ಪಡಿತರ ವ್ಯವಸ್ಥೆಯಲ್ಲಿ ಸಕ್ಕರೆ ಬದಲು ಬೆಲ್ಲ..?

By Kannadaprabha NewsFirst Published Jan 27, 2021, 11:15 AM IST
Highlights

ನ್ಯಾಯ ಬೆಲೆ ಅಂಗಡಿಯಲ್ಲಿ ಅಕ್ಕಿಯ ಜೊತೆಗೆ ಸಕ್ಕರೆಯನ್ನು ನೀಡಲಾಗುತಿತ್ತು. ಆದರೆ ಈಗ ಸಕ್ಕರೆ ಬದಲಿಗೆ ಸಿಗಲಿದೆಯಾ ಬೆಲ್ಲ..?

  ಮಂಡ್ಯ (ಜ.27):  ಮುಂಬರುವ ಬಜೆಟ್‌ನಲ್ಲಿ ಪಡಿತರ ಆಹಾರ ಪದಾರ್ಥಗಳ ವಿತರಣೆಯಲ್ಲಿ ಬೆಲ್ಲ ನೀಡುವುದಕ್ಕೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಜಿಲ್ಲೆಯ ಆಲೆಮನೆ ಮಾಲಿಕರು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರನ್ನು ಒತ್ತಾಯಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅಧ್ಯಕ್ಷತೆಯಲ್ಲಿ ಆತ್ಮನಿರ್ಭರ ಭಾರತ ಅಭಿಯಾನದಡಿ ಮಂಡ್ಯ ಜಿಲ್ಲೆಯ ಆಲೆಮನೆಗಳ ಪುನಶ್ಚೇತನ ಕೈಗೊಳ್ಳುವ ಸಂಬಂಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಯಿತು.

ಪಡಿತರ ಕೆವೈಸಿ ದೃಢೀಕರಣವಿಲ್ಲದೆ ಸರ್ಕಾರಕ್ಕೆ ನಷ್ಟ ..

ಈಗಾಗಲೇ ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಪಡಿತರ ವ್ಯವಸ್ಥೆಯೊಳಗೆ ಬೆಲ್ಲ ನೀಡುವುದನ್ನು ಜಾರಿಗೆ ತಂದಿವೆ. ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಪಡಿತರದಾರರಿಗೆ ಬೆಲ್ಲ ನೀಡುವುದಕ್ಕೆ ಸರ್ಕಾರ ನಿರ್ಧಾರ ಕೈಗೊಂಡರೆ ಆಲೆಮನೆಗಳು ಬದುಕುಳಿಯುತ್ತವೆ ಎಂಬ ಅಭಿಪ್ರಾಯ ಮಂಡಿಸಿದರು.

ರಾಸಾಯನಿಕ ನಿಷೇಧಿಸಿ:

ಬೆಲ್ಲ ತಯಾರಿಕೆಯಲ್ಲಿ ಉಪಯೋಗಿಸುವ ರಾಸಾಯನಿಕವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಬೆಲ್ಲದ ಗುಣಮಟ್ಟಹೆಚ್ಚಳಕ್ಕೆ ಪ್ರಾಮುಖ್ಯತೆ ನೀಡಿ ಹೊಸ ಬ್ರಾಂಡ್‌ ಸೃಷ್ಟಿಯಾಗುವಂತೆ ಮಾಡುವುದು ಅನಿವಾರ್ಯವಾಗಿದೆ. ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಗುಣಮಟ್ಟದ ಬೆಲ್ಲ ತಯಾರಿಸುವಂತಾದರೆ ಮಂಡ್ಯ ಬೆಲ್ಲಕ್ಕೆ ಮತ್ತೆ ಗತ ವೈಭವ ಸೃಷ್ಟಿಸಿಕೊಡಬಹುದು ಎಂದು ವಿಶ್ವಾಸದಿಂದ ಹೇಳಿದರು.

ಬೆಲ್ಲ ಉತ್ಪಾದಕ ಹಾಡ್ಯ ರಮೇಶ್‌ರಾಜು ಮಾತನಾಡಿ, ಯಾವುದೇ ರಾಸಾಯನಿಕ ಉಪಯೋಗಿಸದೆ ಕಬ್ಬಿನ ರಸದಿಂದ ಬೆಲ್ಲ ತಯಾರಾಗಬೇಕು. ಸಕ್ಕರೆಯನ್ನು ಬೆರೆಸಿ ಬೆಲ್ಲವನ್ನು ತಯಾರು ಮಾಡಲಾಗುತ್ತಿದೆ. ಇದರಿಂದ ಗುಣಮಟ್ಟಹಾಳಾಗುತ್ತಿದೆ. ಇದರಿಂದಾಗಿ ದೇಶದ ವಿವಿಧ ರಾಜ್ಯಗಳು ಮಂಡ್ಯ ಬೆಲ್ಲದ ಮೇಲೆ ನಿಷೇಧ ಹೇರಿವೆ. ಅದಕ್ಕಾಗಿ ಮೌಲ್ಯಾಧಾರಿತ ಉತ್ಪನ್ನವಾಗಿ ಬೆಲ್ಲವನ್ನು ಉತ್ಪಾದಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಲ್ಲದ ಜ್ಞಾನಕೇಂದ್ರ ತೆರೆಯಿರಿ: ವಿಕಸನ ಸಂಸ್ಥೆಯ ಮಹೇಶ್‌ಚಂದ್ರ ಗುರು ಮಾತನಾಡಿ, ಬೆಲ್ಲ ತಯಾರಿಸುವವರಿಗೆ ತಂತ್ರಜ್ಞಾನದ ತಿಳಿವಳಿಕೆ ಕೊರತೆ ಇದೆ. ಅದಕ್ಕಾಗಿ ಬೆಲ್ಲದ ಮೇಲೆ ಅಧ್ಯಯನ, ಸಂಶೋಧನೆ, ತರಬೇತಿ ನೀಡುವ ತಂತ್ರಜ್ಞಾನ ಪಾರ್ಕ್ ತೆರೆದು ಅಲ್ಲಿ ಜ್ಞಾನಕೇಂದ್ರವನ್ನು ಸ್ಥಾಪಿಸಬೇಕು. ಇಲ್ಲದಿದ್ದರೆ ಬೆಲ್ಲದ ಉದ್ಯಮವನ್ನು ರೈತರ ಉದ್ದಿಮೆಯನ್ನಾಗಿ ಪರಿವರ್ತಿಸಲಾಗದು. ಕೌಶಲ್ಯ ತರಬೇತಿ ನೀಡಿ ಉದ್ಯೋಗವನ್ನು ಸೃಷ್ಟಿಸಬಹುದು. ವಲಸೆಯನ್ನು ತಪ್ಪಿಸಬಹುದು. ಯುವಕರು-ಯುವತಿಯುರು ಬೆಲ್ಲ ತಯಾರಿಕೆಯನ್ನು ಸ್ವಯಂ ಉದ್ಯೋಗವಾಗಿ ರೂಪಿಸಿಕೊಂಡು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಆಲೆಮನೆಗಳಲ್ಲಿ ತಯಾರಾಗುವ ಕಬ್ಬಿನ ರಚ್ಚು ಸೇರಿದಂತೆ ಇತರೆ ಕಚ್ಛಾ ವಸ್ತುಗಳಿಂದ ಉಪ ಉತ್ಪನ್ನಗಳನ್ನು ತಯಾರಿಸಲು ಅವಕಾಶಗಳಿವೆ. ಅದರ ಜ್ಞಾನ ಮತ್ತು ತಿಳಿವಳಿಕೆ ಕೊರತೆ, ಕೂಲಿ ಕಾರ್ಮಿಕರ ಕೊರತೆ ಇದೆ. ಬೆಲ್ಲದ ಉದ್ಯಮದೊಳಗಿರುವ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಯಶಸ್ವಿ ಉದ್ಯಮಿಯಾಗಿ ರೂಪುಗೊಳ್ಳಬಹುದು ಎಂದು ಸಭೆಯಲ್ಲಿದ್ದ ಆಲೆಮನೆ ಮಾಲಿಕರು ಅಭಿಪ್ರಾಯ ಮಂಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸಂಸದೆ ಸುಮಲತಾ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಜಿಪಂ ಸಿಇಒ ಜುಲ್ಫಿಖಾರ್‌ ಉಲ್ಲಾ, ಶಾಸಕ ಎಂ.ಶ್ರೀನಿವಾಸ್‌, ಎಂಎಲ್ಸಿಗಳಾದ ಕೆ.ಟಿ.ಶ್ರೀಕಂಠೇಗೌಡ, ಎನ್‌.ಅಪ್ಪಾಜಿಗೌಡ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸಿ.ಪಿ.ಉಮೇಶ್‌, ಅಪರ ಜಿಲ್ಲಾಧಿಕಾರಿ ವಿ.ಆರ್‌.ಶೈಲಜಾ, ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್‌ ಇತರರಿದ್ದರು.

click me!