ಡೆಂಘೀಗೆ ಸುದ್ದಿವಾಹಿನಿ ಕ್ಯಾಮೆರಾಮನ್‌ ಬಲಿ!

By Web DeskFirst Published Jul 23, 2019, 9:02 AM IST
Highlights

ಡೆಂಘೀಗೆ ಸುದ್ದಿವಾಹಿನಿ ಕ್ಯಾಮೆರಾಮನ್‌ ಬಲಿ| ಕಳೆದೊಂದು ವಾರದಲ್ಲಿ ಮೂರು ಮಂದಿ ಬಲಿತೆಗೆದುಕೊಂಡ ಜ್ವರ

ಬೆಂಗಳೂರು[ಜು.23]: ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ಡೇಂಘಿ ಜ್ವರ ಉಲ್ಬಣಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಖಾಸಗಿ ವಾಹಿನಿ ಕ್ಯಾಮೆರಾಮನ್‌ವೊಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕಳೆದೊಂದು ವಾರದಲ್ಲಿ ಡೆಂಘೀಗೆ ಮೂರು ಮಂದಿ ಮಹಾಮಾರಿ ಜ್ವರಕ್ಕೆ ಬಲಿಯಾಗಿದ್ದಾರೆ.

ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಿ.ಟಿವಿ ಸುದ್ದಿವಾಹಿನಿಯ ಕ್ಯಾಮೆರಾಮನ್‌ ಆಗಿದ್ದ ನಾಗೇಶ್‌ ಪಡು (35) ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉಳಿದಂತೆ ಚಿತ್ರದುರ್ಗ ಮತ್ತು ರಾಮನಗರ ಜಿಲ್ಲೆಗಳಲ್ಲಿ ತಲಾ ಒಂದು ಸಾವು ಸಂಭವಿಸಿರುವ ಕುರಿತು ವರದಿಯಾಗಿದೆ.

ದೇಶಾದ್ಯಂತ ಅತೀ ಹೆಚ್ಚು ಡೆಂಘೀ ಪ್ರಕರಣಗಳು ಪತ್ತೆಯಾದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಯ ಪ್ರಕಾರ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಅತೀ ಹೆಚ್ಚು ಡೆಂಘೀ ಪ್ರಕರಣಗಳು ಕಾಣಿಸಿಕೊಂಡಿವೆ. ಸಮರ್ಪಕ ತ್ಯಾಜ್ಯ ವಿಲೇವಾರಿ ಇಲ್ಲದಿರುವುದು, ಅನಾವಶ್ಯಕ ನೀರಿನ ಸಂಗ್ರಹಣೆ ಮುಂತಾದ ಕಾರಣಗಳಿಂದ ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.

ಡೆಂಘೀ ಕಂಡು ಬಂದಿರುವ ಜಿಲ್ಲೆಗಳು: ಬೆಂಗಳೂರು 2,951, ದಕ್ಷಿಣ ಕನ್ನಡ 387, ಶಿವಮೊಗ್ಗ 206, ಕಲಬುರಗಿ 134, ಹಾವೇರಿ 126 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆರೋಗ್ಯ ಇಲಾಖೆ ಹೊರಡಿಸಿರುವ ವರದಿಯಲ್ಲಿ ತಿಳಿಸಿದೆ.

click me!