ಅನುದಾನ ಲಭ್ಯತೆ ಆಧಾರದ ಮೇರೆಗೆ ಅಭಿವೃದ್ಧಿ

By Kannadaprabha News  |  First Published Jan 13, 2023, 6:17 AM IST

ಪಟ್ಟಣದ ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡುಗಳಿಗೂ ಅನುದಾನ ಲಭ್ಯತೆಯ ಆಧಾರದ ಮೇರೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಅಧ್ಯಕ್ಷ ಸೈಯದ್‌ ಸಿದ್ದಿಕ್‌ ಹೇಳಿದರು.


 ಕೆ.ಆರ್‌. ನಗರ (ಜ.13 ):  ಪಟ್ಟಣದ ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡುಗಳಿಗೂ ಅನುದಾನ ಲಭ್ಯತೆಯ ಆಧಾರದ ಮೇರೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಅಧ್ಯಕ್ಷ ಸೈಯದ್‌ ಸಿದ್ದಿಕ್‌ ಹೇಳಿದರು.

ಪುರಸಭೆ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಗುರುವಾರ ನಡೆದಪೂರ್ವಭಾವಿ ಸಭೆಯಲ್ಲಿ ಪುರಸಭಾ ಸದಸ್ಯರು, ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

Tap to resize

Latest Videos

ಹಲವು ಪುರಸಭಾ ಸದಸ್ಯರು ಮತ್ತು ನಾಗರೀಕರು ಮಾತನಾಡಿ, ವ್ಯವಸ್ಥಿತ ಪಟ್ಟಣವಾಗಿರುವ ಕೆ.ಆರ್‌. ನಗರವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟುಸ್ವಚ್ಛವಾಗಿ ಇಡುವುದರ ಜೊತೆಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿ ಸಂಚಾರ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಸದಸ್ಯೆ ವೀಣಾ ವೃಷಭೇಂದ್ರ ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ಇರುವ ಪುರಸಭೆಯ ಆಸ್ತಿಗಳನ್ನು ಕಾಪಾಡುವುದರ ಜೊತೆಗೆ ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ… ನೀಡಿ ಅವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಸೂಚನೆ ನೀಡಬೇಕೆಂದು ಸಲಹೆ ನೀಡಿದರು. ಇದರ ಜೊತೆಗೆ ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರದ ಬಳಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ನಿಲುಗಡೆ ನೀಡುವುದರಿಂದ ಅಲ್ಲಿ ಪ್ರಯಾಣ ಮಾಡುವವರಿಗೆ ಅನುಕೂಲವಾಗುವಂತೆ ನೂತನ ಬಸ್‌ ಶೆಲ್ಟರ್‌ ನಿರ್ಮಾಣ ಮಾಡಲು ತ್ವರಿತ ಕ್ರಮ ಕೈಗೊಳ್ಳುವಂತೆ ಹೇಳಿದರು.

ಬಿಜೆಪಿ ಮುಖಂಡ ವೃಷಬೇಂದ್ರ ಮಾತನಾಡಿ, ಪಟ್ಟಣದ ಪುರಸಭೆ ಬಯಲು ರಂಗಮಂದಿರದ ಸುತ್ತ ಇರುವ ಕಲ್ಲಿನ ಕಟ್ಟಡಗಳು ಕುಸಿತವಾಗಿದ್ದು, ಇದರಿಂದ ಅಲ್ಲಿನ ಸೌಂದರ್ಯ ಹಾಳಾಗಿದೆ, ಹಾಗಾಗಿ ಕೂಡಲೇ ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸದಸ್ಯ ಕೆ.ಎಲ…. ಜಗದೀಶ್‌ ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ಇರುವ ಎಲ್ಲ ಉದ್ಯಾನವನಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವುದರ ಜೊತೆಗೆ ವಿದ್ಯುತ್‌ ದೀಪಗಳನ್ನು ಅಳವಡಿಸಿ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಈ ವಿಚಾರದಲ್ಲಿ ಉದಾಸೀನ ಮಾಡಬಾರದು ಎಂದರು.

ಪುರಸಭೆ ಮುಖ್ಯಾಧಿಕಾರಿ ಡಾ. ಜಯಣ್ಣ ಮಾತನಾಡಿ ಇಂದಿನ ಬಜೆಚ್‌ ಪೂರ್ವ ಸಭೆಯಲ್ಲಿ ಸದಸ್ಯರು, ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನೀಡಿರುವ ಸಲಹೆ ಮತ್ತು ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಾಹಿತಿ ನೀಡಿದರು.

ಪಟ್ಟಣದ ವ್ಯಾಪ್ತಿಯ ಎಲ್ಲ ವಾರ್ಡುಗಳಿಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಸರ್ಕಾರದಿಂದ 30 ಕೋಟಿ ರೂಗಳು ಮಂಜೂರಾಗಿದ್ದು, ಈಗಾಗಲೇ ಕಾಮಗಾರಿಯ ಅನುಷ್ಠಾನ ಮಾಡಲು ಯೋಜನೆಯ ಸರ್ವೆ ಮಾಡುತ್ತಿದ್ದು, ಮುಂದಿನ ಮೂರು ತಿಂಗಳೊಳಗೆ ಕಾಮಗಾರಿ ಆರಂಭಿಸಲಿದ್ದು, ಆನಂತರ ಪ್ರತಿ ಮನೆಗೂ ಶುದ್ದ ನೀರು ಸರಬರಾಜು ಮಾಡುವುದಾಗಿ ಪ್ರಕಟಿಸಿದರು.

ಪುರಸಭೆ ಅಧ್ಯಕ್ಷ ಸೈಯದ್‌ ಸಿದ್ದಿಕ್‌ ಮಾತನಾಡಿ, ಬಜೆಚ್‌ ಪೂರ್ವ ಸಭೆಯಲ್ಲಿ ಎಲ್ಲರೂ ನೀಡಿದ ಸಲಹೆ ಮತ್ತು ಸೂಚನೆಗಳನ್ನು ಅನುಷ್ಠಾನಕ್ಕೆ ತರುವ ವಿಚಾರದಲ್ಲಿ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ. ಸರ್ವರು ಮಾರ್ಗದರ್ಶನ ಮತ್ತು ಸಹಕಾರ ನೀಡಬೇಕೆಂದು ಕೋರಿದರು.

ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳು ಇದ್ದರು.

click me!