ಅನಿಷ್ಟ ದೇವದಾಸಿ ಪದ್ಧತಿಗೆ ಬಲಿಯಾಗಿದ್ದ ಯುವತಿಗೆ ಯುವಕನೊಬ್ಬನ ಜೊತೆಗೆ ಮದುವೆ ಮಾಡಿಸಿ, ವಿವಾಹ ನೋಂದಣಿ ಮಾಡಿಸುವ ಮೂಲಕ ಆಕೆಗೆ ಪುನರ್ಜನ್ಮ ಕೊಡಲಾಗಿದೆ.
ದಾವಣಗೆರೆ [ಸೆ.04]: ‘ಮುತ್ತು’ ಕಟ್ಟಿಸಿಕೊಳ್ಳುವ ಮೂಲಕ ಕಳೆದ ಶುಕ್ರವಾರ ಅನಿಷ್ಟ ದೇವದಾಸಿ ಪದ್ಧತಿಗೆ ಬಲಿಯಾಗಿದ್ದ ಯುವತಿಗೆ ಯುವಕನೊಬ್ಬನ ಜೊತೆಗೆ ಮದುವೆ ಮಾಡಿಸಿ, ವಿವಾಹ ನೋಂದಣಿ ಮಾಡಿಸುವ ಮೂಲಕ ಆಕೆಗೆ ಪುನರ್ಜನ್ಮ ಕೊಟ್ಟಘಟನೆ ಶ್ರೀ ಗಣೇಶ ಚತುರ್ಥಿಯಂದು ಬಳ್ಳಾರಿ ಜಿಲ್ಲೆ ಹರಪನಹಳ್ಳಿ ಪಟ್ಟಣದಲ್ಲಿ ನಡೆದಿದೆ.
ಹರಪನಹಳ್ಳಿ ತಾ. ಹಿರೇಮೇಗಳಗೆರೆ ಗ್ರಾಮದ ಯುವತಿ ಉಚ್ಚಂಗಿದುರ್ಗದ ರಂಜಿತಾಗೆ ಶುಕ್ರವಾರ ಶ್ರೀಕ್ಷೇತ್ರ ಉಚ್ಚಂಗಿದುರ್ಗದಲ್ಲಿ ಜೋಗತಿಯೊಬ್ಬರಿಂದ ದೇವದಾಸಿ ಮುತ್ತು ಕಟ್ಟಿಸಿದ್ದು, ವಿಷಯ ತಿಳಿದ ರಾಜ್ಯ ದೇವದಾಸಿ ವಿಮೋಚನಾ ಸಂಘದ ರಾಜ್ಯ ಅಧ್ಯಕ್ಷೆ ಟಿ.ವಿ.ರೇಣುಕಮ್ಮ, ದೇವದಾಸಿ ಪುನರ್ವಸತಿ ಅಧಿಕಾರಿ ಗೋಪಾಲ ನಾಯ್ಕ, ಪ್ರಜ್ಞಾ ಪಾಟೀಲ ಸೇರಿ ಅನೇಕರು ಹಿರೇಮೇಗಳಗೆರೆ ತೆರಳಿ, ಸಂತ್ರಸ್ತ ಯುವತಿ, ಆಕೆ ತಾಯಿಗೆ ತಿಳಿ ಹೇಳಿದ್ದರು.
ಅಮಾಯಕ ಯುವತಿ ಮೈಮೇಲೆ ದೇವಿಯೇ ಬಂದು ಆಕೆಯನ್ನು ದೇವದಾಸಿ ಮಾಡುವಂತೆ, ಮುತ್ತು ಕಟ್ಟಿಸುವಂತೆ ಅಪ್ಪಣೆ ಮಾಡಿದ್ದಾಳೆಂದು ತಾಯಿ ಹೇಳಿದಾಗ ರೇಣುಕಮ್ಮ, ಪ್ರಜ್ಞಾ ಪಾಟೀಲ್ ಬುದ್ಧಿ ಹೇಳಿದ್ದಾರೆ. ಅಲ್ಲದೆ, ಯುವತಿಗೆ ಮುತ್ತು ಕಟ್ಟಿದ್ದು ಯಾರೆಂದು ಪ್ರಶ್ನಿಸಿ, ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು. ಈ ಬಗ್ಗೆ ಸವಿಸ್ತಾರ ವರದಿ ಪ್ರಕಟಿಸಿದ್ದ ಬೆನ್ನಲ್ಲೇ ಆಡಳಿತ ಯಂತ್ರ ಎಚ್ಚೆತ್ತುಕೊಂಡಿದೆ.
ದೇವದಾಸಿ ಮುತ್ತು ಕಟ್ಟಿಸಿಕೊಂಡು, ನರಕದ ಕೂಪಕ್ಕೆ ದಬ್ಬಲ್ಪಟ್ಟಿದ್ದ ಯುವತಿ ರಕ್ಷಣೆ ಮಾಡಿದ ತಂಡವು ತಹಸೀಲ್ದಾರ್ ನಾಗವೇಣಿ, ಕಂದಾಯ ನಿರೀಕ್ಷಕ ಶ್ರೀಧರ್, ಸಬ್ ಇನ್ಸಪೆಕ್ಟರ್ ವೀರಬಸಪ್ಪ ಕುಸಲಾಪುರ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಅದೇ ಹಿರೇಮೇಗಳಗೆರೆ ಗ್ರಾಮದ ಯುವಕ ಬಿ.ಪ್ರಕಾಶ ಜೊತೆಗೆ ಮದುವೆ ಮಾಡಲು ಎರಡೂ ಕುಟುಂಬದ ಒಪ್ಪಿಗೆ ಪಡೆದರು. ನಂತರ ಹುಡುಗ-ಹುಡುಗಿ ಜೊತೆಗೆ ಚರ್ಚಿಸಿ, ಇಬ್ಬರ ಸಮ್ಮತಿ ಮೇರೆಗೆ ಗಣೇಶ ಚತುರ್ಥಿಯಂದೇ ಇಬ್ಬರಿಗೂ ಮದುವೆ ಮಾಡಲಾಯಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಿರೇಮೇಗಳಗೆರೆ ಗ್ರಾಮದಲ್ಲೇ ಕೂಲಿ ಕೆಲಸ ಮಾಡಿಕೊಂಡಿರುವ ಯುವಕ ಬಿ.ಪ್ರಕಾಶ ಅಂಗವಿಕಲನಾಗಿದ್ದು ಸ್ವಾವಲಂಬಿಯಾಗಿ ಬಾಳುತ್ತಿದ್ದಾನೆ. ಹರಪನಹಳ್ಳಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಉಚ್ಚಂಗಿದುರ್ಗದ ರಂಜಿತಾ ಹಾಗೂ ಹಿರೇಮೇಗಳಗೆರೆ ಬಿ.ಪ್ರಕಾಶ್ ವಿವಾಹ ನೋಂದಣಿ ಸಹ ಮಾಡಿ, ಇಬ್ಬರಿಗೂ ಶುಭ ಹಾರೈಸಲಾಯಿತು.