ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕೊಡಗೀಹಳ್ಳಿ ಗ್ರಾಮ ಪಂಚಾಯ್ತಿಗೆ ಒಳಪಡುವ ಬಿ ಜಿ ಎಸ್ ಒಕ್ಕಲಿಗರ ಸಮುದಾಯ ಭವನದ ಬಳಿ ರಸ್ತೆಯನ್ನು ಒತ್ತುವರಿ ಮಾಡಿ ನಿರ್ಮಿಸಿದ್ದ ಕಟ್ಟಡವನ್ನು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್ ಮತ್ತು ಕೊಡಗೀಹಳ್ಳಿ ಗ್ರಾಮ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮೇಶ್ ರವರ ಸಮ್ಮುಖ ಒತ್ತುವರಿಯಾಗಿದ್ದ ಕಟ್ಟಡವನ್ನು ಜೆಸಿಬಿ ಸಹಾಯದಿಂದ ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ತುರುವೇಕೆರೆ: ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕೊಡಗೀಹಳ್ಳಿ ಗ್ರಾಮ ಪಂಚಾಯ್ತಿಗೆ ಒಳಪಡುವ ಬಿ ಜಿ ಎಸ್ ಒಕ್ಕಲಿಗರ ಸಮುದಾಯ ಭವನದ ಬಳಿ ರಸ್ತೆಯನ್ನು ಒತ್ತುವರಿ ಮಾಡಿ ನಿರ್ಮಿಸಿದ್ದ ಕಟ್ಟಡವನ್ನು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್ ಮತ್ತು ಕೊಡಗೀಹಳ್ಳಿ ಗ್ರಾಮ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮೇಶ್ ರವರ ಸಮ್ಮುಖ ಒತ್ತುವರಿಯಾಗಿದ್ದ ಕಟ್ಟಡವನ್ನು ಜೆಸಿಬಿ ಸಹಾಯದಿಂದ ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ವೆಂಕಟೇಶ್ ಮೂರ್ತಿ ಎಂಬುವರು ಯ ಜಾಗವನ್ನು ಸುಮಾರು ನಾಲ್ಕು ಅಡಿ ಒತ್ತುವರಿ ಮಾಡಿ ಮೂರು ಅಂತಸ್ತಿನವನ್ನು ನಿರ್ಮಾಣ ಮಾಡಿದ್ದರು. ಈ ಕಾಮಗಾರಿ ನಿರ್ಮಾಣದ ವಿರುದ್ಧ ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿಯಾಗಿದ್ದ ಕೋಳಾಲ ನಾಗರಾಜ್ ರವರು ಗ್ರಾಮ ಪಂಚಾಯ್ತಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮೀನಮೇಷ ಎಣಿಸಿದ್ದರು.
ರಸ್ತೆಯನ್ನು ಕಬಳಿಸಿ ಅಕ್ರಮವಾಗಿ ಕಟ್ಟಡ ಕಟ್ಟಿ ಐದಾರು ವರ್ಷಗಳೇ ಸಂದರೂ ಸಹ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲವೆಂದು ಆರೋಪಿಸಿ ಕೋಳಾಲ ನಾಗರಾಜ್ ರವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಸ್ಥಳ ಪರಿಶೀಲನೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ವೆಂಕಟೇಶ್ ಮೂರ್ತಿಯವರು ರಸ್ತೆಯನ್ನು ಒತ್ತುವರಿ ಮಾಡಿ ಕಟ್ಟಡ ಕಟ್ಟಿರುವುದು ಸತ್ಯವಾಗಿದೆ ಎಂದು ತಿಳಿದು ತಾಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಗ್ರಾಮ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನೋಟಸ್ ಜಾರಿ ಮಾಡಿದ್ದರು.
ಕೂಡಲೇ ಕಟ್ಟಡವನ್ನು ತೆರವು ಮಾಡದಿದ್ದಲ್ಲಿ ಕಾನೂನು ಕ್ರಮವನ್ನು ನಿಮ್ಮ ಮೇಲೆ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಜಾಗೃತಗೊಂಡ ತಾಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್ ಮತ್ತು ಕೊಡಗೀಹಳ್ಳಿ ಗ್ರಾಮ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮೇಶ್ ರವರು ಸ್ಥಳಕ್ಕೆ ಧಾವಿಸಿ ಕಟ್ಟಡದ ಮಾಲೀಕರಾದ ವೆಂಕಟೇಶ್ ಮೂರ್ತಿಯವರಿಗೆ ವಸ್ತುಸ್ಥಿತಿ ವಿವರಿಸಿ ಕಟ್ಟಡ ತೆರವುಗೊಳಿಸಲು ಸೂಚಿಸಿದರು.
ಕಟ್ಟಡದ ಮಾಲೀಕ ವೆಂಕಟೇಶ್ ಮೂರ್ತಿಯವರು ತಮ್ಮ ಜವಾಬ್ದಾರಿಯ ಮೇರೆಗೆ ಒತ್ತುವರಿ ಮಾಡಲಾಗಿದ್ದ ಕಟ್ಟಡವನ್ನು ತೆರವುಗೊಳಿಸಿದರು. ಈ ರಸ್ತೆಯನ್ನು ಹಲವಾರು ಮಂದಿ ಒತ್ತುವರಿ ಮಾಡಿಕೊಂಡಿದ್ದಾರೆ. ಕೇವಲ ನನ್ನನ್ನು ಮಾತ್ರ ತೆರವು ಮಾಡುವಂತೆ ಸೂಚಿಸಿರುವುದು ಸರಿಯಲ್ಲ. ಎಲ್ಲರಿಗೂ ಸಮಾನವಾಗಿ ಕಾನೂನನ್ನು ಕೈಗೆತ್ತಿಕೊಳ್ಳಬೇಕೆಂದು ಹೇಳಿದರು.
ಹಲವಾರು ಗ್ರಾಮಗಳಲ್ಲಿ ಹಲವಾರು ಮಂದಿ ಸರ್ಕಾರಿ ಜಮೀನುಗಳನ್ನು ಮತ್ತು ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡು ಅನುಭವಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದ್ದರಿಂದ ಕೂಡಲೇ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಬೇಕೆಂದು ಹೇಳಿರುವ ಇಒ ಸತೀಶ್ ಕುಮಾರ್ ರವರು ತಪ್ಪಿದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಮೂಲಕ ಸರ್ಕಾರಿ ಭೂಮಿಗಳನ್ನು ವಶಪಡಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.