
ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಕಸಬಾ ಹೋಬಳಿ ಗೋಪನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಪುರಾತನ ಕಾಲದ ಅಪರೂಪದ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು ಪತ್ತೆಯಾಗಿದ್ದವು.
ಗೋಪನಹಳ್ಳಿ ರಂಗಮ್ಮ ಕೋಂ ಅಜ್ಜಪ್ಪ ಎಂಬುವರ ಪಾಳುಬಿದ್ದ ಮನೆಯ ಜಾಗದಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಹಿತ್ತಾಳೆ ಮುಚ್ಚಳವಿದ್ದ ಚೆಂಬಿನಲ್ಲಿ ಈ ನಾಣ್ಯಗಳು ಸಿಕ್ಕಿದ್ದು, ಮಕ್ಕಳು ಅವುಗಳನ್ನು ಜಾಗದ ಮಾಲೀಕರಿಗೆ ಒಪ್ಪಿಸಿದ್ದಾರೆ.
ಸಾರ್ವಜನಿಕರು ನೀಡಿದ ಮಾಹಿತಿಯ ಮೇರೆಗೆ ಅ.26ರಂದು ಚಳ್ಳಕೆರೆ ತಹಸೀಲ್ದಾರ್, ಪೊಲೀಸ್ ನಿರೀಕ್ಷಕರು, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಅಕ್ಕಸಾಲಿಗರಲ್ಲಿ ತೂಕ ಮಾಡಿಸಿ ಪರಿಶೀಲಿಸಿದಾಗ ಒಟ್ಟು 26 ಪುರಾತನ ನಾಣ್ಯಗಳು ಇರುವುದು ದೃಢಪಟ್ಟಿದೆ. ಇದರಲ್ಲಿ 6 ಬೆಳ್ಳಿ ಹಾಗೂ 20 ತಾಮ್ರದ ನಾಣ್ಯಗಳಿವೆ. ಬೆಳ್ಳಿಯ ನಾಣ್ಯಗಳಲ್ಲಿ ಈಸ್ಟ್ ಇಂಡಿಯಾ ಕಂಪನಿಯ 1840ರ ಅವಧಿಯ 4 ನಾಣ್ಯಗಳು ಮತ್ತು 1857ರ ನಂತರದ ಬ್ರಿಟಿಷ್ ಇಂಡಿಯಾದ 2 ನಾಣ್ಯಗಳು 3 ಒಂದು ರುಪಾಯಿ ನಾಣ್ಯಗಳು, 2 ಅರ್ಧ ರುಪಾಯಿ ನಾಣ್ಯಗಳು ಹಾಗೂ 1 ಎರಡು ಆಣೆ ನಾಣ್ಯ ಸೇರಿವೆ. ಇವುಗಳನ್ನು ಕಲ್ಕತ್ತಾ ಮತ್ತು ಮದ್ರಾಸ್‍ಗಳಲ್ಲಿ ಟಂಕಿಸಲಾಗಿದೆ.
ತಾಮ್ರದ 20 ನಾಣ್ಯಗಳಲ್ಲಿ ಟಿಪ್ಪು ಸುಲ್ತಾನ್ ಕಾಲದ 19 ನಾಣ್ಯಗಳು ಶ್ರೀರಂಗಪಟ್ಟಣದಲ್ಲಿ ಮುದ್ರಿಸಲಾದ 8, ಶಿವಮೊಗ್ಗ ಜಿಲ್ಲೆಯ ನಗರದಲ್ಲಿ ಟಂಕಿಸಲಾದ 9, ಕೇರಳದ ಫರೂಕ್ ಹಾಗೂ ಆಂಧ್ರದ ಗುತ್ತಿಯಲ್ಲಿ ಟಂಕಿಸಲಾದ ತಲಾ 1 ನಾಣ್ಯ ಮತ್ತು ಮೈಸೂರು ಒಡೆಯರ್ ಆಡಳಿತಾವಧಿಯ 20 ಕಾಸಿನ 1 ನಾಣ್ಯ ಸೇರಿವೆ.
ಅ.28ರಂದು ತಹಸೀಲ್ದಾರ್ ಕಚೇರಿಯ ಶಿರಸೇದಾರ್ ಅವರಿಂದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಹ್ಲಾದ್ ಜಿ. ಅವರು ಈ ನಾಣ್ಯಗಳು ಹಾಗೂ ಹಿತ್ತಾಳೆ ಚೆಂಬಿನ ಮುಚ್ಚಳವನ್ನು ಹಸ್ತಾಂತರಿಸಿಕೊಂಡಿದ್ದಾರೆ.
ಸಿಕ್ಕಿರುವ ನಾಣ್ಯಗಳನ್ನು ಚಿತ್ರದುರ್ಗದ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗಿದ್ದು, ಇವುಗಳ ಕುರಿತು ಮತ್ತಷ್ಟು ಸುದೀರ್ಘ ಅಧ್ಯಯನ ನಡೆಸಿ ಮುಂದಿನ ದಿನಗಳಲ್ಲಿ ಇತಿಹಾಸ ಆಸಕ್ತರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳ ಮಾಹಿತಿಗಾಗಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು ಎಂದು ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಈ ನಾಣ್ಯಗಳ ಪರಿಶೀಲನೆಯಲ್ಲಿ ಸಹಕರಿಸಿದ ಹವ್ಯಾಸಿ ನಾಣ್ಯ ಸಂಶೋಧಕರಾದ ಬಿ.ಕೆ. ಇರ್ಫಾನುಲ್ಲಾ ಹಾಗೂ ಶಿವಶಂಕರ್ ಅವರಿಗೆ ಪುರಾತತ್ವ ಇಲಾಖೆ ಅಭಿನಂದನೆ ಸಲ್ಲಿಸಿದೆ.