ಕೊಬ್ಬರಿಗೆ 20 ಸಾವಿರ ಬೆಂಬಲ ಬೆಲೆ ನೀಡಲು ಡಿಮ್ಯಾಂಡ್

By Kannadaprabha News  |  First Published Sep 6, 2023, 8:13 AM IST

ರಾಜ್ಯದಲ್ಲಿ ಬರಗಾಲದ ಸ್ಥಿತಿ ಇದ್ದರೂ ಅವೈಜ್ಞಾನಿಕವಾಗಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ವಿರೋಧಿಸಿ, ಕೊಬ್ಬರಿಗೆ ಕನಿಷ್ಠ ೨೦ ಸಾವಿರ ರೂ ಬೆಂಬಲ ಘೋಷಣೆಗೆ ಒತ್ತಾಯಿಸಿ, ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.


  ತುಮಕೂರು : ರಾಜ್ಯದಲ್ಲಿ ಬರಗಾಲದ ಸ್ಥಿತಿ ಇದ್ದರೂ ಅವೈಜ್ಞಾನಿಕವಾಗಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ವಿರೋಧಿಸಿ, ಕೊಬ್ಬರಿಗೆ ಕನಿಷ್ಠ ೨೦ ಸಾವಿರ ರೂ ಬೆಂಬಲ ಘೋಷಣೆಗೆ ಒತ್ತಾಯಿಸಿ, ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.

ಕರ್ನಾಟಕ ರಾಜ್ಯ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ಅವರ ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮನವಿ ಸಲ್ಲಿಸಿದರು.

Tap to resize

Latest Videos

ಈ ವೇಳೆ ಧರಣಿನಿರತ ರೈತಸಂಘದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದ ರಾಜು ಅವರು, ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ ಕಬಿನಿ, ಕಾವೇರಿ, ಹಾರಂಗಿ, ಹೇಮಾವತಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಪೂರ್ವ ಮುಂಗಾರು, ಮುಂಗಾರು ಮಳೆ ಕೈಕೊಟ್ಟು ಶೇ೯೮ರಷ್ಟು ಬೆಳೆ ನಷ್ಟವಾಗಿದೆ ಎಂದರು.

ಅಲ್ಲದೆ ಭವಿಷ್ಯದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗುವ ಸಾದ್ಯತೆ ಇದೆ ಎಂದು ಸರಕಾರದ ವರದಿಗಳೇ ಹೇಳುತ್ತಿದ್ದರೂ ಸರಕಾರ ಕಾವೇರಿ ನೀರಾವರಿ ನಿರ್ವಹಣಾ ಸಮಿತಿಯ ಆದೇಶಕ್ಕೆ ಮನ್ನಣೆ ನೀಡಿ, ಮಂಡ್ಯ , ಮೈಸೂರು, ಹಾಸನ, ರಾಮನಗರ, ಚಾಮರಾಜನಗರ, ತುಮಕೂರು ಜಿಲ್ಲೆಯ ರೈತರ ವಿರೋಧದ ನಡುವೆಯೂ ದಿನಕ್ಕೆ ೫ ಸಾವಿರ ಕ್ಯುಸೆಕ್ಸ್‌ ನೀರು ತಮಿಳುನಾಡಿಗೆ ಬಿಡುಗಡೆ ಮಾಡುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕೆಂಬುದು ರೈತರ ಆಗ್ರಹವಾಗಿದೆ ಎಂದರು.

ರಾಜ್ಯದಲ್ಲಿ ಈ ವರ್ಷ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದ ೧೩೬ ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದ್ದು, ಶೇ೬೦ರಷ್ಟು ಬೆಳೆ ನಷ್ಟವಾಗಿದೆ. ಸರಕಾರ ಈಗಾಗಲೇ ಬೆಳೆ ವೈಫಲ್ಯ ಸಮೀಕ್ಷೆ ಆರಂಭಿಸಿದೆ. ಹಾಗಾಗಿ ಸರಕಾರ ಕೂಡಲೇ ರಾಜ್ಯವನ್ನು ಬರಪೀಡಿತ ರಾಜ್ಯ ಎಂದು ಘೋಷಿಸುವುದರ ಜೊತೆಗೆ, ತುಮಕೂರು ಜಿಲ್ಲೆಯ ೧೦ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು. ಹಾಗೆಯೇ ಬೆಳೆ ಪರಿಹಾರ, ಗೋಶಾಲೆ ತೆರೆಯುವುದು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನರಿಗೆ ಉದ್ಯೋಗ ನೀಡುವ ಕೆಲಸ ಮಾಡಬೇಕೆಂದು ರೈತರ ಆಗ್ರಹವಾಗಿದೆ ಎಂದು ತಿಳಿಸಿದರು.

ತುಮಕೂರು ಜಿಲ್ಲೆಯ ಸುಮಾರು ೨.೨೫ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಕಳೆದ ವರ್ಷ ೧೯ ಸಾವಿರ ಕ್ವಿಂಟಾಲ್ ಇದ್ದ ಕೊಬ್ಬರಿ, ಇಂದು ೮೫೦೦ ರೂ ಇಳಿದಿದೆ. ಸರಕಾರವೇ ನೀಡಿದ ವರದಿಯ ಪ್ರಕಾರ ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು ೧೬೭೩೦ ರೂ ಖರ್ಚಾಗುತ್ತದೆ ಎಂದಿದ್ದರೂ ರೈತರಿಗೆ ನಿಗದಿತ ಬೆಲೆ ದೊರೆಯುತ್ತಿಲ್ಲ. ಡಾ.ಸ್ವಾಮಿನಾಥನ್ ವರದಿ ಅನ್ವಯ ಉತ್ಪಾಧನಾ ವೆಚ್ಚ ೫೦ ಸೇರಿದರೆ ಕನಿಷ್ಟ ೨೫ ಸಾವಿರ ನೀಡಬೇಕಾಗುತ್ತದೆ. ಕೇಂದ್ರ ಸರಕಾರ ಕೂಡಲೇ ವಿದೇಶಗಳಿಂದ ಕಡಿಮೆ ತೆರಿಗೆಯಲ್ಲಿ ಆಮದಾಗುತ್ತಿರುವ ತೆಂಗಿನ ಉತ್ಪನ್ನಗಳನ್ನು ತಡೆ ಹಿಡಿಯಬೇಕೆಂದು ಒತ್ತಾಯಿಸಿ ಅಕ್ಟೋಬರ್ ೦೨ ರಿಂದ ತಿಪಟೂರಿನಿಂದ ಬೆಂಗಳೂರುವರೆಗೆ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಈ ಸಂಬಂಧ ಮನವಿಯನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಗಳಿಗೆ ಜಿಲ್ಲಾಡಳಿತದ ಮೂಲಕ ಸಲ್ಲಿಸಲಾಯಿತು. ಧರಣಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಶಂಕರಪ್ಪ, ಯುವ ಅಧ್ಯಕ್ಷ ಚಿರತೆ ಚಿಕ್ಕಣ್ಣ, ಕಾರ್ಯದರ್ಶಿ ಜಗದೀಶ್, ಜಿಲ್ಲಾ ಮುಖಂಡರಾದ ಶಿವಕುಮಾರ್, ಕೆ.ಲೋಕೇಶ್, ಚಿಕ್ಕಬೋರೇಗೌಡ, ಪೂಜಾರಪ್ಪ, ಡಿ..ಆರ್.ರಾಜಶೇಖರ್, ಭಾಗ್ಯಮ್ಮ ರಂಗಹನುಮಯ್ಯ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

ಉಚಿತ ವಿದ್ಯುತ್‌ ಕೇಳಿರಲಿಲ್ಲ

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ದಿನದಲ್ಲಿ ಸುಮಾರು ೭ ಗಂಟೆ ವಿದ್ಯುತ್ ಕಡಿತ ಮಾಡುತಿದ್ದು, ಉಚಿತ ವಿದ್ಯುತ್ ಹೆಸರಿನಲ್ಲಿ ಜನರಿಗೆ, ಅದರಲ್ಲಿಯೂ ರೈತರಿಗೆ ಕನಿಷ್ಠ ೮ ಗಂಟೆಗಳ ಕಾಲ ಗುಣಮಟ್ಟದ ತ್ರೀ ಪೇಸ್ ವಿದ್ಯುತ್ ನೀಡಬೇಕೆಂಬುದು ರೈತರ ಬೇಡಿಕೆಯಾಗಿದೆ. ಯಾರು ಸರಕಾರದ ಮುಂದೆ ನಮ್ಮ ಮನೆಗೆ ಉಚಿತ ವಿದ್ಯುತ್ ನೀಡಿ ಎಂದು ಅರ್ಜಿ ಸಲ್ಲಿಸಿರಲಿಲ್ಲ. ಆದರೆ ಸರಕಾರ ಜನರ ಮತ ಪಡೆಯಲು ಭರವಸೆ ನೀಡಿ, ಎಡಗೈಯಲ್ಲಿ ಕೊಟ್ಟು ಬಲಗೈಯಲ್ಲಿ ಕಿತ್ತುಕೊಳ್ಳುತ್ತಿದೆ .ಈಗಾಗಲೇ ಮಳೆಯಿಂದ ಬೆಳೆ ಕಳೆದುಕೊಂಡಿರುವ ರೈತರು, ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಮತ್ತಷ್ಟು ಸಂಕಷ್ಟ ಎದುರಿಸುತಿದ್ದಾರೆ. ಹಾಗಾಗಿ ರೈತರಿಗೆ ಗುಣಮಟ್ಟದ ವಿದ್ಯುತ್ ನೀಡಿದರೆ ರೈತರು ಬದುಕುತ್ತಾರೆ ಎಂದರು.

click me!