ನನ್ನ ಮೇಲೆ ಮಾಡಿರುವ ಎಲ್ಲ ಆರೋಪಗಳು ಮೇಲೆ ಸುಳ್ಳಾಗಿದ್ದು, ನಾನು ಲೋಕೇಶ್ ಮುಚ್ಚೂರು ನಿರ್ದೇಶಿಸಲು ಉದ್ದೇಶಿಸಿದ ಕಂಬಳ ಸಿನಿಮಾದಲ್ಲಿ ನಟಿಸಲು ಒಪ್ಪದೇ ಇದ್ದುದಕ್ಕೆ ಪ್ರತೀಕಾರವಾಗಿ ಈ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ
ಮಂಗಳೂರು (ಜು.24): ಕಂಬಳ ಓಟಗಾರನಾಗಿರುವ ನನ್ನನ್ನು ಕಂಬಳ ಸಮಿತಿ ಸದಸ್ಯ ಲೋಕೇಶ್ ಶೆಟ್ಟಿಮುಚ್ಚೂರು ತೇಜೋವಧೆ ಮಾಡುತ್ತಿದ್ದಾರೆ. ಇದರಿಂದ ಮನನೊಂದು ನಾನು ಮಾನನಷ್ಟಮೊಕದ್ದಮೆ ಹೂಡುತ್ತಿರುವುದಾಗಿ ಕಂಬಳದ ‘ಉಸೇನ್ ಬೋಲ್ಟ್’ ಖ್ಯಾತಿಯ ಓಟಗಾರ ಶ್ರೀನಿವಾಸ ಗೌಡ ಹೇಳಿದ್ದಾರೆ. ಮಂಗಳೂರಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಮೇಲೆ ಮಾಡಿರುವ ಎಲ್ಲ ಆರೋಪಗಳು ಸುಳ್ಳಾಗಿದ್ದು, ನಾನು ಲೋಕೇಶ್ ಮುಚ್ಚೂರು ನಿರ್ದೇಶಿಸಲು ಉದ್ದೇಶಿಸಿದ ಕಂಬಳ ಸಿನಿಮಾದಲ್ಲಿ ನಟಿಸಲು ಒಪ್ಪದೇ ಇದ್ದುದಕ್ಕೆ ಪ್ರತೀಕಾರವಾಗಿ ಈ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಂಬಳದ 'ಉಸೇನ್ ಬೋಲ್ಟ್' ವಿವಾದಕ್ಕೆ ಕಾರಣವಾಯ್ತಾ ರಾಜೇಂದ್ರ ಸಿಂಗ್ ಬಾಬು ಸಿನಿಮಾ
ಕಂಬಳ ಅಕಾಡೆಮಿಯಲ್ಲಿ 2011ರಲ್ಲಿ ನಾನು ತರಬೇತಿ ಪಡೆದು ಕಂಬಳ ಕೂಟಗಳಲ್ಲಿ ಕೋಣಗಳನ್ನು ಓಡಿಸಿ ಈವರೆಗೆ ಹಲವಾರು ಬಹುಮಾನಗಳನ್ನು ಪಡೆದುಕೊಂಡಿದ್ದೇನೆ. ರಾಜ್ಯ ಸರ್ಕಾರ ಕೂಡ ನನ್ನನ್ನು ಗುರುತಿ 1 ಲಕ್ಷ ರು. ನಗದಿನೊಂದಿಗೆ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಕಾರ್ಮಿಕ ಇಲಾಖೆಯಿಂದಲೂ 3 ಲಕ್ಷ ರು. ನಗದು ಸೇರಿದಂತೆ ಗೌರವ ದೊರೆತಿದೆ. ನಾನು ಸಿಕ್ಕಸಿಕ್ಕ ಕಡೆಗಳಲ್ಲಿ ಹಣ ಸಂಗ್ರಹ ಮಾಡಿಲ್ಲ. ಇವೆಲ್ಲದನ್ನು ಸಹಿಸಲಾಗದ ಮಂದಿ ತನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಇದರಿಂದ ನೊಂದಿದ್ದು, ಶನಿವಾರ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಮಾನನಷ್ಟಮೊಕದ್ದಮೆ ಹೂಡುತ್ತಿದ್ದೇನೆ ಎಂದರು.
ಲೋಕೇಶ್ ಶೆಟ್ಟಿಯವರು 2020ರಲ್ಲಿ ಕಂಬಳ ಕುರಿತಾಗಿ ಸಿನಿಮಾ ಮಾಡುತ್ತೇನೆ ಎಂದಿದ್ದು, ನನ್ನನ್ನು ಪಾತ್ರ ಮಾಡಲು ಕೇಳಿಕೊಂಡಿದ್ದರು. ಆದರೆ ಅವರ ಚಟುವಟಿಕೆಗಳ ಬಗ್ಗೆ ನನಗೆ ಮೊದಲೇ ಗೊತ್ತಿದ್ದುದರಿಂದ ನಾನು ಪಾತ್ರ ಮಾಡಲು ಒಪ್ಪಿರಲಿಲ್ಲ. ನನ್ನ ವಿರೋಧ ಇದ್ದರೂ 2020ರ ಫೆ.20ರಂದು ಪತ್ರಿಕೆಗಳಲ್ಲಿ ನನ್ನ ಭಾವಚಿತ್ರ ಸಹಿತ ಸಿನಿಮಾ ಹೊರತರುವ ಕುರಿತಂತೆ ಹೇಳಿಕೆ ನೀಡಿದ್ದರು. ಬಳಿಕ ಪದೇ ಪದೇ ಕಿರುಕುಳ ನೀಡುತ್ತಿದ್ದರು. ನಮ್ಮ ಜಾತಿಯವರನ್ನು ಕೀಳಾಗಿ ಕಾಣುತ್ತಿದ್ದರು. ಇದಕ್ಕಾಗಿ ನಾನು ರಾಜೇಂದ್ರ ಸಿಂಗ್ ಬಾಬು ಅವರ ಜತೆ ವೀರ ಕಂಬಳ ಸಿನಿಮಾ ಮಾಡಿದ್ದೇನೆ. ಲೇಸರ್ ಬೀಮ್ ತಂತ್ರಜ್ಞಾನ ಜತೆ ಓಟದ ವಿಡಿಯೋ ರೆಕಾರ್ಡ್ ಆಗುತ್ತದೆ. ಹೀಗಾಗಿ ಓಟವನ್ನು ನಕಲಿ ಎಂದು ಹೇಳಲಾಗದು ಎಂದರು.
ಶ್ರೀನಿವಾಸ್ ಗೌಡ ವಿರುದ್ಧ ದೂರು: ಕಂಬಳ ಸಮಿತಿ ಹೇಳೋದೇನು?
ಕಂಬಳ ಕ್ಷೇತ್ರದಲ್ಲಿ ನನಗಿರುವ ಹೆಸರನ್ನು ಹಾಳು ಮಾಡುವ ಎಲ್ಲ ಪ್ರಯತ್ನ ಮಾಡಿದ್ದಾರೆ. ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿದ್ದಾರೆ. ನನ್ನ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ನ್ಯಾಯಕ್ಕಾಗಿ ಮಾನನಷ್ಟಮೊಕದ್ದಮೆ ಅನಿವಾರ್ಯವಾಗಿದೆ ಎಂದರು.
ಕಂಬಳದ ಪ್ರಮುಖರಾದ ರಶ್ಮಿತ್ ಶೆಟ್ಟಿಮಾತನಾಡಿ, ಬಡ ಕುಟುಂಬದಿಂದ ಬಂದ ಓರ್ವ ಕಂಬಳ ಪ್ರೇಮಿ ಓಟಗಾರನಿಗೆ ಈ ರೀತಿಯ ಅನ್ಯಾಯ ಆಗಲು ಬಿಡುವುದಿಲ್ಲ. ಶೀಘ್ರವೇ ಕಂಬಳ ಸಮಿತಿಯ ಸಭೆ ಕರೆಯಲು ಒತ್ತಾಯಿಸಲಾಗುವುದು. ಸಭೆಯಲ್ಲಿ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲು ಸೂಚಿಸುವುದಾಗಿ ತಿಳಿಸಿದರು.
2020ರ ಜನವರಿ 2ರಂದು ಐಕಳ ಕಂಬಳದಲ್ಲಿ ಕೋಣಗಳನ್ನು ಓಡಿಸಿ 9.55 ಸೆಕೆಂಡ್‌ಗಳಲ್ಲಿ ನಾನು ಓಡಿ ಗುರಿ ತಲುಪಿದ್ದೆ ಎಂದರು. ಕಂಬಳದ ಪ್ರಮುಖರಾದ ಹರ್ಷವರ್ಧನ ಪಡಿವಾಳ್, ಶಕ್ತಿಪ್ರಸಾದ್ ಶೆಟ್ಟಿ, ಸಚಿನ್ ಅಡಪ ಇದ್ದರು.
ಕಂಬಳದಲ್ಲಿ ನನ್ನ ಕೆಲಸ ಕೋಣಗಳನ್ನು ಓಡಿಸುವುದು ಮಾತ್ರ. ಕಂಬಳದಲ್ಲಿ ತೀರ್ಪುಗಾರರ ತೀರ್ಪು ಅಂತಿಮ. ಹಾಗಾಗಿ ತೀರ್ಪುಗಾರರ ತೀರ್ಪಿಗೂ ನನಗೂ ಯಾವುದೇ ಸಂಬಂಧ ಇರುವುದಿಲ್ಲ. ಅಲ್ಲದೆ ಕಂಬಳ ಅಕಾಡೆಮಿಯಿಂದಲೂ ನಾನು ಯಾವುದೇ ಹಣ ಪಡೆದುಕೊಂಡಿಲ್ಲ. ನನ್ನ ಸಾಧನೆಯಲ್ಲಿ ಕೋಣಗಳ ಪಾತ್ರವೂ ಇದೆ. ಅದು ಓಡಿದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ನನಗೆ ಸಿಕ್ಕಿದ ಗೌರವ ಮೊತ್ತವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿದ್ದೇನೆ.
-ಶ್ರೀನಿವಾಸ ಗೌಡ, ಕಂಬಳದ ಉಸೇನ್ ಬೋಲ್ಟ್