ಗೂಡ್ಸ್‌ಶೆಡ್ ರೋಡ್ ಓಪನ್ ಮಾಡಿ, ಇಲ್ಲವಾದ್ರೆ ಈಡಿಗರ ಕಾಲೋನಿಯ ರಸ್ತೆ ತೆರೆಯಿರಿ; ಒತ್ತಾಯ

Published : Oct 31, 2026, 09:51 AM IST
Arasikere

ಸಾರಾಂಶ

ಅರಸೀಕೆರೆ ರೈಲ್ವೆ ನಿಲ್ದಾಣದ ಸಂಪರ್ಕ ರಸ್ತೆಯನ್ನು ಏಕಾಏಕಿ ಬಂದ್ ಮಾಡಿರುವುದರಿಂದ ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ. ಗೂಡ್ಸ್‌ಶೆಡ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು ಅಥವಾ ಈಡಿಗರ ಕಾಲೋನಿ ರಸ್ತೆ ತೆರೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬಸವರಾಜ್ ಶಾಂತಕುಮಾರ ಅರಸೀಕೆರೆ

ಹಾಸನ: ರೈಲ್ವೆ ಇಲಾಖೆಯ ಕಾಮಗಾರಿ ಹಿನ್ನೆಲೆಯಲ್ಲಿ ಅರಸೀಕೆರೆ ನಗರದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಯಾವುದೇ ಮುನ್ಸೂಚನೆ ಅಥವಾ ಸಮರ್ಪಕ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ರಸ್ತೆ ಬಂದ್ ಮಾಡಿರುವುದರಿಂದ ಪ್ರತಿನಿತ್ಯ ರೈಲು ಪ್ರಯಾಣಿಸುವ ನೂರಾರು ಪ್ರಯಾಣಿಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ತೊಂದರೆ ಅನುಭವಿಸುವಂತಾಗಿದೆ.

ರೈಲ್ವೆ ನಿಲ್ದಾಣಕ್ಕೆ ತೆರಳಲು ಗೂಡ್ಸ್‌ಶೆಡ್ ರಸ್ತೆ

ರೈಲ್ವೆ ನಿಲ್ದಾಣದ ಸಮೀಪ ಹಾಗೂ ಬಸವೇಶ್ವರ ವೃತ್ತದ ಬಳಿ ಪರ್ಯಾಯ ಮಾರ್ಗದ ಕುರಿತು ಸಣ್ಣ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆಯಾದರೂ, ಪ್ರಯಾಣಿಕರಿಗೆ ಸಮರ್ಪಕ ಮಾಹಿತಿ ನೀಡುವಲ್ಲಿ ರೈಲ್ವೆ ಇಲಾಖೆ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ. ರೈಲ್ವೆ ನಿಲ್ದಾಣಕ್ಕೆ ತೆರಳಲು ಗೂಡ್ಸ್‌ಶೆಡ್ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿದ್ದು, ಈ ಮಾರ್ಗದಲ್ಲಿ ಸಾರ್ವಜನಿಕರು ಹೆಚ್ಚುವರಿಯಾಗಿ ಸುಮಾರು 300ರಿಂದ 400 ಮೀಟರ್‌ ದೂರ ಕ್ರಮಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಅಲ್ಲದೆ, ಗೂಡ್ಸ್‌ಶೆಡ್ ರಸ್ತೆಯಲ್ಲಿ ಕಾರುಗಳು ಹಾಗೂ ಬೈಕ್‌ಗಳ ಸಂಚಾರಕ್ಕೆ ಸೂಕ್ತ ಅವಕಾಶವಿಲ್ಲದಿರುವುದು ಮತ್ತಷ್ಟು ಸಮಸ್ಯೆ ಉಂಟುಮಾಡಿದೆ. ವಿಶೇಷವಾಗಿ ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ತುರ್ತಾಗಿ ರೈಲು ಹಿಡಿಯಬೇಕಾದ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ನಿಲ್ದಾಣ ತಲುಪಲು ಪರದಾಡುವಂತಾಗಿದೆ. ಅರಸೀಕೆರೆ ರೈಲ್ವೆ ನಿಲ್ದಾಣವನ್ನು ಸುತ್ತಮುತ್ತಲಿನ ಗ್ರಾಮಗಳು ಹಾಗೂ ಹೋಬಳಿಗಳ ಸಾವಿರಾರು ಜನರು ಪ್ರತಿನಿತ್ಯ ಅವಲಂಬಿಸಿರುವುದರಿಂದ ಈ ಸಮಸ್ಯೆ ಗಂಭೀರ ಪರಿಣಾಮ ಬೀರುತ್ತಿದೆ.

ಪರ್ಯಾಯ ರಸ್ತೆ ವ್ಯವಸ್ಥೆ ಎಲ್ಲಿದೆ?

ರೈಲ್ವೆ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನವೇ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಬೇಕಾಗಿತ್ತು. ಆದರೆ, ಯಾವುದೇ ಸಮರ್ಪಕ ಯೋಜನೆ ರೂಪಿಸದೆ ಮುಖ್ಯ ರಸ್ತೆಯನ್ನು ಬಂದ್ ಮಾಡಿರುವುದು ಇಲಾಖೆಯ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ಗೂಡ್ಸ್‌ಶೆಡ್ ರಸ್ತೆಯಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಬೇಕು. ಇಲ್ಲವೇ ಈಡಿಗರ ಕಾಲೋನಿಯಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಂದ್ ಆಗಿರುವ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂಬುದು ಸ್ಥಳೀಯರ ಪ್ರಮುಖ ಒತ್ತಾಯವಾಗಿದೆ.

ಸಾರ್ವಜನಿಕರಿಗೆ ಅಗತ್ಯವಾದ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ನಂತರವೇ ಮುಖ್ಯ ರಸ್ತೆಯನ್ನು ಬಂದ್ ಮಾಡಬೇಕಿತ್ತು. ರೈಲ್ವೆ ಇಲಾಖೆಯ ಏಕಪಕ್ಷೀಯ ನಿರ್ಧಾರದಿಂದ ಪ್ರಯಾಣಿಕರು ಪ್ರತಿದಿನ ಸಂಕಷ್ಟ ಅನುಭವಿಸುವಂತಾಗಿದ್ದು, ಕೂಡಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದೀಗ ಸಾರ್ವಜನಿಕರ ಸಮಸ್ಯೆಗೆ ರೈಲ್ವೆ ಇಲಾಖೆ ಯಾವ ರೀತಿಯ ಪರಿಹಾರ ಕಲ್ಪಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

ಜಗನ್‌ ಹಠಕ್ಕೆ ಮಣಿದ ಶರ್ಮಿಳಾ; ಯಲಹಂಕ ಪ್ಯಾಲೇಸ್‌ನಲ್ಲಿ ಇಲ್ಲYSR ಮೊಮ್ಮಗಳ ಮದುವೆ!
ಪ್ರತಿಯೊಬ್ಬ ಕನ್ನಡಿಗನೂ ಇದನ್ನ ಓದಲೇಬೇಕು: ರಾಜಧಾನಿಯಲ್ಲೇ ಅಲ್ಪಸಂಖ್ಯಾತರಾಗುವತ್ತ ಕನ್ನಡಿಗರು!