* ಆರ್‌ಪಿಎಫ್ ಐಜಿ ಮಟ್ಟದಲ್ಲೇ ತನಿಖೆಗೆ ಮುಂದಾದ ರೈಲ್ವೆ ಇಲಾಖೆ
* ಹತ್ತು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟ ನಕಲಿ ಅಭ್ಯರ್ಥಿ ಪಟ್ಟಿ
* ಅಭ್ಯರ್ಥಿಗಳು ಮೋಸಕ್ಕೊಳಗಾಗಬಾರದು, ಹುಷಾರಾಗಿರಬೇಕು
ಶಿವಾನಂದ ಗೊಂಬಿ
ಹುಬ್ಬಳ್ಳಿ(ಮೇ.05): ರೈಲ್ವೆ ಇಲಾಖೆಯಲ್ಲಿ(Department of Railways) ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ಬರೀ ನೋಟಿಫಿಕೇಶನ್ ಅಷ್ಟೇ ಅಲ್ಲ. ನಕಲಿ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ಇದೀಗ ಆರ್‌ಪಿಎಫ್ ಐಜಿ ಮಟ್ಟದ ಅಧಿಕಾರಿಗಳಿಂದಲೇ ತನಿಖೆಗೆ ರೈಲ್ವೆ ಇಲಾಖೆ ಕ್ರಮಕೈಗೊಂಡಿದೆ. ಇದರ ಹಿಂದೆ ದೊಡ್ಡ ಜಾಲವೇ ಇರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
undefined
ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೇ ರೈಲ್ವೆ ಇಲಾಖೆಯಲ್ಲಿ ಇಂತಿಂಥ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ನಕಲಿ ನೋಟಿಫಿಕೇಶನ್(Fake Notification) ಹೊರಡಿಸಿದ್ದು ಬೆಳಕಿಗೆ ಬಂದಿತ್ತು. ಅದಕ್ಕೆ ನೈಋುತ್ಯ ರೈಲ್ವೆ ವಲಯದ ಜಿಎಂ (ಮಹಾಪ್ರಬಂಧಕ) ಕೋಟಾದಡಿ ಈ ಹುದ್ದೆಗಳ ಅರ್ಜಿ ಆಹ್ವಾನಿಸಲಾಗಿದೆ ಎಂಬ ಒಕ್ಕಣಿ ಕೂಡ ಇತ್ತು. ಅದರ ವಿರುದ್ಧ ರೈಲ್ವೆ ಇಲಾಖೆ ಹುಷಾರಾಗಿರಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿತ್ತು. ಅದಾಗಿ ನಾಲ್ಕೈದು ದಿನ ಕಳೆಯುವಷ್ಟರಲ್ಲೇ ಇದೀಗ ಅಭ್ಯರ್ಥಿಗಳ ನೇಮಕಾತಿಯ ನಕಲಿ ಪಟ್ಟಿಯೇ ಬಿಡುಗಡೆಯಾಗಿದೆ. ಇದು ರೈಲ್ವೆ ಇಲಾಖೆಯನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.
ರೈಲ್ವೆ ಇಲಾಖೆಯ ನೇಮಕಾತಿ: ನಕಲಿ ನೋಟಿಫಿಕೇಶನ್..!
ಸದ್ಯ ಡಿ ಗ್ರೂಪ್ ನೌಕರರ ನಕಲಿ ನೇಮಕಾತಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಎಂಟು ಜನ ಡಿ ಗ್ರೂಪ್ ನೌಕರರ ನಕಲಿ ಪಟ್ಟಿಬಿಡುಗಡೆ ಮಾಡಿದ್ದು, ಬೆಂಗಳೂರಿನ ಸೆಂಟ್ರಲ್ ವರ್ಕ್ಶಾಪ್‌ನಲ್ಲಿ ರಿಪೋರ್ಟಿಂಗ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಯಾವ ಅಧಿಕಾರಿ ಹಾಗೂ ಯಾವ ಸ್ಥಳದಲ್ಲೇ ರಿಪೋರ್ಟಿಂಗ್ ಮಾಡಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ. ಜತೆಗೆ ನೇಮಕವಾಗಿರುವ ಅಭ್ಯರ್ಥಿಗಳ ಎಂಪ್ಲಾಯ್ ನಂಬರ್ ಕೂಡ ನಮೂದಿಸಲಾಗಿದೆ. ಬೆಂಗಳೂರು ವಿಭಾಗದ ಡಿಆರ್‌ಎಂ ಅವರ ಸೀಲು ಹಾಗೂ ಸಹಿ ಮಾಡಲಾಗಿದೆ. ಎಂಟು ಜನರಿಗೂ ಮೇ 16ರಿಂದ 23ರೊಳಗೆ ರಿಪೋರ್ಟಿಂಗ್ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು, ಎಸ್‌ಎಸ್‌ಇ/ ಸಿಆ್ಯಂಡ್‌ಡಬ್ಲ್ಯೂ/ಎಚ್‌ಆರ್‌ಆರ್/ಬಿಎಲ್‌ಆರ್‌ನ ಅರವಿಂದ ಕುಮಾರ ಎಂಬ ಅಧಿಕಾರಿ ಬಳಿ ರಿಪೋರ್ಟಿಂಗ್ ಮಾಡಿಕೊಳ್ಳುವಂತೆ ನಿರ್ದೇಶಿಸಲಾಗಿದೆ.
ಯಾವಾಗ ಟೆಸ್ಟ್ ಆಗಿದೆ?:
ರೈಲ್ವೆ ಇಲಾಖೆಯಲ್ಲಿ ನೌಕರಿ ಪಡೆಯಬೇಕೆಂದರೆ ಆಯಾ ಹುದ್ದೆಗಳ ಅರ್ಹತೆಗೆ ತಕ್ಕಂತೆ ಲಿಖಿತ ಪರೀಕ್ಷೆ, ಫಿಸಿಕಲ್, ಮೆಡಿಕಲ್ ಟೆಸ್ಟ್‌ಗಳಿರುತ್ತವೆ. ಇವುಗಳನ್ನೆಲ್ಲ ಅದ್ಹೇಗೆ ಮತ್ತು ಎಲ್ಲಿ ಮಾಡಿದರು? ಇಷ್ಟೆಲ್ಲ ಆಗುವವರೆಗೂ ರೈಲ್ವೆ ಇಲಾಖೆಗೆ ಅದ್ಹೇಗೆ ಗೊತ್ತಾಗಿಲ್ಲ? ಇದರಲ್ಲಿ ರೈಲ್ವೆ ಇಲಾಖೆಯ ಸಿಬ್ಬಂದಿಗಳೇನಾದರೂ ಶಾಮೀಲಾಗಿದ್ದಾರೆಯೇ? ಸದ್ಯ ಒಂದೇ ನಕಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಇದರಂತೆ ಇನ್ನೆಷ್ಟು ಪಟ್ಟಿಗಳಿವೆಯೋ ಏನೋ? ಎಂಬ ಪ್ರಶ್ನೆಗಳೆಲ್ಲ ಇದೀಗ ಉದ್ಭವವಾಗಿವೆ. ಈ ಪಟ್ಟಿ ನಕಲಿ ಎಂಬುದು ಗೊತ್ತಾಗಿದೆ. ಈ ಅಭ್ಯರ್ಥಿಗಳು(Candidates0 ಮೇ 16ರಿಂದ 23ರ ವರೆಗೆ ಕೆಲಸಕ್ಕೆ ಹಾಜರಾಗಲು ಹೋದಾಗಲೇ ತಾವು ನೇಮಕವಾಗಿಲ್ಲ ಎಂಬುದು ಬಹಿರಂಗಗೊಳ್ಳಲಿದೆ. ಅಷ್ಟೊತ್ತಿಗಾಗಲೇ ಇವರ ಬಳಿ ದುಡ್ಡು ಇಸಿದುಕೊಂಡವರು ನಾಪತ್ತೆಯಾಗಿರುತ್ತಾರೆ. ಅಭ್ಯರ್ಥಿಗಳು ಅತಂತ್ರರಾಗಬೇಕಾಗುತ್ತದೆ.
ನಕಲಿ ನೋಟಿಫಿಕೇಶನ್ ಹಾಗೂ ನಕಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಎಚ್ಚೆತ್ತಿರುವ ನೈಋುತ್ಯ ರೈಲ್ವೆ ವಲಯವು, ಆರ್‌ಪಿಎಫ್‌ನ ಐಜಿ ಅವರಿಗೆ ದೂರು ನೀಡಿದೆ. ಈ ಬಗ್ಗೆ ತನಿಖೆ ನಡೆಸುವಂತೆ ದೂರಿನಲ್ಲಿ ಕೋರಲಾಗಿದೆ. ಅದರಂತೆ ಇದೀಗ ತನಿಖೆ(Probe) ಶುರುವಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ದೊಡ್ಡ ಜಾಲ:
ಅಧಿಕಾರಿಗಳ ಸಹಿ, ಕಚೇರಿ ಸೀಲುಗಳೆಲ್ಲ ಯಥಾವತ್ತಾಗಿ ನಕಲು ಮಾಡಲಾಗಿದೆ. ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಂದ ಎಷ್ಟೆಷ್ಟು ಲಕ್ಷ ಪಡೆದಿದ್ದಾರೋ ಏನೋ? ಇದೆಲ್ಲವನ್ನು ನೋಡಿದರೆ ರೈಲ್ವೆ ನೇಮಕಾತಿ(Recruitment) ಹೆಸರಲ್ಲಿ ಕೋಟ್ಯಂತರ ರು. ವಂಚಿಸಿರುವ ದೊಡ್ಡ ಜಾಲವೇ ಇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಜಾಲವನ್ನು ಬಯಲಿಗೆಳೆಯಬೇಕೆಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.
ಮುಸ್ಲಿಂ ಪ್ರಯಾಣಿಕರಿಗೆ ಇಫ್ತಾರ್ ಟ್ರೀಟ್ ನೀಡಿದ ಭಾರತೀಯ ರೈಲ್ವೆ: ನೆಟ್ಟಿಗರಿಂದ ಶ್ಲಾಘನೆ
ಒಟ್ಟಿನಲ್ಲಿ ಅತ್ತ ರಾಜ್ಯ ಸರ್ಕಾರದ ವ್ಯಾಪ್ತಿಯ ಪಿಎಸ್‌ಐ, ಪ್ರಾಧ್ಯಾಪಕರ ಹುದ್ದೆಯ ಅಕ್ರಮ ನೇಮಕಾತಿ ಸುದ್ದಿ ನಡುವೆಯೇ, ಇದೀಗ ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಹೆಸರಲ್ಲಿ ಕೆಲವರು ದುಡ್ಡು ಮಾಡಿಕೊಳ್ಳುತ್ತಿರುವ ವಿಷಯ ಬಹಿರಂಗಗೊಳ್ಳುತ್ತಿರುವುದು ರೈಲ್ವೆ ಇಲಾಖೆಯ ಅಧಿಕಾರಿಗಳನ್ನೇ ಕಂಗೆಡಿಸಿದೆ.
ರೈಲ್ವೆ ಇಲಾಖೆಯಲ್ಲಿ ನೇಮಕಾತಿ ವಿಷಯವಾಗಿ ಕೆಲವರು ನಕಲಿ ನೋಟಿಫಿಕೇಶನ್, ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಆರ್‌ಪಿಎಫ್ ಐಜಿ ಅವರಿಗೆ ದೂರು ನೀಡಲಾಗಿದೆ. ತನಿಖೆ ನಡೆಯಲಿದೆ. ರೈಲ್ವೆ ನೇಮಕಾತಿಗೆ ಸಂಬಂಧಪಟ್ಟಂತೆ ಕೆಲವರು ಮೋಸ ಮಾಡಬಹುದು. ಅಭ್ಯರ್ಥಿಗಳು ಮೋಸಕ್ಕೊಳಗಾಗಬಾರದು. ಹುಷಾರಾಗಿರಬೇಕು ಅಂತ ನೈಋುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.