ಕೊರೋನಾಕ್ಕೆ ಬೆಚ್ಚಿ ಬಿದ್ದ ಜನ ಈಗ ಡೆಂಘೀ ಜ್ವರಕ್ಕೆ ತತ್ತರ..!

By Kannadaprabha News  |  First Published May 14, 2020, 7:12 AM IST

ಆಚಾರ ನರಸಾಪುರ ಗ್ರಾಮದ 40ಕ್ಕೂ ಅಧಿಕ ಜನ ಆಸ್ಪ​ತ್ರೆಗೆ ದಾಖ​ಲು| ಕಳೆ​ದ 20 ದಿನಗಳಿಂದಲೂ ಜನ ಡೆಂಘೀ ಜ್ವರ​ದಿಂದ ಗಂಗಾವತಿಯ ಶ್ರೀರಾಮನಗರದ ಖಾಸಗಿ ಆಸ್ಪತ್ರೆಗೆ ದಾಖಲು| ತಾಲೂಕಿನ ಮರಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಆಚಾರ ನರಸಾಪುರ ಗ್ರಾಮದಲ್ಲಿ ಸೌಕರ್ಯಗಳು ಇಲ್ಲದೇ ಇರುವುದು ಈ ಜ್ವರ ಬರಲು ಕಾರಣ|
 


ರಾಮಮೂರ್ತಿ ನವಲಿ

ಗಂಗಾವತಿ(ಮೇ.14):  ಕಳೆದ ಎರಡು ತಿಂಗಳಿಂದ ಕೊರೋನಾ ವೈರಸ್‌ಗೆ ಜನತೆ ಕಂಗಾ​ಲಾ​ಗಿ​ದ್ದಾ​ರೆ. ಇದೇ ​ವೇ​ಳೆ ಗಂಗಾವತಿ ತಾಲೂಕಿನ ನರಸಾಪುರ ಗ್ರಾಮದ 40ಕ್ಕೂ ಹೆಚ್ಚು ಜನರು ಡೆಂಘೀ ಜ್ವರಕ್ಕೆ ತತ್ತರಗೊಂಡಿದ್ದಾರೆ.

Tap to resize

Latest Videos

ಕಳೆ​ದ 20 ದಿನಗಳಿಂದಲೂ ಜನ ಡೆಂಘೀ ಜ್ವರ​ದಿಂದ ಗಂಗಾವತಿಯ ಶ್ರೀರಾಮನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿ​ದ್ದಾ​ರೆ. ತಾಲೂಕಿನ ಮರಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಆಚಾರ ನರಸಾಪುರ ಗ್ರಾಮ ಸುಮಾರು 5 ಸಾವಿರ ಜನಸಂಖ್ಯೆ ಹೊಂದಿದೆ. ಇಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೇ ಇರುವುದು ಈ ಜ್ವರ ಬರಲು ಕಾರಣ ಎಂದು ಹೇಳಲಾಗುತ್ತಿದೆ.

ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೆ ಇರುವುದು ಡೆಂಘೀ ಜ್ವರ ಬರಲು ಕಾರಣವಾಗಿದೆ. ಮರಳಿ ಗ್ರಾಮ ಪಂಚಾಯಿತಿಯವರು ಈ ಗ್ರಾಮವನ್ನು ನಿರ್ಲಕ್ಷಿಸುತ್ತಿದ್ದು, ಸ್ವಚ್ಛತೆ, ಶೌಚಾಲಯ ನಿರ್ಮಾಣ ಮಾಡುವಲ್ಲಿ ವಿಫಲವಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಕೊರೋನಾ ಮಧ್ಯೆ ಬಳ್ಳಾರಿ ಜಿಲ್ಲೆಯಲ್ಲಿ ಡೆಂಘೀ ಜ್ವರ ತಾಂಡವ: ಆತಂಕದಲ್ಲಿ ಜನತೆ..!

40ಕ್ಕೂ ಹೆಚ್ಚು ಜನ ದಾಖಲು:

ಜ್ವರಕ್ಕೆ ಗ್ರಾಮ ಸಂಪೂರ್ಣವಾಗಿ ತತ್ತರಿಸಿದೆ. ಒಂದೇ ಕುಟುಂಬದಲ್ಲಿ ತಾಯಿ ಮಕ್ಕಳಿಗೆ ಡೆಂಘೀ ಬಂದಿದ್ದು, ಇದರಿಂದ ಗ್ರಾಮಸ್ಥರು ಭಯ ಭೀತಿಯಲ್ಲಿ ಸಿಲುಕಿದ್ದಾರೆ. ಗಂಗಾವತಿ ಖಾಸಗಿ ಆಸ್ಪತ್ರೆಯಲ್ಲಿ ಡೆಂಘೀ ಜ್ವರ ಪೀಡಿತರೆ ಹೆಚ್ಚಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ 19 ಕ್ಕೆ ಮೀಸಲಾಗಿದ್ದರಿಂದ ಈ ರೋಗಿಗಳಿಗೆ ಸಮಸ್ಯೆಯಾಗಿದೆ.

ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ತಪಾಸಣೆ ಕೈಗೊಂಡಿದ್ದರೂ ಡೆಂಘೀ ನಿಯಂತ್ರಣಕ್ಕೆ ಬಾರದೆ ಇರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ತೀರಾ ಬಡತನದಲ್ಲಿರುವ ಕುಟುಂಬಗಳು ಚಿಕಿತ್ಸೆಗೆ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ.

ಇನ್ನಾದರೂ ಆರೋಗ್ಯ ಇಲಾಖೆಯವರು ಗ್ರಾಮದ ಕಡೆಗೆ ಗಮನಹರಿಸಿ ಡೆಂಘೀ ಬರಲು ಕಾರಣ ಏನು ಎನ್ನುವುದನ್ನು ಪತ್ತೆ ಹಚ್ಚಿ ನಿಯಂತ್ರಣ​ಕ್ಕೆ ಕ್ರಮ​ಕೈ​ಗೊ​ಳ್ಳ​ಬೇ​ಕಿ​ದೆ. 15 ದಿನಗಳ ಹಿಂದೆ ಆಚಾರ ನರಸಾಪುರ ಗ್ರಾಮಕ್ಕೆ ಆರೋಗ್ಯ ಇಲಾಖೆಯ ತಂಡ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ನಡೆಸಿದೆ. ಆದರೆ, ನಿಯಂತ್ರಣಕ್ಕೆ ಬಾರದೆ ಇರುವುದರಿಂದ ಮತ್ತೊಮ್ಮೆ ಆರೋಗ್ಯ ಇಲಾಖೆಯ ವೈದ್ಯರ ತಂಡ ಭೇಟಿ ನೀಡಿ, ಚಿಕಿತ್ಸೆ ನೀಡಲಾಗುತ್ತದೆ. ವೈದ್ಯಕೀಯ ತಂಡ ಕೋವಿಡ್‌ -19ರ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದೆ. ಆದರೂ, ಡೆಂಘೀ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೊಪ್ಪಳ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿಗಳು ಡಾ. ಲಿಂಗರಾಜ್‌ ಅವರು ಹೇಳಿದ್ದಾರೆ.

ಆಚಾರ ನರಸಾಪುರ ಗ್ರಾಮದಲ್ಲಿ ಸ್ವಚ್ಛತೆ ಕೊರತೆ ಮತ್ತು ಮರಳಿ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದಾಗಿ ಡೆಂಘೀ ಜ್ವರ ಬರಲು ಕಾರಣವಾಗಿದೆ. ಇಲ್ಲಿಯ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನಾದರೂ ಜಿಲ್ಲಾ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಯವರು ಗಮನ ಹರಿಸಬೇಕಾಗಿದೆ ಎಂದು ಶ್ರೀರಾಮನಗರ ಎಪಿಎಂಸಿ ನಿರ್ದೇಶಕ  ರೆಡ್ಡಿ ಶ್ರೀನಿವಾಸ ತಿಳಿಸಿದ್ದಾರೆ.

click me!