ಬರಗಾಲದ ನಡುವೆಯೂ ಕೂಡ್ಲಿಗಿ ತಾಲೂಕಿನ 80 ಕೆರೆಗಳಿಗೆ ಹರಿದು ಬಂದಳು ಗಂಗೆ; ಶಾಸಕರ ಪ್ರಯತ್ನ

Published : Aug 08, 2026, 08:08 AM IST
Kudlagi

ಸಾರಾಂಶ

ಬರಗಾಲದ ನಡುವೆಯೂ, ಕೂಡ್ಲಿಗಿ ತಾಲೂಕಿನ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಶಸ್ವಿಯಾಗಿದೆ. ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರ ಪ್ರಯತ್ನದಿಂದ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ, ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

ಭೀಮಣ್ಣ ಗಜಾಪುರ

ವಿಜಯನಗರ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕಿನಲ್ಲೊಂದಾದ ಕೂಡ್ಲಿಗಿಗೆ ಇಲ್ಲಿ ವರೆಗೂ ಗಂಗೆಯ ಶಾಪವಿತ್ತು. ಆದರೆ, ಈ ಬಾರಿಯ ಭೀಕರ ಬರದ ಮಧ್ಯೆಯೂ ಗಂಗೆ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ಹರಿದು ಬರುತ್ತಿದ್ದಾಳೆ. ನೂರಾರು ವರ್ಷಗಳ ಗಂಗೆಯ ಶಾಪದಿಂದ ಕೂಡ್ಲಿಗಿ ತಾಲೂಕು ಮುಕ್ತವಾಗುತ್ತಿದೆ ಎಂಬ ಆಶಾಭಾವ ಇಲ್ಲಿಯ ಜನತೆಗೆ ಭಾಸವಾಗುತ್ತಿದೆ. ಕೆರೆಗಳಿಗೆ ನೀರು ಬರುವುದನ್ನು ನೋಡುತ್ತಿರುವ ರೈತರು ಸಂತಸದ ನಗೆ ಬೀರುತ್ತಿದ್ದಾರೆ.

₹640 ಕೋಟಿ ವೆಚ್ಚದಲ್ಲಿ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆ

ಕೂಡ್ಲಿಗಿಯ ಹಿಂದಿನ ಶಾಸಕರಾದ ಎನ್.ವೈ. ಗೋಪಾಲಕೖಷ್ಣ ಅವರು ₹640 ಕೋಟಿ ವೆಚ್ಚದಲ್ಲಿ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತಂದು ಕಾಮಗಾರಿ ಮಾಡಿಸಿದ್ದರು. ಉಳಿದ ಕಾಮಗಾರಿಯನ್ನು ಈಗಿನ ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್ ಅವರು ಪೂರ್ಣಗೊಳಿಸಿ ತಮ್ಮ ಅವಧಿಯಲ್ಲಿಯೇ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೂಡ್ಲಿಗಿ ತಾಲೂಕಿನಲ್ಲಿ ಇತಿಹಾಸ ಬರೆದಿದ್ದಾರೆ. ಕೂಡ್ಲಿಗಿ ತಾಲೂಕಿನಲ್ಲಿ ಮಳೆಗಾಲದಲ್ಲಿಯೇ ಬಣಗುಡುತ್ತಿರುವ ಕೆರೆಗಳನ್ನು ನೋಡಿ ಪ್ರತಿವರ್ಷ ಹತಾಶರಾಗುತ್ತಿದ್ದ ಇಲ್ಲಿಯ ರೈತರು ಇದೀಗ ಕೆರೆಯಲ್ಲಿ ಗಂಗೆಯನ್ನು ನೋಡಿ ಸಂತಸದ ನಗೆ ಬೀರುತ್ತಿದ್ದಾರೆ.

ಕೆರೆಗೆ ನೀರು ತುಂಬಿಸುವ ಯೋಜನೆಗೆ ಕೊನೆಯ ಕ್ಷಣದಲ್ಲಿ ಬಹಳ ಎಡರು ತೊಡರುಗಳು ಎದುರಾಗಿದ್ದವು. ಅವುಗಳನ್ನು ಈಗಿನ ಕೂಡ್ಲಿಗಿ ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್ ಅವರು ನಿರಂತರ ಶ್ರಮ, ಕಾಳಜಿಯಿಂದ ಬಗೆಹರಿಸಿದ್ದಾರೆ. ಎಲ್ಲ ತೊಂದರೆಗಳು ಮುಗಿಯಿತು ಎಂದು ನೀರು ಸರಬರಾಜು ಮಾಡಲು ಮುಂದಾದಾಗ ಹರಪನಹಳ್ಳಿ ಸಮೀಪದ ಹಾಳು ತಿಮ್ಮಲಾಪುರದ ಹತ್ತಿರ ಪೈಪ್ ಲೈನ್ ಒಡೆದು ನೀರು ಪೋಲಾಗುತ್ತಿತ್ತು. ಯುದ್ಧೋಪಾದಿಯಲ್ಲಿ ತಂತ್ರಜ್ಞರು ಪೈಪ್ ಲೀಕೇಜ್ ಮುಚ್ಚಲು ಹರಸಾಹಸಪಟ್ಟು ಸರಿಪಡಿಸಿದ್ದಾರೆ. ಹೀಗಾಗಿ, ಗುರುವಾರ ತಾಲೂಕಿನ ಕೆಲವು ಕೆರೆಗಳಿಗೆ ನೀರು ಹರಿದು ಬರಲು ಶುರುವಾಗಿದೆ. ಬರದಲ್ಲಿ ಬೆಂದ ರೈತರು ಕೆರೆಗಳಿಗೆ ನೀರು ಬರುತ್ತಿರುವುದನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.

ನಿರಂತರ ತುಂಬಿಸಲು ಸಾಧ್ಯವೇ?

ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ಈ ಬಾರಿ ಹೊಸದಾಗಿ ನೀರು ತುಂಬಿಸಿದರಷ್ಟೇ ಸಾಲದು ಪ್ರತಿವರ್ಷ ನಿರಂತರವಾಗಿ ತುಂಗಾಭದ್ರಾ ನದಿಯಿಂದ ನೀರು ತುಂಬಿಸಿದರೆ ಮಾತ್ರ ಇಲ್ಲಿಯ ರೈತರ ಬದುಕು ಹಸನಾಗುತ್ತದೆ. ನೀರೆತ್ತುವ ದೈತ್ಯ ಗಾತ್ರದ ಮೋಟರ್‌ಗಳು, ಪೈಪ್ ಲೈನ್ ಹಾಳಾಗದಂತೆ ನಿರಂತರ ನಿರ್ವಹಣೆ ಮಾಡಬೇಕಾಗುತ್ತದೆ. ಈ ಕುರಿತು ಅಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳು ನಿಗಾವಹಿದರೆ ಮಾತ್ರ ಕೂಡ್ಲಿಗಿ ತಾಲೂಕಿನ ರೈತರ ನಗೆ ಕೊನೆ ವರೆಗೂ ಇರಲು ಸಾಧ್ಯ.

ತಾಲೂಕಿನ ನೂರಾರು ವರ್ಷಗಳ ಕನಸು ನನಸಾಗಿದೆ. ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಕೆಲ ತಾಂತ್ರಿಕ ದೋಷಗಳನ್ನು ಈಗಾಗಲೇ ಸರಿಪಡಿಸಲಾಗಿದೆ. ನಿರಂತರ ಕೆರೆ ನೀರು ತುಂಬಿಸುವ ಯೋಜನೆಯ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ತುಂಗಾಭದ್ರಾ ನದಿಯಲ್ಲಿ ನೀರು ಹರಿಯುತ್ತಿದೆ. ಹೀಗಾಗಿ, ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ಕಾರ್ಯಪ್ರವೖತ್ತರಾಗಿದ್ದಾರೆ. ಬರದಲ್ಲಿ ಕೆರೆಗಳಿಗೆ ನೀರು ಬರುತ್ತಿರುವುದರಿಂದ ಅಂತರ್ಜಲ ವೖದ್ಧಿಯಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್.

ಬಡೇಲಡಕು ಸಮೀಪದ ದೇವಲಾಪುರ ಕೆರೆಗೆ ನೀರು ಬರುತ್ತಿರುವುದನ್ನು ನೋಡಿ ನಮಗೆಲ್ಲಾ ಸಂತೋಷವಾಗುತ್ತಿದೆ, ಕೂಡ್ಲಿಗಿ ಶಾಸಕರ ಶ್ರಮ ಸಾರ್ಥಕವೆನಿಸಿದೆ. ರೈತರ, ಜನ ಜಾನುವಾರಿಗೆ ಕುಡಿಯುವ ನೀರಿನ ಮೂಲ ಹಾಗೂ ರೈತರ ಪಂಪ್ ಸೆಟ್ ಗಳಿಗೆ ನೀರು ಹೆಚ್ಚಾಗಿ ರೈತರ ಬದುಕು ಹಸನಾಗುತ್ತದೆ ಎಂದು ಕೂಡ್ಲಿಗಿ ತಾಲೂಕಿನ ಬಡೇಲಡಕು ರೈತ ಕೊಟ್ರೇಶ್.

PREV
Read more Articles on
click me!

Recommended Stories

Bengaluru Namma Metro ನಿರ್ಲಕ್ಷ್ಯ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ!
HAL: ದೇಶದಲ್ಲೇ ಮೊದಲು, ಎಚ್‌ಎಎಲ್‌ನಲ್ಲಿ ಉಪಗ್ರಹ ಬಳಸಿ ಹೆಲಿಕಾಪ್ಟರ್‌ ಲ್ಯಾಂಡ್‌