ಕೊಡಗಿನಲ್ಲಿ ಅವ್ಯವಸ್ಥೆ ಕಂಡು ಗರಂ ಆದ ಉಪ ಲೋಕಾಯುಕ್ತ: ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ

Published : Jul 03, 2026, 07:05 PM IST
KN Phaneendra

ಸಾರಾಂಶ

ನಿಮಗೆ ಶಿಕ್ಷೆ ಕೊಡುವಂತೆ ಸರ್ಕಾರಕ್ಕೆ ಬರೆಯುತ್ತೇನೆಂದು ಗರಂ ಆದರು. ಮಡಿಕೇರಿ ನಗರಸಭೆ ಆಯುಕ್ತ ರಮೇಶ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಕೆ ಎನ್ ಫಣೀಂದ್ರ ತರಾಟೆಗೆ ತೆಗೆದುಕೊಂಡರು. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜು.03): ಕೊಡಗಿನ ವಿವಿಧೆಡೆಗೆ ಭೇಟಿ ನೀಡಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ ಎನ್ ಫಣೀಂದ್ರ ಕೊಡಗಿನ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಮಡಿಕೇರಿಯ ವೃದ್ಧಾಶ್ರಮ, ವಿದ್ಯಾರ್ಥಿನಿಯರ ಹಾಸ್ಟೆಲ್, ಮಡಿಕೇರಿ ನಗರಸಭೆ ಕಸ ನಿರ್ವಹಣೆ ಮಾಡುತ್ತಿರುವ ಸ್ಥಳ ಹಾಗೂ ಬಸ್ಸು ನಿಲ್ದಾಣಗಳಿಗೆ ಭೇಟಿ ನೀಡಿ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಸ್ಟೆಲ್ ಹಾಗೂ ವೃದ್ಧಾಶ್ರಮ ಅವ್ಯವಸ್ಥೆಗಳ ಕಂಡ ಕೆ.ಎನ್. ಫಣೀಂದ್ರ ಅವರು ಗರಂ ಆದರು.

ಹಾಸ್ಟೆಲ್ ಹಾಗೂ ವೃದ್ಧಾಶ್ರಮಗಳ ವಿರುದ್ಧ ಸುಮೊಟೋ ಕೇಸ್ ದಾಖಲಿಸಿಕೊಂಡರು. ಮಡಿಕೇರಿ ನಗರಸಭೆ ಕಸ ವಿಲೇವಾರಿಗೂ ಅವ್ಯವಸ್ಥೆ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಅವರು ಅಧಿಕಾರಿಗಳು ಏನೂ ಪ್ರಯೋಜನ ಇಲ್ಲವೆಂದರು. ಅವೈಜ್ಞಾನಿಕ ಕಸ ವಿಲೇವಾರಿ ಕಂಡು ಅಧಿಕಾರಿಗಳ ತರಾಟೆಗೆ ತೆಗೆದುಕೊಂಡರು. ಎರಡೆರಡು ವರ್ಷಗಳಿಂದ ಇಲ್ಲಿದ್ದೀರಾ ಆದರೆ ಎರಡು ವರ್ಷಗಳಲ್ಲಿ ಕನಿಷ್ಠ ಕೆಲವನ್ನು ಮಾಡಿಲ್ಲವೆಂದರು. ನೀವೇನೋ ಇಲ್ಲಿಂದ ಬೇರೆಡೆಗೆ ಹೋಗುತ್ತೀರಾ, ಆದರೆ ಇಲ್ಲಿ ಬದುಕುವ ಜನರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.

ನಿಮಗೆ ಶಿಕ್ಷೆ ಕೊಡುವಂತೆ ಸರ್ಕಾರಕ್ಕೆ ಬರೆಯುತ್ತೇನೆಂದು ಗರಂ ಆದರು. ಮಡಿಕೇರಿ ನಗರಸಭೆ ಆಯುಕ್ತ ರಮೇಶ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎರಡು ತಿಂಗಳಲ್ಲಿ ಕಸ ವಿಲೇವಾರಿ ಸಮಸ್ಯೆಯನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಫಣೀಂದ್ರ ಎಚ್ಚರಿಸಿದರು. ಯಾವ ಜಿಲ್ಲೆಯಲ್ಲೂ ಈ ರೀತಿಯ ಅವೈಜ್ಞಾನಿಕ ಕಸವಿಲೇವಾರಿಯನ್ನು ಕಂಡಿಲ್ಲ ಎಂದರು. ಕಸ ವಿಲೇವಾರಿ ಘಟಕದ ಗೇಟ್ ಬಳಿಗೆ ಇಳಿಯುತ್ತಿದ್ದಂತೆ ರಸ್ತೆಯನ್ನೇ ಸರಿಯಾಗಿ ಇಟ್ಟುಕೊಂಡಿಲ್ಲ, ಇನ್ನು ಕಸವನ್ನು ಹೇಗೆ ವಿಲೇವಾರಿ ಮಾಡುತ್ತಿದ್ದೀರ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕನಿಷ್ಟ ಓಡಾಡಲು ರಸ್ತೆ ಸುಗಮವಾಗಿರಬೇಕು. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಕಸವನ್ನು ವಿಲೇವಾರಿ ಮಾಡುವುದು ಹೀಗೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಸ ವಿಲೇವಾರಿ ಘಟಕ ಕೇಂದ್ರ ನಿರ್ವಹಣೆ ತುಂಬಾ ಕಳಪೆಯಿಂದ ಕೂಡಿದ್ದು, ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡುತ್ತಿಲ್ಲ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಅವರು ಸಿಟ್ಟಾದರು. ಒಣ ಕಸ ಮತ್ತು ಹಸಿ ಕಸವನ್ನು ಬೇರ್ಪಡಿಸಿ ಕಸ ವಿಲೇವಾರಿ ಮಾಡಬೇಕು. ಆ ಕೆಲಸ ಇಲ್ಲಿ ಆಗುತ್ತಿಲ್ಲ.

ಕಸದಿಂದ ಸೋರುವ ನೀರು ಎಲ್ಲಿಗೆ ಹೋಗುತ್ತಿದೆ ಎಂಬ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದರು. ಈ ಪ್ರದೇಶದಲ್ಲಿ ಹೆಚ್ಚಿನ ಮಳೆಯಿಂದಾಗಿ ಕಸದ ನೀರು ಬೋರ್ವೆಲ್, ತೊರೆಗಳ ಮೂಲಕ ಅಂತರ್ ಜಲವೇ ಮಲೀನವಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಮುನ್ನೆಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು. ಪರಿಸರ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಎಂಜಿನಿಯರ್ಗಳು ಗಮನಹರಿಸಬೇಕು. ಇಲ್ಲದಿದ್ದರೆ ಎಲ್ಲರ ಮೇಲೂ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಅವರು ಎಚ್ಚರಿಸಿದರು.

ವೈದ್ಯಕೀಯ, ಪಶು ವೈದ್ಯಕೀಯ, ಕುಡಿಯುವ ನೀರು ಪೂರೈಕೆ ವಿಭಾಗ, ನಗರಸಭೆ ಹಾಗೂ ಪರಿಸರ ಇಲಾಖೆ ಹೀಗೆ ಎಲ್ಲಾ ವಿಭಾಗದ ಎಂಜಿನಿಯರ್ಗಳು ಈ ಬಗ್ಗೆ ಗಮನಹರಿಸಬೇಕು ಎಂದು ಕೆ.ಎನ್.ಫಣೀಂದ್ರ ಅವರು ನಿರ್ದೇಶನ ನೀಡಿದರು. ಕೆರೆಕಟ್ಟೆ, ಕಾಲುವೆ, ತೊರೆಗಳ ಮೂಲಕ ಕಸದ ನೀರು ಹೋಗದಂತೆ ಎಚ್ಚರವಹಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನಹರಿಸುವುದು ಅತ್ಯಗತ್ಯ ಎಂದು ನಿರ್ದೇಶನ ನೀಡಿದರು. ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ಸಮಾರೋಪಾದಿಯಲ್ಲಿ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಇಲ್ಲಿರುವ ಆರು ಎಕರೆ ಜಾಗ ಸಾಲುವುದಿಲ್ಲ. ಆದ್ದರಿಂದ ಬೇರೆ ಕಡೆಯು ಕಸ ವಿಲೇವಾರಿಗೆ ಜಾಗ ಕಾಯ್ದಿರಿಸಬೇಕು ಎಂದು ಸಲಹೆ ಮಾಡಿದರು.

ಸ್ವಯಂ ಪ್ರೇರಿತ ದೂರು ದಾಖಲು

ಕಸ ವಿಲೇವಾರಿ ಘಟಕದ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆಗಳ ಮಾಹಿತಿ ಪಡೆಯಬೇಕು. ಶುಚಿತ್ವ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕಸ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸುವಲ್ಲಿ ಮುಂದಾಗಬೇಕು ಎಂದರು. ಕಸವಿಲೇವಾರಿಯನ್ನು ಸಮಪರ್ಕವಾಗಿ ನಿರ್ವಹಿಸದಿರುವ ಹಿನ್ನೆಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು. ವೈಜ್ಞಾನಿಕವಾಗಿ ಕಸ ವಿಲೇವಾರಿ ಆಗಬೇಕು ಎಂದು ಸಲಹೆ ಮಾಡಿದರು. ಬಳಿಕ ನಗರದ ಮಾರುಕಟ್ಟೆ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆಯೇ ಎಂದು ಮಾಹಿತಿ ಪಡೆದರು.

ಹೆಚ್ಚಿನ ಮಳೆಯಿಂದ ಮಳೆ ನೀರು ಎರಚುವುದು ಹಾಗೂ ಬೆಳಕು ವ್ಯವಸ್ಥೆ ಇಲ್ಲದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಅವರು ಚರಂಡಿ ಸರಿಪಡಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಎಲ್ಲೆಂದರಲ್ಲಿ ಕಸ ಕಡ್ಡಿ ಹಾಕುವುದನ್ನು ತಡೆಯಬೇಕು. ಈ ಸಂಬಂಧ ಜಾಗೃತಿ ಫಲಕ ಅಳವಡಿಸಬೇಕು ಎಂದು ಫಣೀಂದ್ರ ಅವರು ಹೇಳಿದರು. ವ್ಯಾಪಾರಸ್ಥರು ಸಹ ಎಲ್ಲೆಂದರಲ್ಲಿ ಕಸ ಬಿಸಾಡಿದಲ್ಲಿ ದಂಡ ವಿಧಿಸಲಾಗುತ್ತದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದರು. ಈ ವೇಳೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

PREV
Read more Articles on
click me!

Recommended Stories

ಅಮ್ಮನೆದುರೇ ಪುನೀತ್ ಕೆರೆಹಳ್ಳಿ ಮತ್ತೆ ಬಂಧನ; ತಮ್ಮನ ಮದುವೆಗೆ ಬಂದವನನ್ನ ಬಂಧಿಸಿದ್ದಕ್ಕೆ ತಾಯಿ ಕಣ್ಣೀರು!
Beauty Parlor: ನಿರುದ್ಯೋಗಿ ಮಹಿಳೆಯರಿಗೆ 'ಉಚಿತ ಬ್ಯೂಟಿ ಪಾರ್ಲರ್ ತರಬೇತಿ'; ಆಸಕ್ತರು ಇಂದೇ ಅರ್ಜಿ ಸಲ್ಲಿಸಿ!