೆ ಎಂದು ಪುರಂದರ ಗೌಡ ಹೇಳಿದ್ದಾರೆ. "ಒಂದು ಅಂಬಾಸಿಡರ್ ಕಾರಿನಲ್ಲಿ ಬಂದು ಪಾಯಿಂಟ್ ನಂಬರ್ ಒಂದರಲ್ಲಿ ಹೆಣ ಹೂಳುತ್ತಿದ್ದರು. ಹಾಗೆಯೇ, ಕೈಗಾಡಿಯೊಂದರಲ್ಲಿ ತಂದು ಪಾಯಿಂಟ್ ನಂಬರ್ 13ರಲ್ಲಿಯೂ ಹೆಣ ಹೂಳಿದ್ದನ್ನು ನಾನು ನೋಡಿದ್ದೇನೆ" ಎಂದು ಹೇಳಿದ್ದಾರೆ.
ಹೆಣ ಸಿಗುವ ಬಗ್ಗೆ ಸಂದೇಹ: ತಾನು ಗುರುತಿಸಿದ ಈ ಎರಡು ಸ್ಥಳಗಳಲ್ಲಿ ಕಾಲಾಂತರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಪ್ರವಾಹ ಹಾಗೂ ಮಣ್ಣಿನ ಕೊಚ್ಚಿಹೋಗಿರುವುದರಿಂದ ಅಲ್ಲಿ ಹೆಣ ಸಿಗುವ ಬಗ್ಗೆ ಅನುಮಾನವಿದೆ ಎಂದು ಪುರಂದರ ಗೌಡರು ಒಪ್ಪಿಕೊಂಡಿದ್ದಾರೆ. "ಜಾಗ ಕನ್ಫ್ಯೂಷನ್ ಇದೆ. ಹೆಣ ಇದೆಯೋ ಇಲ್ಲವೋ ಎಂಬ ಬಗ್ಗೆಯೂ ಡೌಟ್ ಇದೆ" ಎಂದಿದ್ದಾರೆ. ಅಲ್ಲದೆ, ಕೊಲೆಯಾದ ಹೆಣಗಳು ಅಥವಾ ಅತ್ಯಾಚಾರಕ್ಕೊಳಗಾದ ಹೆಣಗಳೆಂದು ತಾನು ಹೇಳಲಾರೆ, ಏಕೆಂದರೆ ತಾನು ಕೊಲೆ ಕಣ್ಣಾರೆ ಕಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅನಾಮಿಕ ದೂರುದಾರನ ಪರ ಸಾಕ್ಷಿ: ಅನಾಮಿಕ ದೂರುದಾರರು ಸುಳ್ಳು ಹೇಳುತ್ತಿಲ್ಲ ಎಂಬುದಕ್ಕೆ ತಾನು ಸಾಕ್ಷಿ ಹೇಳುತ್ತೇನೆ ಎಂದು ಪುರಂದರ ಗೌಡ ಭರವಸೆ ನೀಡಿದ್ದಾರೆ. "ನಾನು ಗುರುತಿಸಿದ ವ್ಯಕ್ತಿ ಅನಾಮಿಕ ದೂರುದಾರ ಎಂಬ ಭರವಸೆ ಇದೆ. ಹೊಸ ಜಾಗ ಗುರುತಿಸಲು ನನ್ನಿಂದ ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು ಎಸ್‌ಐಟಿ ರಚನೆ ಮಾಡಿದ್ದರಿಂದಲೇ ತನಗೆ ಮಾತನಾಡುವ ಧೈರ್ಯ ಬಂದಿದ್ದು, ಯಾರನ್ನೂ ಬೊಟ್ಟು ಮಾಡುವ ಉದ್ದೇಶವಿಲ್ಲ ಎಂದು ಅವರು ತಿಳಿಸಿದ್ದಾರೆ.
ಎಸ್‌ಐಟಿ ಕ್ರಮದ ಬಗ್ಗೆ ಬೇಸರ: ಕಳೆದ ಆ.6 ರಂದು ತಾನು ದೂರು ನೀಡಿದ್ದರೂ, ಎಸ್‌ಐಟಿ ತಂಡವು ತನ್ನನ್ನು ತನಿಖೆಗೆ ಬಳಸಿಕೊಂಡಿಲ್ಲ ಎಂದು ಪುರಂದರ ಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೌಜನ್ಯ ಪ್ರಕರಣವನ್ನು ತೆಗೆದುಕೊಳ್ಳುವಂತೆ ಮೊಹಂತಿ ಅವರಿಗೆ ಮನವಿ ಮಾಡಿದ್ದಾಗ, ಅದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು ಎಂದು ಪುರಂದರ ಗೌಡ ತಿಳಿಸಿದ್ದಾರೆ.